Advertisement

ವಿಮಾನ ನಿಲ್ದಾಣ ಶೀಘ್ರ ಲೋಕಾರ್ಪಣೆ

05:45 PM Apr 21, 2022 | Niyatha Bhat |

ಶಿವಮೊಗ್ಗ: ನಗರ ಸಮೀಪದ ಸೋಗಾನೆಯಲ್ಲಿ ಭರದಿಂದ ನಿರ್ಮಾಣಗೊಳ್ಳುತ್ತಿರುವ ಅಂತಾರಾಷ್ಟ್ರೀಯ ಸ್ಥರದ ವಿಮಾನ ನಿಲ್ದಾಣ ರಾಜ್ಯದ ಎರಡನೇ ಅತಿದೊಡ್ಡ ವಿಮಾನ ನಿಲ್ದಾಣವಾಗಲಿದ್ದು, ಶೀಘ್ರ ಲೋಕಾರ್ಪಣೆಗೊಳ್ಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಬುಧವಾರ ವಿಮಾನ ನಿಲ್ದಾಣ ಕಾಮಗಾರಿಗಳ ಪ್ರಗತಿ ಪರಿವೀಕ್ಷಣೆ ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳಿಗೆ ಈ ಬಗ್ಗೆ ಅವರು ವಿವರ ನೀಡಿದರು.

ಶಿವಮೊಗ್ಗ ಸೇರಿದಂತೆ ನೆರೆಯ ಜಿಲ್ಲೆಗಳ ಸರ್ವಾಂಗೀಣ ವಿಕಾಸಕ್ಕೆ, ಕೈಗಾರಿಕೆ ಮತ್ತು ಪ್ರವಾಸೋದ್ಯಮ ಕ್ಷೇತ್ರದ ವಿಕಾಸಕ್ಕೆ ವಿಮಾನ ನಿಲ್ದಾಣದ ಅಗತ್ಯವಿದ್ದು, ಉದ್ದೇಶಿತ ವಿಮಾನ ನಿಲ್ದಾಣಕ್ಕೆ ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯ ಒದಗಿಸಲಾಗುವುದು. ದೂರದೃಷ್ಟಿ ಹೊಂದಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ದಶಕಗಳ ಹಿಂದೆಯೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಕಲ್ಪ ಮಾಡಿ ನಿಲ್ದಾಣ ಕಾಮಗಾರಿಗೆ ಮುನ್ನುಡಿ ಬರೆದಿದ್ದರು. ಅವರ ಕನಸಿನ ಕೂಸಾದ ಈ ನಿಲ್ದಾಣವನ್ನು ಶೀಘ್ರ ಲೋಕಾರ್ಪಣೆ ಮಾಡಲಾಗುವುದು ಎಂದರು.

ವಿಮಾನ ನಿಲ್ದಾಣ ಆರಂಭದಿಂದಾಗಿ ಕೈಗಾರಿಕಾ ಕ್ಷೇತ್ರದ ವಿಕಾಸಕ್ಕೆ ಅವಕಾಶಗಳು ಹೆಚ್ಚಾಗಲಿವೆ. ಅಲ್ಲದೇ ವಾಣಿಜ್ಯ, ಶಿಕ್ಷಣ, ಆರೋಗ್ಯ ಸೇರಿದಂತೆ ಹಲವು ಮಹತ್ವದ ಕ್ಷೇತ್ರಗಳ ಅಭಿವೃದ್ಧಿ ಸಾಧ್ಯವಾಗಲಿದೆ. ಅಲ್ಲದೇ ಸಮಯ ಮತ್ತು ಹಣ ನಿರ್ವಹಣೆಗೆ ಅನುಕೂಲವಾಗಲಿದೆ. ಪ್ರಸ್ತುತ ಶಿವಮೊಗ್ಗ, ರಾಯಚೂರು, ವಿಜಯಪುರ ವಿಮಾನ ನಿಲ್ದಾಣ ನಿರ್ಮಾಣ ಕಾರ್ಯ ಪ್ರಗತಿಯಲ್ಲಿವೆ. ಕಾರವಾರ ಬಂದರು ಕಾಮಗಾರಿಯೂ ಪ್ರಗತಿಯಲ್ಲಿದೆ ಎಂದರು.

ಸಹ್ಯಾದ್ರಿ ತಪ್ಪಲಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಕ್ಷೇತ್ರದ ವಿಕಾಸಕ್ಕೆ ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದು. ಅಂತಹ ಕಾರ್ಯವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿಮಾನ ನಿಲ್ದಾಣವನ್ನು ಶೀಘ್ರದಲ್ಲಿ ಲೋಕಾರ್ಪಣೆ ಮಾಡಲಾಗುವುದು. ಪ್ರಸ್ತುತ ವಿಮಾನಗಳ ರಾತ್ರಿ ಸಂಚಾರಕ್ಕೂ ಅನುಕೂಲವಾಗುವಂತೆ ನಿಲ್ದಾಣ ಅಭಿವೃಪಡಿಸಲಾಗುವುದು. ನಿಲ್ದಾಣದ ಅಂಚಿನಲ್ಲಿ ಸಂಚಾರಕ್ಕೆ ರಸ್ತೆ ಮತ್ತು ವಿಮಾನ ನಿಲ್ದಾಣದ ಹೊರಗೆ ರೈತರ ಹೊಲ-ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲು ರಸ್ತೆ ಸಂಪರ್ಕ ಕಲ್ಪಿಸಿಕೊಡಲಾಗುವುದು. ಅದಕ್ಕಾಗಿ ಹೆಚ್ಚುವರಿಯಾಗಿ ಬೇಕಾಗುವ 40-50ಕೋಟಿ ರೂ.ಗಳ ಅನುದಾನವನ್ನು ಸರ್ಕಾರದಿಂದ ಬಿಡುಗಡೆ ಮಾಡಲಾಗುವುದು. ಶಿವಮೊಗ್ಗ ನಗರದ ಎಂ.ಆರ್.ಎಸ್‌. ನಿಂದ ನಿಲ್ದಾಣದವರೆಗೆ ಅಂತಾರಾಷ್ಟ್ರೀಯ ಮಟ್ಟದ ಸಂಪರ್ಕ ರಸ್ತೆಯನ್ನು ನಿರ್ಮಿಸಲು ಸೂಚಿಸಲಾಗುವುದು. ಏರ್‌ಬಸ್‌ಗಳು ಏರಿಳಿಯಲಿರುವ ಈ ವಿಮಾನ ನಿಲ್ದಾಣದ ನಿರ್ಮಾಣ ಕಾರ್ಯಕ್ಕೆ ಭೂಮಿಯನ್ನು ಒದಗಿಸಿದ ರೈತರಿಗೆ ಪರಿಹಾರ ಧನ ಒದಗಿಸಲಾಗುವುದು ಎಂದರು.

Advertisement

ಜೋಗ-ಜಲಪಾತದ ಸರ್ವಾಂಗೀಣ ವಿಕಾಸಕ್ಕೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದ ಅವರು ಜೋಗವನ್ನು ವರ್ಷದ ಎಲ್ಲಾ ಋತುಗಳಲ್ಲೂ ಪ್ರವಾಸಿಗರು ಸಂಪರ್ಕಿಸುವಂತೆ ಜೋಗವನ್ನು ಆಕರ್ಷಕವಾಗಿ ಅಭಿವೃದ್ಧಿಪಡಿಸಲಾಗುವುದು ಅದಕ್ಕಾಗಿ ಸರ್ಕಾರ ಈಗಾಗಲೆ 300ಕೋಟಿ ರೂ.ಗಳ ಅನುದಾನ ನೀಡಿದೆ ಎಂದರು.

ಕೇಂದ್ರ ಸರ್ಕಾರದೊಂದಿಗೆ ಒಡಂಬಡಿಕೆ ಮಾಡಿಕೊಂಡ ಪ್ರಯುಕ್ತ ರಾಜ್ಯಕ್ಕೆ 8 ರೈಲ್ವೇ ಯೋಜನೆಗಳು ಮಂಜೂರಾಗಿವೆ. ಅದರಲ್ಲಿ ಶಿವಮೊಗ್ಗ – ರಾಣೇಬೆನ್ನೂರು ರೈಲ್ವೇ ಮಾರ್ಗವೂ ಒಂದಾಗಿದೆ. 3500 ಕಿ.ಮೀ. ರಾಜ್ಯ ಹೆದ್ದಾರಿಗೆ ಅನುಮೋದನೆ ನೀಡಲಾಗಿದೆ. ಅಲ್ಲದೇ ಕೇಂದ್ರ ಸರ್ಕಾರವು ಕಳೆದ 2ವರ್ಷಗಳ ಅವಧಿಯಲ್ಲಿ 6 ಸಾವಿರ ಕಿ.ಮೀ. ರಾಷ್ಟ್ರೀಯ ಹೆದ್ದಾರಿಗೆ ಅನುಮೋದನೆ ನೀಡಿದೆ. ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ವರ್ತುಲ ರಸ್ತೆ ನಿರ್ಮಾಣಕ್ಕೂ ಕೇಂದ್ರದೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಅಲ್ಲದೇ ರೈಲ್ವೇ ಮೇಲ್ಸೇತುವೆಗಳ ನಿರ್ಮಾಣ ಕಾರ್ಯಗಳನ್ನು ಇದೇ ಸಂದರ್ಭದಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ಸಂಸದ ಬಿ.ವೈ. ರಾಘವೇಂದ್ರ, ಸಚಿವರಾದ ಭೆ„ರತಿ ಬಸವರಾಜ, ಗೃಹಸಚಿವ ಆರಗಜ್ಞಾನೇಂದ್ರ, ಶಾಸಕ ಕೆ.ಬಿ. ಅಶೋಕನಾಯ್ಕ, ಹರತಾಳು ಹಾಲಪ್ಪ, ಮೇಯರ್‌ ಸುನಿತಾ ಅಣ್ಣಪ್ಪ, ಎಂ.ಎ.ಡಿ.ಬಿ. ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಎಸ್‌.ದತ್ತಾತ್ರಿ, ಪವಿತ್ರಾ ರಾಮಯ್ಯ, ಜ್ಯೋತಿಪ್ರಕಾಶ್‌, ಜಿಲ್ಲಾಧಿಕಾರಿ ಡಾ|ಆರ್‌.ಸೆಲ್ವಮಣಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಲ್‌.ವೈಶಾಲಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್‌ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next