Advertisement

ಶುದ್ಧ ಹಸ್ತ ಆಡಳಿತದಿಂದ ಸಿಗಲಿದೆ ಗೌರವ: ಶಂಕರಪ್ಪ

06:21 PM Apr 22, 2021 | Shreeraj Acharya |

ಸಾಗರ: ಸಂಘ, ಸಂಸ್ಥೆಗಳಲ್ಲಿ ಆಡಳಿತದ ಚುಕ್ಕಾಣಿ ಹಿಡಿದವರು ಶುದ್ಧ ಹಸ್ತದವರಾಗಿದ್ದರೆ ಅವರಿಗೆ ಎಲ್ಲ ಗೌರವ ಸಲ್ಲುತ್ತದೆ. ಪರಿಷತ್ತಿಗಾಗಿ ನಾನು ಹಣ ಖರ್ಚು ಮಾಡಿದ್ದೇನೆಯೇ ಹೊರತು ಈ ಸಂಸ್ಥೆಯಿಂದ ಲಾಭ ಮಾಡಿಕೊಳ್ಳುವ ಅಗತ್ಯ ನನಗಿಲ್ಲ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಡಿ.ಬಿ.ಶಂಕರಪ್ಪ ಹೇಳಿದರು.

Advertisement

ಇಲ್ಲಿನ ಶಿವಪ್ಪನಾಯಕ ಹೊಸ ಬಡಾವಣೆಯಲ್ಲಿನ ಕನ್ನಡ ಸಾಹಿತ್ಯ ಭವನದಲ್ಲಿ ತಾಲೂಕು ಚುನಾವಣಾ ಪ್ರಚಾರ ಸಮಿತಿ ವತಿಯಿಂದ ಏರ್ಪಡಿಸಿದ್ದ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ನನ್ನ ಐದು ವರ್ಷಗಳ ಆಡಳಿತದಲ್ಲಿ ಯಾವುದೇ ಒಂದು ಕಪ್ಪು ಚುಕ್ಕೆಯೂ ಇಲ್ಲ. ನಮ್ಮ ಅವ ಧಿಯಲ್ಲಿ ಜಿಲ್ಲೆಯ ಎಲ್ಲ ಏಳು ತಾಲೂಕುಗಳಲ್ಲಿ ಸಾಹಿತ್ಯ ಸಮ್ಮೇಳನ ನಡೆಸಲಾಗಿದೆ. ಸಾಗರದಲ್ಲಿ ಸತತ ಮೂರು ದಿನಗಳ ಕಾಲ ಐದು ವರ್ಷವೂ ಸಮ್ಮೇಳನ ಮಾಡಿ ಮಾದರಿಯಾಗಿದ್ದಾರೆ. ಆದರೆ ಕಳೆದ ವರ್ಷದ ಪರಿಷತ್ತಿನಿಂದ ಬರಬೇಕಾದ 1 ಲಕ್ಷ ರೂ. ಬರಗಾಲ ಹಾಗೂ ಕೊರೊನಾ ಕಾರಣದಿಂದ ಬಂದಿಲ್ಲ. ಇದರಿಂದ ಕೆಲವರಿಗೆ ಬಾಕಿ ಕೊಡುವುದು ಉಳಿದುಕೊಂಡಿದೆ. ಅದನ್ನು ಶೀಘ್ರ ಪಾವತಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು.

ಕೆಲವರು ದತ್ತಿ ಕಾರ್ಯಕ್ರಮ ಮಾಡಿಲ್ಲ ಎಂದು ಆರೋಪಿಸುತ್ತಿದ್ದಾರೆ. ಉದ್ದೇಶಪೂರ್ವಕವಾಗಿ ಫೇಸ್‌ ಬುಕ್‌, ವಾಟ್ಸ್‌ಆ್ಯಪ್‌ನಲ್ಲಿ ಇಲ್ಲಸಲ್ಲದ್ದನ್ನು ಸೃಷ್ಟಿ ಮಾಡಿ ಹಾಕಲಾಗುತ್ತಿದೆ. ಪ್ರಾಮಾಣಿಕವಾಗಿ ಪರಿಷತ್ತಿನ ಕೆಲಸವನ್ನು ಮಾಡಿದ್ದೇವೆ. ಕಳೆದ ಮಾರ್ಚ್‌ ನಂತರ ಲಾಕ್‌ ಡೌನ್‌ ಕಾರಣದಿಂದ ಪರಿಷತ್ತಿನ ದತ್ತಿ ಕಾರ್ಯಕ್ರಮಗಳು ನಡೆಯಲಿಲ್ಲ. ಸಭೆ, ಸಮಾರಂಭ ಮಾಡಲಾಗದ ಸ್ಥಿತಿ ಎದುರಾದುದರಿಂದ ಅನಿವಾರ್ಯವಾಗಿ ಸ್ಥಗಿತಗೊಂಡಿದೆ. ಆದರೆ ಈ ಬಡ್ಡಿ ಹಣ ಅವರ ಅಸಲು ಹಣಕ್ಕೆ ಜಮೆಯಾಗಿ ಮುಂದಿನ ಕಾರ್ಯಕ್ರಮಕ್ಕೆ ಬಳಕೆಯಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ತಾಲೂಕು ಸಮ್ಮೇಳನದ ಅಧ್ಯಕ್ಷರಾಗದಿದ್ದರೂ ಸಾಗರದ ವಿಜಯಶ್ರೀ ಮತ್ತು ಜಯಪ್ರಕಾಶ್‌ ಮಾವಿನಕುಳಿ ಅವರನ್ನು ಜಿಲ್ಲಾ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಮಾಡಿ ಅವರ ಪ್ರತಿಭೆಗೆ ಮನ್ನಣೆ ನೀಡಿದ್ದೇವೆ. ಕೆಲವರನ್ನು ತಾಲೂಕು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಮಾಡಿಲ್ಲ ಎಂಬ ಆರೋಪವಿದೆ. ಅಂಥ ಪ್ರತಿಭೆ ಉಳ್ಳವರನ್ನು ಜಿಲ್ಲಾ ಸಮ್ಮೇಳನದ ಸರ್ವಾಧ್ಯಕ್ಷತೆಗೆ ಆಯ್ಕೆ ಮಾಡಲೂ ಅವಕಾಶವಿದೆ. ಅಂಥವರು ತುಸು ಸಮಯ ಕಾಯಬೇಕು. ವಿದ್ವಾನ್‌ ರಂಗನಾಥ ಶರ್ಮರು ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆ ಬಹುದೊಡ್ಡದು. ಅವರ ಸಾಹಿತ್ಯ ಕೃತಿ ಕುರಿತು ಗೋಷ್ಠಿ ನಡೆಸಲು ನಾನು ಅಧ್ಯಕ್ಷನಾಗಿ ಬರಬೇಕಾಯಿತೇ ಎಂದು ಪ್ರಶ್ನಿಸಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಿ.ಆರ್‌.ಮಧುಸೂದನ್‌ ಮಾತನಾಡಿ, ಜಿಲ್ಲೆಗೆ ತನ್ನದೇ ಆದ ಸಾಂಸ್ಕೃತಿಕ ಹಿರಿಮೆ ಇದೆ. ಸಮಾಜದ ಸ್ವಾಸ್ಥ  ಕಾಪಾಡುವ ದೃಷ್ಟಿಯಿಂದ ಪರಿಷತ್ತಿಗೆ ಸ್ಪರ್ಧಿಸಿರುವ ಡಿ.ಬಿ.ಶಂಕರಪ್ಪ ಮತ್ತು ಮಹೇಶ್‌ ಜೋಶಿಯವರಿಗೆ ಬಿಜೆಪಿ ಮತ್ತು ಪರಿವಾರದ ನಂಟು ಬೆಳೆದಿದೆ. ಇದು ರಾಜಕೀಯ ಚುನಾವಣೆಯಲ್ಲ. ಸ್ವತ್ಛ ಆಡಳಿತ ಮಾಡುವವರಿಗೆ ಬೆಂಬಲ ನೀಡಬೇಕೆಂಬ ಉದ್ದೇಶದಿಂದ ನಾವು ಕೈ ಜೋಡಿಸಿದ್ದೇವೆ. ಪ್ರಾಮಾಣಿಕ ಪ್ರಯತ್ನದಿಂದ ಫಲ ಸಿಗುತ್ತದೆ ಎಂದರು.

Advertisement

ತಾಲೂಕು ಪ್ರಚಾರ ಸಮಿತಿ ಸಂಚಾಲಕ ಎಸ್‌.ವಿ.ಹಿತಕರ ಜೈನ್‌ ಮಾತನಾಡಿ, ಎಲ್ಲರೂ ಒಟ್ಟಾಗಿ ಕೆಲಸ ಮಾಡಿದರೆ ಯಶಸ್ಸು ಖಂಡಿತ ಸಿಗುತ್ತದೆ. ಹಿಂದಿನ ಸಮ್ಮೇಳನಗಳಲ್ಲಿ ಕೆಲವರಿಗೆ ಬಾಕಿ ಕೊಡುವುದಿದೆ. ಅದರಲ್ಲಿ ಅರ್ಧದಷ್ಟನ್ನು ಈಗಾಗಲೇ ಪಾವತಿಸಿಯಾಗಿದೆ. ಉಳಿದ ಹಣವನ್ನು ಶೀಘ್ರದಲ್ಲೇ ಪಾವತಿಸಲಾಗುವುದು ಎಂದರು.

ಪರಿಷತ್ತಿನ ಮ.ಸ.ನಂಜುಂಡಸ್ವಾಮಿ, ಚೆನ್ನಬಸಪ್ಪ, ಮಧುಮಾಲತಿ, ಬಿಜೆಪಿ ಮಹಿಳಾ ಮೋರ್ಚಾದ ಶ್ರೀರಂಜಿನಿ ದತ್ತಾತ್ರಿ, ನಗರಸಭೆ ಸದಸ್ಯರಾದ ಗಣೇಶ್‌ ಪ್ರಸಾದ್‌, ತುಕಾರಾಂ, ಬಿ.ಎಚ್‌.ಲಿಂಗರಾಜ್‌, ಪ್ರಮುಖರಾದ ಯಶೋಧಮ್ಮ, ಲತಾ ಕಶ್ಯಪ, ಪದ್ಮಾ, ದಿವ್ಯ, ಜಯಶ್ರೀ, ಮಂಜುನಾಥ ಪಾನಿಪುರಿ, ಗಣಪತಿಶಿರಳಗಿ, ಸುಗಂಧನಾಯ್ಡು, ಭಾವನಾ, ಪ್ರೇಮಾ, ಗಂಗಮ್ಮ, ಸತೀಶ್‌ ಮೊಗವೀರ, ರಾಜೇಶ್‌ ಶೇಟ್‌, ಶಿವಶಂಕರ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next