ಶಿವಮೊಗ್ಗ: ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ತಲೆ ಕೆಟ್ಟು ಹನ್ನೆರಡಾಣೆ ಆಗಿ ಹೋಗಿದೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಟೀಕಿಸಿದರು. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಸ್ತೆಯಲ್ಲಿ ಹೋಗುವ ಕುಡುಕನ ರೀತಿಯಲ್ಲಿ ಸಿದ್ದರಾಮಯ್ಯ ಮಾತನಾಡುತ್ತಿದ್ದಾರೆ.
ಮುಖ್ಯಮಂತ್ರಿ ಆಸ್ಪತ್ರೆಯಲ್ಲಿದ್ದಾರೆ. ಸರ್ಕಾರ ಐಸಿಯುನಲ್ಲಿದೆ ಎಂದು ಅವರು ಹೇಳಿರುವುದು ಸರಿಯಲ್ಲ. ಅವರೊಬ್ಬ ಅಯೋಗ್ಯ ಎಂದು ವಾಗ್ಧಾಳಿ ನಡೆಸಿದರು. ಸಿದ್ದರಾಮಯ್ಯ ಸಿ.ಎಂ.ಆಗಲು ಅಯೋಗ್ಯರಾಗಿದ್ದಾರೆ. ಹೀಗಾಗಿಯೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜನ ಅವರನ್ನು ಸೋಲಿಸಿದ್ದರು. ಆದರೂ ಅವರು ತಮ್ಮ ವರ್ತನೆ ತಿದ್ದಿಕೊಂಡಿಲ್ಲ. ಬಾಯಿಗೆ ಬಂದಂತೆ ಮಾತನಾಡುತ್ತ ವಿಪಕ್ಷ ನಾಯಕರಾಗಲು ಕೂಡ ಯೋಗ್ಯರಲ್ಲ ಎಂಬುದನ್ನು ಸಾಬೀತು ಪಡಿಸಿದ್ದಾರೆ.
ಇಡಿ ಸರ್ಕಾರವೇ ಐಸಿಯುನಲ್ಲಿದೆ ಎಂದರೆ ಏನು ಅರ್ಥ ಎಂದು ಪ್ರಶ್ನಿಸಿದರು. ತಾನು ಮುಖ್ಯಮಂತ್ರಿಯಾಗಿದ್ದೆ ಎಂಬ ಘನತೆಯನ್ನು ಕೂಡ ಮರೆತು ಸಿದ್ದರಾಮಯ್ಯ ಮಾತನಾಡುತ್ತಿದ್ದಾರೆ. ಮುಖ್ಯಮಂತ್ರಿ, ಸರ್ಕಾರವನ್ನು ಟೀಕಿಸುತ್ತಾರೆ. ಅವರಿಗೆ ತಲೆಕೆಟ್ಟು ಹನ್ನೆರಡಾಣೆ ಆಗಿ ಹೋಗಿದೆ. ಮುಖ್ಯಮಂತ್ರಿ ಸ್ಥಾನ ಕಳೆದು ಕೊಂಡಾಗಿನಿಂದ ಅವರಿಗೆ ಟೀಕೆ ಮಾಡುವುದೇ ಕೆಲಸವಾಗಿದೆ. ನಾನು ಕೂಡ ಜೀವಂತವಾಗಿದ್ದೇನೆ ಎಂದು ತೋರಿಸಿಕೊಳ್ಳಲು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಗಳಿಗೆ ಕೋವಿಡ್ ಬಂದಿದ್ದು, ಆಸ್ಪತ್ರೆಯಲ್ಲಿದ್ದಾರೆ. ಸಿದ್ದರಾಮಯ್ಯ ಈ ರೀತಿ ಹೇಳಿಕೆ ನೀಡಿದ್ದು ಸರಿನಾ ಎಂದು ಪ್ರಶ್ನಿಸಿದ ಈಶ್ವರಪ್ಪ ಅನೇಕರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ವಿರೋಧ ಪಕ್ಷದ ನಾಯಕರಾಗಿರುವ ಇಂತಹ ಒಬ್ಬ ವ್ಯಕ್ತಿ ರಾಜ್ಯದ ಮುಖ್ಯಮಂತ್ರಿಯಾಗಿದ್ದರಲ್ಲ ಎಂಬುದೇ ಬೇಸರ ತರಿಸುತ್ತದೆ. ಮುಖ್ಯಮಂತ್ರಿ ಯಾಗಿದ್ದೇನಲ್ಲ ಎಂಬ ಜ್ಞಾನವೂ ಇಲ್ಲದ ಹಾಗೆ ಅವರು ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.
ರಾಜ್ಯಪಾಲರ ಸಭೆ ಆಶ್ಚರ್ಯ ಮೂಡಿಸಿದೆ: ಕೋವಿಡ್ ವಿಚಾರದಲ್ಲಿ ರಾಜ್ಯಪಾಲರು ಏಕೆ ಸಭೆ ಕರೆದಿದ್ದಾರೆ ಎನ್ನುವುದು ಗೊತ್ತಿಲ್ಲ. ರಾಜ್ಯಪಾಲರೇ ನೇರವಾಗಿ ಸಭೆ ಕರೆದಿರುವುದು ಆಶ್ವರ್ಯ ತಂದಿದೆ ಎಂದು ಈಶ್ವರಪ್ಪ ಹೇಳಿದರು. ರಾಜ್ಯಪಾಲರು ಸಭೆ ಕರೆಯಬಾರದು ಎಂದೇನೂ ಇಲ್ಲ. ಚುನಾಯಿತ ಪ್ರತಿನಿ ಗಳ ಸರ್ಕಾರ ಇದ್ದಾಗಲೂ ರಾಜ್ಯಪಾಲರು ಏಕೆ ಸಭೆ ಕರೆದಿದ್ದಾರೆ ಎಂದು ನನಗೆ ಅರ್ಥವಾಗುತ್ತಿಲ್ಲ. ಇದು ಹೊಸ ವ್ಯವಸ್ಥೆ ಆಯಿತೇ ಎಂಬ ಅನುಮಾನ ಕಾಡುತ್ತಿದೆ. ಕೋವಿಡ್ ಪರಿಸ್ಥಿತಿ ಮಿತಿಮೀರಿ ಹೋಗುತ್ತಿದೆ. ರಾಜ್ಯಪಾಲರು ಸಭೆ ಕರೆದಿರುವುದರಿಂದ ಈ ವಿಚಾರದಲ್ಲಿ ಸೀರಿಯಸ್ ಬಂದಿದೆ ಎಂದರು.
ರಾಜ್ಯಪಾಲರ ಸಭೆ ರಾಜ್ಯದ ಹಿತ ದೃಷ್ಟಿಯಿಂದ ಒಳ್ಳೆಯದಾಗುತ್ತದೆ ಎಂಬ ಆಶಯ ನನ್ನದು ಎಂದು ತಿಳಿಸಿದರು. ರಾಜ್ಯದಲ್ಲಿ ಲಾಕ್‌ಡೌನ್ ಅವಶ್ಯಕತೆ ಇಲ್ಲ. ರಾಜ್ಯಪಾಲರು ಇಂದು ನಡೆಸುವ ಸಭೆ ರಾಜ್ಯದ ಹಿತದೃಷ್ಟಿಯಿಂದ ಮಹತ್ವ ಪೂರ್ಣವಾಗಿದ್ದು, ರಾಜ್ಯಪಾಲರ ಸಭೆಯ ತೀರ್ಮಾನಕ್ಕೆ ನಾವೆಲ್ಲರೂ ಬದ್ಧ ವಾಗಿರುತ್ತೇವೆ. ವಿರೋಧ ಪಕ್ಷದ ಟೀಕೆಗಳನ್ನು ಗುಣಾತ್ಮಕವಾಗಿ ತೆಗೆದು ಕೊಳ್ಳುತ್ತೇವೆ ಎಂದರು. ಕೆಲವರು ಎಲ್ಲದಕ್ಕೂ ವಿರೋಧ ಮಾಡಿದರಷ್ಟೆ ವಿರೋಧ ಪಕ್ಷವೆಂದು ಭಾವಿಸಿದ್ದಾರೆ.
ಖಂಡಿತವಾಗಿಯೂ ವಿರೋಧ ಪಕ್ಷದವರು ಸಹಕಾರ ನೀಡುತ್ತಿದ್ದು, ಅವರ ಸಹಕಾರದಿಂದ ಕೋವಿಡ್ ಕಡಿಮೆ ನಿಯಂತ್ರಣಕ್ಕೆ ಶ್ರಮಿಸುತ್ತೇವೆ ಎಂದರು.