ಶಿವಮೊಗ್ಗ: ಮಾಸ್ಕ್ ಧರಿಸದವರಿಂದ ದಂಡ ವಸೂಲಿ ಮಾಡುವ ಬದಲಿಗೆ ಅವರಿಗೆ ಮಾಸ್ಕ್ ನೀಡಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಪೊಲೀಸರು ವಿಶಿಷ್ಟ ಕಾರ್ಯಾಚರಣೆ ನಡೆಸಿದರು.
ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಹೆಚ್ಚುವರಿ ಜಿಲ್ಲಾ ರಕ್ಷಣಾಧಿ ಕಾರಿ ಎಚ್.ಟಿ. ಶೇಖರ್ ನೇತೃತ್ವದಲ್ಲಿ ದಿಢೀರ್ ಕಾರ್ಯಾಚರಣೆ ನಡೆಸಿದ ಪೊಲೀಸರು, ಮಾಸ್ಕ್ ಧರಿಸದೆ ನಿರ್ಲಕ್ಷé ವಹಿಸಿದವರನ್ನು ತರಾಟೆಗೆ ತೆಗೆದುಕೊಂಡು ಮಾಸ್ಕ್ ವಿತರಣೆ ಮಾಡಿ ಕೊರೊನಾ ಮುನ್ನೆಚ್ಚರಿಕೆ ವಹಿಸುವಂತೆ ಸಲಹೆ ನೀಡಿದರು.
ಖಾಸಗಿ ಬಸ್ ನಿಲ್ದಾಣದಲ್ಲಿ ಮಾಸ್ಕ್ ಧರಿಸದೆ ತಿರುಗಾಡುತ್ತಿದ್ದರು. ಸಾಮಾಜಿಕ ಅಂತರವಿಲ್ಲದೆ ಪ್ರಯಾಣಿಕರು ನಿಂತಿದ್ದರು.ಇದನ್ನು ಗಮನಿಸಿದ ಎಎಸ್ಪಿ ಡಾ|ಎಚ್.ಟಿ ಶೇಖರ್, ಡಿವೈಎಸ್‌ಪಿ ಪ್ರಶಾಂತ್ ಹಾಗೂ ಸಿಬ್ಬಂದಿ ಪ್ರತಿಯೊಬ್ಬರಿಗೂ ಮಾಸ್ಕ್ ವಿತರಣೆ ಮಾಡಿದರು. ಅಲ್ಲದೇ ಮಾಸ್ಕ್ ತೊಡದೆ ಬಸ್ಸಿಗಾಗಿ ಕಾದು ಕುಳಿತಿದ್ದ ಮಕ್ಕಳಿಗೆ ಎಎಸ್ಪಿಯವರು ಮಾಸ್ಕ್ ತೊಡಿಸಿ,ಪೋಷಕರಿಗೆ ತಿಳುವಳಿಕೆ ನೀಡಿದರು. ಪೊಲೀಸರು ಬಸ್ ನಿಲ್ದಾಣದಲ್ಲಿ ದಿಢೀರ್ ಕಾರ್ಯಾಚರಣೆ ನಡೆಸುತ್ತಿದ್ದಂತೆ ಕೆಲವರು ಕರ್ಚಿಫ್,ಟವೆಲ್ ಮುಖಕ್ಕೆ ಕಟ್ಟಿಕೊಂಡರು.
ಇದನ್ನು ಗಮನಿಸಿ ಬಸ್ ಏರಿದ ಎಎಸ್ಪಿ ಶೇಖರ್, ಜೀವ ಹಾಗೂ ಜೀವನ ಮುಖ್ಯ.ದಂಡಕ್ಕೆ ಹೆದರಿ ಮುಖ ಮುಚ್ಚಿಕೊಳ್ಳುವುದರಿಂದ ಯಾವುದೇ ಪ್ರಯೋಜನವಿಲ್ಲ. ಕೊರೊನಾದಿಂದ ಬಚಾವ್ ಆಗುವುದು ಮುಖ್ಯ ಎಂದು ತಿಳುವಳಿಕೆ ನೀಡಿ, ಮಾಸ್ಕ್ ವಿತರಣೆ ಮಾಡಿದರು.
ಸಿಟಿ ಬಸ್‌ನಲ್ಲಿ ಡಿವೈಎಸ್ಪಿ ಪಾಠ: ಇನ್ನು ಡಿವೈಎಸ್ಪಿ ಪ್ರಶಾಂತ್ ಮುನ್ನೋಳಿ ಅವರು, ನಗರ ಸಾರಿಗೆ ಬಸ್ಸುಗಳಲ್ಲಿ ಮಾಸ್ಕ್ ಧರಿಸದವರಿಗೆ ಕೊರೊನಾ ಸೋಂಕು ಜೀವಕ್ಕೆ ಎಷ್ಟು ಅಪಾಯಕಾರಿ ಎನ್ನುವುದರ ಬಗ್ಗೆ ತಿಳುವಳಿಕೆ ನೀಡಿದರು. ಕೊರೊನಾ ಸೋಂಕಿನಿಂದ ತಮ್ಮನ್ನು ಕಾಪಾಡಿಕೊಳ್ಳಲು ಮಾಸ್ಕ್ ಧರಿಸುವುದು ಕಡ್ಡಾಯ. ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದು ಹೇಳಿದರು.
ಕೊರೊನಾ ಸೋಂಕಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದಂಡ ಪ್ರಯೋಗದ ಜೊತೆಗೆ ಮಾಸ್ಕ್ ವಿತರಣೆ ಮಾಡುತ್ತಿರುವುದು ಶ್ಲಾಘನೀಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.