Advertisement

ಗೋಹತ್ಯೆ ನಿಷೇಧ ಕಾಯ್ದೆ ಕಟ್ಟುನಿಟ್ಟು ಜಾರಿ

05:37 PM Jan 26, 2021 | Team Udayavani |

ಶಿವಮೊಗ್ಗ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ಕಟ್ಟು ನಿಟ್ಟಾಗಿ ಜಾರಿಗೆ ತರುವುದಾಗಿ ಮೇಯರ್‌ ಸುವರ್ಣ
ಶಂಕರ್‌ ಘೋಷಿಸಿದ್ದಾರೆ.
ಸೋಮವಾರ ನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ನಗರ ವ್ಯಾಪ್ತಿಯಲ್ಲಿ ಗೋಹತ್ಯೆ ಮಾಡುವವರ ವಿರುದ್ಧ ಕಾಯ್ದೆಯಂತೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

Advertisement

ದೇಶದಲ್ಲೇ ಮೊದಲ ಬಾರಿಗೆ ಗೋ ಸಂರಕ್ಷಣೆಗಾಗಿ ಶಿವಮೊಗ್ಗ ಪಾಲಿಕೆ 50 ಲಕ್ಷ ರೂ. ಅನುದಾನ ತೆಗೆದಿರಿಸಿದೆ. ಜಿಲ್ಲಾಡಳಿತ ಕೂಡ ಚಟ್ನಳ್ಳಿಯಲ್ಲಿ ಸರ್ವೆ ನಂ.76ರಲ್ಲಿ 5 ಎಕರೆ ಜಾಗವನ್ನು ಗೋ ಸಂರಕ್ಷಣೆಗಾಗಿ ಮೀಸಲಿಟ್ಟಿದ್ದು, ಪಾಲಿಕೆಯಿಂದ ಅಲ್ಲಿ ಗೋ ಸಂರಕ್ಷಣೆಯ
ಬಗ್ಗೆ ಕ್ರಮ ಕೈಗೊಳ್ಳುತ್ತೇವೆ. ಇನ್ನು ಮುಂದೆ ಪಾಲಿಕೆಯ ವ್ಯಾಪ್ತಿಯಲ್ಲಿ ಒಂದೇ ಒಂದು ಗೋ ಹತ್ಯೆಯಾಗದಂತೆ
ನೋಡಿಕೊಳ್ಳುತ್ತೇವೆ ಎಂದರು.

ಇದಕ್ಕೆ ವಿಪಕ್ಷ ನಾಯಕರು ಭಾರೀ ವಿರೋಧ ವ್ಯಕ್ತಪಡಿಸಿದರು. ಬಿಜೆಪಿ ಸರ್ಕಾರದಲ್ಲೇ ಅತಿ ಹೆಚ್ಚು ಗೋ ಮಾಂಸವನ್ನು ವಿದೇಶಗಳಿಗೆ ರಫ್ತು
ಮಾಡಲಾಗುತ್ತಿದೆ. ಮೊದಲು ಅದನ್ನು ನಿಲ್ಲಿಸಿ ಎಂದು ಆಗ್ರಹಿಸಿದರು. ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಪಾಲಿಕೆ ಸದಸ್ಯರು ಹಾಗೂ ಬಿಜೆಪಿ ಸದಸ್ಯರ ನಡುವೆ ಈ ಬಗ್ಗೆ ಕೆಲ ಕಾಲ ವಾಗ್ವಾದ ನಡೆಯಿತು. ಈ ನಡುವೆ ಆರ್‌ಎಸ್‌ಎಸ್‌ ಪದ ಬಳಸಿದ್ದಕ್ಕೆ ಬಿಜೆಪಿ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಸಭೆಯಲ್ಲಿ ಏನೇ ವಾಗ್ವಾದ ನಡೆದರೂ ಮೇಯರ್‌ ಮಾತ್ರ ಸರ್ಕಾರ ತಂದಿರುವ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿ ಮಾಡುವುದಾಗಿ
ಹೇಳಿದರು.

ಸಭೆಯ ಆರಂಭದಲ್ಲಿ ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್‌ ಸಿಟಿ ಕಾಮಗಾರಿಗಳ ಬಗ್ಗೆ ವಿರೋಧ ಪಕ್ಷದ ಸದಸ್ಯ ರಮೇಶ್‌ ಹೆಗ್ಡೆ ಅಸಮಾಧಾನ
ವ್ಯಕ್ತಪಡಿಸಿದರು. ಕೆಲವೆಡೆ ಇನ್ನೂ ಯುಜಿಡಿ ಮತ್ತು ಯುಜಿ ಕೇಬಲ್‌ ಟೆಂಡರ್‌ ಆಗಿಲ್ಲ ಎಂಬ ಮಾಹಿತಿ ಬಂದಿದೆ.

ಯಾವುದೇ ಕಾಮಗಾರಿ ನಡೆಸುವಾಗಲೂ ಸ್ಮಾರ್ಟ್‌ ಸಿಟಿ ಅಧಿಕಾರಿಗಳು ಸ್ಥಳೀಯ ಸದಸ್ಯರ ಗಮನಕ್ಕೆ ತರುತ್ತಿಲ್ಲ. ಸಾರ್ವಜನಿಕರ ಎದುರಿಗೆ ವಾರ್ಡ್‌ ಸದಸ್ಯರು ತಲೆ ತಗ್ಗಿಸುವಂತಾಗಿದೆ. ನಗರವೆಲ್ಲ ಧೂಳುಮಯವಾಗಿದ್ದು, ಅವೈಜ್ಞಾನಿಕ ಕಾಮಗಾರಿಯಿಂದ ಕೊರೊನಾ ಇಲ್ಲದಿದ್ದರೂ ಧೂಳಿನಿಂದ ಬರುವ ಕಾಯಿಲೆಯ ಭಯದಿಂದ ಮಾಸ್ಕ್ ಹಾಕುವ ಅನಿವಾರ್ಯತೆಯಿದೆ. ನಗರ ನೀರು ಸರಬರಾಜು ಮಂಡಳಿ, ಮೆಸ್ಕಾಂ,
ಯುಜಿ ಕೇಬಲ್‌, ದೂರವಾಣಿ ಕೇಬಲ್‌ ಹಾಕಲು ಕಾಂಕ್ರೀಟ್‌ ರಸ್ತೆಗಳನ್ನು ಅಗೆಯಲಾಗುತ್ತಿದೆ. ಯಾವುದೇ ಅಧಿಕಾರಿಗಳಿಗೆ ಪರಸ್ಪರ ಸಂಪರ್ಕ
ಇಲ್ಲದ್ದರಿಂದ ಬೇಕಾಬಿಟ್ಟಿ ಕೆಲಸ ಮಾಡುತ್ತಿದ್ದಾರೆ. ಫೆಬ್ರವರಿಯೊಳಗೆ ಕಾಮಗಾರಿ ಮುಗಿಸದಿದ್ದರೆ ಸ್ಮಾರ್ಟ್‌ಸಿಟಿ ಅಧಿ ಕಾರಿಗಳಿಗೆ ದಂಡ ಹಾಕಿ
ಎಂದರು.

Advertisement

ಎಲ್ಲಾ ರಸ್ತೆಗಳಲ್ಲೂ ಟ್ರಾಕ್‌ ಜಾಮ್‌ ಆಗುತ್ತಿದೆ. ನಗರ ದೂಳಿನ ನಗರವಾಗಿ ಪರಿವರ್ತನೆಯಾಗಿದೆ. ಸ್ಮಾರ್ಟ್‌ ಸಿಟಿ ಅಧಿ ಕಾರಿಗಳು ಸ್ಥಳ ಪರಿಶೀಲನೆ ಮಾಡುತ್ತಿಲ್ಲ. ಕಾಮಗಾರಿ ಕಳಪೆ ಗುಣಮಟ್ಟದಾಗಿದೆ. ಸ್ಮಾರ್ಟ್‌ ಸಿಟಿ 500 ಕೋಟಿ ವಾಪಸ್‌ ಹೋಗಿದ್ದು, ನಿಗದಿತ ಅವ ಧಿಯೊಳಗೆ ಕೆಲಸ ಮಾಡುವಂತೆ ಕ್ರಮ ಕೈಗೊಳ್ಳಿ ಎಂದರು.
ಸದಸ್ಯ ನಾಗರಾಜ್‌ ಕಂಕಾರಿ ಮಾತನಾಡಿ, ಸ್ಮಾರ್ಟ್‌ಸಿಟಿ ಕಾಮಗಾರಿಗಳು ನಮ್ಮ ವಾರ್ಡ್‌ಗಳಲ್ಲಿ ನಡೆದರೂ ಮಾಹಿತಿಯೇ ಇಲ್ಲ. ಬೇಕಾದ ರೀತಿ ಕೆಲಸ ಮಾಡುತ್ತಿದ್ದಾರೆ ಎಂದರು.

ಆಡಳಿತ ಪಕ್ಷದ ನಾಯಕ ಚೆನ್ನಬಸಪ್ಪ ಮಾತನಾಡಿ, ನಾವು ಅನೇಕ ಸಂಕಷ್ಟಗಳ ನಡುವೆಯೂ ಸಾಕಷ್ಟು ಅನುದಾನ ತಂದು ಪಾಲಿಕೆ ವ್ಯಾಪ್ತಿಯಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದೇವೆ. ಜನ ಸಂದಣಿ ಇರುವ ಜಾಗದಲ್ಲಿ ಕಾಮಗಾರಿ ಮಾಡುವಾಗ ಕೆಲವೊಂದು ವ್ಯತ್ಯಾಸವಾಗುತ್ತದೆ. ನಾವೇನು ಮಾಯಾದಂಡ ಹೊಂದಿಲ್ಲ ಎಂದರು.
ಸಭೆ ಮಧ್ಯಾಹ್ನದ ನಂತರವೂ ಮುಂದುವರಿದಿತ್ತು. ಉಪಮೇಯರ್‌ ಸುರೇಖಾ ಮುರಳಿಧರ್‌, ಆಯುಕ್ತ ಚಿದಾನಂದ ವಠಾರೆ ಇದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next