ಶಿವಮೊಗ್ಗ: ಮಹಾನಗರ ಪಾಲಿಕೆಯಲ್ಲಿ ಮ್ಯಾನ್ಯುಯಲ್ ಟೆಂಡರ್ ಮೂಲಕ ಕಾರ್ಯನಿರ್ವಹಿಸುತ್ತಿರುವ ಗಂಟೆ ಗಾಡಿಯವರನ್ನು ಬದಲಾಯಿಸದೆ ಮುಂದುವರೆಸಬೇಕೆಂದು ಒತ್ತಾಯಿಸಿ ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಅನೇಕ ವರ್ಷಗಳಿಂದ ಪಾಲಿಕೆ ಗಂಟೆ ಗಾಡಿಗಳಲ್ಲಿ ಕೆಲಸ ಮಾಡಿಕೊಂಡು ಬರಲಾಗುತ್ತಿದೆ. ಈ ಹಿಂದೆ ನಾವು ಹಂದಿ ಸಾಕುತ್ತಿದ್ದು, ಸಾಕಷ್ಟು ಕೊಳಕು ಪ್ರದೇಶ ಸೃಷ್ಟಿಯಾದ ಕಾರಣ ಪಾಲಿಕೆಯಿಂದ ಹಂದಿ ಸಾಕಾಣಿಕೆ ಬಿಡಿಸಿ ಗಂಟೆ ಗಾಡಿಯಲ್ಲಿ ಕೆಲಸ ಮಾಡಲು ಮ್ಯಾನ್ಯುಯಲ್ ಟೆಂಡರ್ ಮೂಲಕ ಅವಕಾಶ ಕಲ್ಪಿಸಲಾಗಿತ್ತು. ಈಗ ಗಂಟೆ ಗಾಡಿಯವರನ್ನು ತೆಗೆದುಹಾಕುವ ಪ್ರಸ್ತಾಪವಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
ಉದ್ಯೋಗವಿಲ್ಲದಂತಾಗಿ ಪುನಃ ಹಂದಿ ಸಾಕುವುದು ಅನಿವಾರ್ಯವಾಗುತ್ತದೆ. ಅದರಿಂದ ಮತ್ತೂಮ್ಮೆ ನಗರ ಮಲೀನವಾಗುತ್ತದೆ. ಪ್ರಸ್ತುತ ಕೊರೊನಾ ಸಾಂಕ್ರಾಮಿಕ ರೋಗವಿದ್ದರೂ ಜೀವದ ಹಂಗುತೊರೆದು ಕೆಲಸ ಮಾಡಿದ್ದೇವೆ. 2 ಬಾರಿ ತುಂಗಾ ನದಿ ಪ್ರವಾಹದ ಸಂದರ್ಭದಲ್ಲಿ ಜನ ಸಂಕಷ್ಟಕ್ಕೀಡಾದಾಗ ಸ್ವಚ್ಚತಾ ಕೆಲಸ ಮಾಡಿದ್ದೇವೆ.
ಇಷ್ಟು ದಿನ ಗಂಟೆ ಗಾಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನಮಗೆ ಹೆಚ್ಚುವರಿಯಾಗಿ ಹಣ ಪಾವತಿಸಿಲ್ಲ. ದಯಮಾಡಿ ಹಣ ಸಂದಾಯ ಮಾಡಬೇಕು. ವಾಹನಗಳಿಗೆ ಲೋನ್ ಇದ್ದು, ಅದನ್ನು ಪಾವತಿಸಲು ಅವಕಾಶ ಕೊಡಬೇಕು. ಗಂಟೆ ಗಾಡಿ ಸಂಘದ ಸಮಸ್ಯೆ ಇತ್ಯರ್ಥವಾಗದ ವರೆಗೆ ಪಾಲಿಕೆ ವಾಹನ ಬಿಡಬಾರದೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಕೆಲಸ ಮುಂದುವರೆಸಲು 2 ವರ್ಷ ಕಾಲಾವಕಾಶ ನೀಡಬೇಕು. ಮ್ಯಾನ್ಯುಯಲ್ ಟೆಂಡರ್‌ನಿಂದ ತೆಗೆದು ಹಾಕದೆ ಯಥಾಸ್ಥಿತಿ ಮುಂದುವರೆಸಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಗಂಟೆ ಗಾಡಿಗಳ ಸಂಘದ ಪ್ರಮುಖರಾದ ಲೋಕೇಶ, ಅಬ್ಬಯ್ಯ, ಸುರೇಶ್, ಪುಟ್ಟರಾಜು, ಮಂಜುನಾಥ, ರಮೇಶ, ದುಗ್ಗೇಶ, ಕುಟೂರ ಮೊದಲಾದವರಿದ್ದರು.