ಶಿವಮೊಗ್ಗ: ಕೆಎಸ್‌ಆರ್‌ಟಿಸಿ ನೌಕರರು ಕಳೆದ ಎಂಟು ದಿನಗಳಿಂದ ನಡೆಸುತ್ತಿರುವ ಮುಷ್ಕರ ಸಂಸ್ಥೆಯ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರಿದೆ. ಅದರಲ್ಲೂ ಯುಗಾದಿ ಸಂದರ್ಭದಲ್ಲಿ ಬರಬೇಕಾದ ಭರಪೂರ ಆದಾಯಕ್ಕೂ ಪೆಟ್ಟು ಬಿದ್ದಿದೆ.
ಶಿವಮೊಗ್ಗ ವಿಭಾಗದಿಂದ ಬೆಂಗಳೂರು, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಮಂಗಳೂರಿಗೆ ಸಂಚರಿಸಬೇಕಾದ ಬಸ್‌ಗಳು ಮುಷ್ಕರ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿರುವುದರಿಂದ ಕಳೆದ ಎಂಟು ದಿನಗಳಲ್ಲಿ ಅಂದಾಜು 3 ಕೋಟಿ ರೂ. ನಷ್ಟವಾಗಿದೆ. ಹಬ್ಬದಲ್ಲಿ ಬೆಂಗಳೂರಿಂದ ಶಿವಮೊಗ್ಗಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸುತ್ತಿದ್ದರು. ಆದರೆ, ಸಾರಿಗೆ ಸಂಸ್ಥೆ ಬಸ್‌ಗಳು ಲಭ್ಯವಿಲ್ಲದ ಕಾರಣ ರೈಲು ಮತ್ತು ಖಾಸಗಿ ಬಸ್‌ಗಳ ಮೊರೆ ಹೋಗಿದ್ದಾರೆ.
ಟ್ರಾವೆಲ್ಸ್‌ನವರಿಗೆ ಬಂಪರ್ ಆದಾಯ ಬಂದರೆ, ಕೆಎಸ್‌ಆರ್‌ಟಿಸಿಗೆ ಎರಡು ದಿನದಲ್ಲಿ 10 ಲಕ್ಷ ರೂ. ನಷ್ಟವಾಗಿದೆ. ಈಗಾಗಲೇ ಕೋವಿಡ್‌ನಿಂದಾಗಿ ಸಂಕಷ್ಟದಲ್ಲಿರುವ ಸಾರಿಗೆ ಸಂಸ್ಥೆ ಡಿಸೆಂಬರ್‌ನಿಂದಷ್ಟೆ ಚೇತರಿಕೆ ಕಾಣುತ್ತಿತ್ತು. ಕೋವಿಡ್ ಪ್ರಕರಣಗಳು ಏರಿಕೆ ಕಾಣುತ್ತಿದ್ದ ಹೊಸ್ತಿಲಲ್ಲಿ ಸಾಮಾಜಿಕ ಅಂತರ ಕಾದುಕೊಳ್ಳಲು ಬಸ್‌ಗಳಲ್ಲಿ ಶೇ.50ರಷ್ಟು ಸೀಟ್ ಭರ್ತಿಗೆ ಮಾತ್ರ ಅವಕಾಶ ನೀಡಲಾಗಿದ್ದರಿಂದ ಸಂಸ್ಥೆಗೆ ನಷ್ಟವಾಗಿದೆ. ಶಿವಮೊಗ್ಗ ವಿಭಾಗದಿಂದ ವಿವಿಧ ಜಿಲ್ಲೆಗಳಿಗೆ ನಿತ್ಯ ನೂರಾರು ಬಸ್‌ಗಳು ಸಂಚರಿಸುತ್ತವೆ. ಆದರೆ, ಮುಷ್ಕರದ ಬಳಿಕ ನಿತ್ಯ 15-20 ಬಸ್ ಗಳು ಪ್ರಯಾಣಿಸುತ್ತಿದ್ದು, ಕರ್ತವ್ಯಕ್ಕೆ ಹಾಜರಾಗುವ ಸಿಬ್ಬಂದಿಯನ್ನು ಇದಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಕೆಎಸ್ಸಾರ್ಟಿಸಿ ಡಿಸಿ ಟಿ.ಆರ್.ನವೀನ್ ಹೇಳಿದ್ದಾರೆ.
ಪರಿಸ್ಥಿತಿ ಹೀಗೆಯೇ ಮುಂದುವರಿದರೆ, ಕೆಎಸ್‌ಆರ್‌ಟಿಸಿ ಇನ್ನಷ್ಟು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ. ನೌಕರರ ಬೇಡಿಕೆಗಳ ಪೂರೈಕೆಗೆ ಪಟ್ಟು ಹಿಡಿದು ಮುಷ್ಕರ ನಡೆಸುತ್ತಿದ್ದು, ಸಂಘಟನೆಯನ್ನು ಒಡೆಯುವುದಕ್ಕಾಗಿ ಇತೀ¤ಚೆಗೆ ಕೆಲವು ನೌಕರರ ಮುಖಂಡರನ್ನು ರಾಮನಗರ, ಕೋಲಾರಕ್ಕೂ ವರ್ಗಾವಣೆ ಮಾಡಲಾಗಿದೆ. ನೌಕರರು ಜಪ್ಪಯ್ಯವೆಂದರೂ ಕರ್ತವ್ಯಕ್ಕೆ ಹಾಜರಾಗಿಲ್ಲ