ಸಾಗರ: ಕೊರೊನಾ ಸೋಂಕಿನ ಎರಡನೇ ಅಲೆ ಹರಡುವ ಭೀತಿಯ ನಡುವೆ ನಗರವ್ಯಾಪ್ತಿಯಲ್ಲಿ ಡೆಂಘೀ ಪ್ರಕರಣಗಳು ಹೆಚ್ಚುತ್ತಿವೆ. 15 ದಿನಗಳ ಅವಧಿಯಲ್ಲಿ 20ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ ರಾಮನಗರ ಬಡಾವಣೆಯಲ್ಲೇ ಡೆಂಘೀಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಿರುವುದು ಬೆಳಕಿಗೆ ಬಂದಿದೆ.
ಜ್ವರ, ಕಣ್ಣಿನ ಗುಡ್ಡೆಯ ಹಿಂದೆ ನೋವು, ತಲೆನೋವು, ಶೀತ ಕಾಣಿಸಿಕೊಂಡು ಕ್ರಮೇಣ ರಕ್ತದಲ್ಲಿ ಪ್ಲೇಟ್ ಲೆಟ್ ಅಂಶ ಕಡಿಮೆಯಾಗುವುದು ಡೆಂಘೀ ಜ್ವರದ ಲಕ್ಷಣ. ಮನೆಯ ಸುತ್ತಮುತ್ತ ಇರುವ ತ್ಯಾಜ್ಯಗಳಲ್ಲಿ ಸಂಗ್ರಹವಾಗುವ ನೀರಿನಿಂದ ಉತ್ಪತ್ತಿಯಾಗುವ ಸೊಳ್ಳೆಗಳು ಕಚ್ಚಿದರೆ ಡೆಂಘೀ ಬರುತ್ತದೆ ಎನ್ನುತ್ತಾರೆ ತಾಲೂಕು ವೈದ್ಯಾಧಿಕಾರಿ ಡಾ| ಕೆ.ಎಸ್. ಮೋಹನ್.
ರಾಮನಗರ ಬಡಾವಣೆ ನಗರದ ಹೊರ ವಲಯದಲ್ಲಿದ್ದು, ಸ್ವತ್ಛತೆ ಕೊರತೆ ಕಾರಣಕ್ಕೆ ಇಲ್ಲಿ ಸೊಳ್ಳೆಗಳ ಉತ್ಪತ್ತಿ ಹೆಚ್ಚುತ್ತಿವೆ ಎನ್ನುವ ದೂರುಗಳಿವೆ. ಕಳೆದ ತಿಂಗಳು ಸುರಿದ ಅಕಾಲಿಕ ಮಳೆಯಿಂದ ಚರಂಡಿ ಹಾಗೂ ಕಸದ ರಾಶಿಯಲ್ಲಿ ನೀರು ನಿಲ್ಲುವುದು ಹೆಚ್ಚಾಗಿದ್ದು, ಸೊಳ್ಳೆಯ ಉತ್ಪತ್ತಿ ಅಧಿಕಗೊಳ್ಳಲು ಕಾರಣವಾಗಿದೆ ಎಂದು ಸ್ಥಳೀಯರು ದೂರುತ್ತಾರೆ. ಕೊರೊನಾ ಹಾಗೂ ಡೆಂಘೀ ಜ್ವರದ ಲಕ್ಷಣಗಳಲ್ಲಿ ಹೋಲಿಕೆ ಇರುವುದರಿಂದ ಜ್ವರ, ಶೀತ, ಮೈ ಕೈ ನೋವು ಕಾಣಿಸಿಕೊಂಡಾಗ ರೋಗಿಯನ್ನು ಕೇವಲ ಕೊರೊನಾ ದೃಷ್ಟಿಯಿಂದ ನೋಡದೆ ಡೆಂಘೀ ಸಾಧ್ಯತೆಗಳನ್ನು ಪರಿಶೀಲಿಸಲಾಗುತ್ತಿದೆ ಎನ್ನುತ್ತಾರೆ ಇಲ್ಲಿನ ಸರ್ಕಾರಿ ಆಸ್ಪತ್ರೆಯ ತಜ್ಞ ವೈದ್ಯರು.
ರಾಮನಗರ ಬಡಾವಣೆಯಲ್ಲಿ ಒಂದೇ ಕುಟುಂಬಕ್ಕೆ ಸೇರಿದ ಮೂವರು ಡೆಂಘೀ ಜ್ವರದಿಂದ ಬಳಲುತ್ತಿದ್ದು, ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಕುಟುಂಬದ ಮುಖ್ಯಸ್ಥರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ನಗರವ್ಯಾಪ್ತಿಯಲ್ಲಿ ಡೆಂಘೀ ಜ್ವರ ಹರಡುತ್ತಿರುವ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದು, ಸೊಳ್ಳೆಗಳ ನಿಯಂತ್ರಣಕ್ಕೆ ನಗರಸಭೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.