Advertisement

ಕೊರೊನಾ ಲಸಿಕೆ ಕಡಿಮೆ ಬೀಳದಂತೆ ಗಮನ ಹರಿಸಿ

06:30 PM Apr 14, 2021 | Shreeraj Acharya |

ಸಾಗರ: ತಾಲೂಕಿನಲ್ಲಿ ಸುಮಾರು 6 ಸಾವಿರಕ್ಕೂ ಹೆಚ್ಚು ಜನರು ಕೊರೊನಾ ಲಸಿಕೆ ತೆಗೆದುಕೊಂಡಿದ್ದಾರೆ. ನಗರದ ಆಸ್ಪತ್ರೆಗಳಲ್ಲಿ 4,230 ಡೋಸ್‌, ಗ್ರಾಮಾಂತರ ಪ್ರದೇಶದ ಆಸ್ಪತ್ರೆಯಲ್ಲಿ 1,600 ಡೋಸ್‌ ಲಸಿಕೆ ಸಂಗ್ರಹದಲ್ಲಿದೆ. ಅಗತ್ಯ ಬಿದ್ದರೆ ಇನ್ನಷ್ಟು ಪ್ರಮಾಣದಲ್ಲಿ ಲಸಿಕೆ ಸಂಗ್ರಹಿಸಲಾಗುತ್ತದೆ. ಯಾವುದೇ ಕಾರಣಕ್ಕೆ ಲಸಿಕೆ ಕಡಿಮೆ ಬೀಳದಂತೆ ನೋಡಿಕೊಳ್ಳುತ್ತೇವೆ ಎಂದು ಎಂಎಸ್‌ಐಎಲ್‌ ಅಧ್ಯಕ್ಷ ಹಾಗೂ ಶಾಸಕ ಎಚ್‌. ಹಾಲಪ್ಪ ಹರತಾಳು ಭರವಸೆ ನೀಡಿದರು.

Advertisement

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಸಿಕೆ ತೆಗೆದುಕೊಳ್ಳಲು ಜನರು ಹಿಂದೇಟು ಹಾಕಬಾರದು. 45 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಲಸಿಕೆ ಪಡೆಯಬೇಕು. ಲಸಿಕೆ ಪಡೆಯುವುದರಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಈಗಾಗಲೇ ಲಸಿಕೆ ಮಹೋತ್ಸವ ನಡೆಸಲಾಗುತ್ತಿದ್ದು, ಗ್ರಾಮಾಂತರ ಪ್ರದೇಶದಲ್ಲಿ ಲಸಿಕೆ ಕೊಡುವುದನ್ನು ಹೆಚ್ಚಿಸುವ ನಿಟ್ಟಿನಲ್ಲಿ ಗ್ರಾಪಂ ಅಧ್ಯಕ್ಷರು, ಪಿಡಿಒ ಸಭೆ ಕರೆದು ಮಾಹಿತಿ ನೀಡಲಾಗಿದೆ ಎಂದರು.

ತಾಲೂಕಿನಲ್ಲಿ ಕೆಎಫ್‌ಡಿ ನಿಯಂತ್ರಣದಲ್ಲಿದೆ. ಆದರೂ ಮೈಮರೆಯಬಾರದು ಎಂದು ಆರೋಗ್ಯ ಇಲಾಖೆಗೆ ಮತ್ತು ಗ್ರಾಪಂಗಳಿಗೆ ಸೂಚನೆ ನೀಡಲಾಗಿದೆ. ಭಾನುವಾರ ಹಸಿರುಮಕ್ಕಿ ಶರಾವತಿ ಹಿನ್ನೀರಿನ ಕಾಡಿನಲ್ಲಿ 10 ಮಂಗಗಳು ಒಂದೇ ಕಡೆ ಸತ್ತು ಬಿದ್ದಿರುವುದಕ್ಕೆ ಕಾರಣ ಏನು ಎನ್ನುವ ಬಗ್ಗೆ ಆರೋಗ್ಯ ಇಲಾಖೆ, ಪಶು ವೈದ್ಯಾಧಿಕಾರಿಗಳ ತಂಡ ಪರಿಶೀಲನೆ ನಡೆಸಲಾಗುತ್ತಿದೆ. ಮೇಲ್ನೋಟಕ್ಕೆ ಇದು ವಿಷ ಪ್ರಾಶನದಿಂದ ಮೃತಪಟ್ಟಿರಬಹುದು ಅಥವಾ ಎಲ್ಲಿಯೋ ಸತ್ತ ಮಂಗಗಳನ್ನು ಇಲ್ಲಿ ತಂದು ಎಸೆದಿರಬೇಕು ಎನ್ನುವ ಅನುಮಾನ ವ್ಯಕ್ತವಾಗಿದೆ ಎಂದರು. ನಗರವ್ಯಾಪ್ತಿಯ ರಾಮನಗರ ಭಾಗದಲ್ಲಿ ಡೆಂಘೀ ಪ್ರಕರಣ ಜಾಸ್ತಿಯಾಗುತ್ತಿದೆ. ಬಿಸಿಲಿನ ತಾಪ ಹೆಚ್ಚಿರುವುದು, ಹಿಂದೆ ಅವೈಜ್ಞಾನಿಕವಾಗಿ ಚರಂಡಿ ನಿರ್ಮಾಣ ಮಾಡಿರುವುದರಿಂದ ಕೊಳಚೆ ನೀರು ನಿಂತು ಸೊಳ್ಳೆ ಉತ್ಪತ್ತಿಯಾಗಿ ಡೆಂಘೀ ಹರಡುವ ಸಾಧ್ಯತೆ ಇದೆ. ಇನ್ನು ಮುಂದೆ ಗುತ್ತಿಗೆದಾರರರಿಗೆ ಇಂತಹ ಚರಂಡಿ ನಿರ್ಮಾಣದ ಬಿಲ್‌ ಪಾವತಿಸದಿರಲು ನಿರ್ಧರಿಸಲಾಗಿದೆ. ನಗರದಲ್ಲಿ ಸ್ವತ್ಛತೆಗೆ ಒತ್ತು ನೀಡಲು ನಗರಸಭೆ ಅಧಿ ಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಬಿ.ಎಚ್‌. ರಸ್ತೆ ಚತುಷ್ಪಥ ನಿರ್ಮಾಣಕ್ಕೆ 77 ಕೋಟಿ ರೂ. ಮಂಜೂರಾಗಿದ್ದು, ಟೆಂಡರ್‌ ಹಂತಕ್ಕೆ ಬಂದಿದೆ. ತ್ಯಾಗರ್ತಿ ಕ್ರಾಸ್‌ನಿಂದ ಎಲ್‌.ಬಿ. ಕಾಲೇಜುವರೆಗೆ 7.5 ಕಿಮೀ ರಸ್ತೆ ನಿರ್ಮಾಣ ಮಾಡಲಾಗುತ್ತದೆ. ಮೊದಲು 6.5 ಕಿಮೀಗೆ 66 ಕೋಟಿ ರೂ. ಮಂಜೂರಾಗಿತ್ತು. ಆದರೆ ಸಂಸದ ಬಿ.ವೈ. ರಾಘವೇಂದ್ರ ಅವರ ಪ್ರಯತ್ನದಿಂದ ಹೆಚ್ಚು ಹಣ ಬಿಡುಗಡೆಯಾಗಿದೆ. ಜೊತೆಗೆ ಹಳೇ ಖಾಸಗಿ ಬಸ್‌ ನಿಲ್ದಾಣವನ್ನು ಪಿಕಪ್‌ ಸ್ಟಾÂಂಡ್‌ ಮಾಡುವಂತೆ ತಿಳಿಸಲಾಗಿತ್ತು. ಇದರ ಬಗ್ಗೆ ಸಹ ಗಮನ ಹರಿಸಲಾಗುತ್ತದೆ ಎಂದರು.

ಗೋಷ್ಠಿಯಲ್ಲಿ ಎಪಿಎಂಸಿ ಅಧ್ಯಕ್ಷ ಚೇತನರಾಜ್‌ ಕಣ್ಣೂರು, ಪ್ರಮುಖರಾದ ಗಣೇಶಪ್ರಸಾದ್‌, ಕೊಟ್ರಪ್ಪ ನೇದರವಳ್ಳಿ, ದೇವೇಂದ್ರಪ್ಪ ಯಲಕುಂದ್ಲಿ, ಅರುಣ ಕುಗ್ವೆ, ಬಿ.ಟಿ. ರವೀಂದ್ರ, ಅರುಣ ಸೂರನಗದ್ದೆ, ವಿನಾಯಕರಾವ್‌ ಮನೆಘಟ್ಟ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next