ಶಿವಮೊಗ್ಗ: ಇಲ್ಲಿನ ಶಿವಪ್ಪ ನಾಯಕ ಮಾರುಕಟ್ಟೆ (ಸಿಟಿ ಸೆಂಟರ್) ಗುತ್ತಿಗೆ ಅವ ಧಿ ಮುಗಿಯುವ ಮೊದಲೇ 99 ವರ್ಷಕ್ಕೆ ಏರಿಸಲು ಪಾಲಿಕೆ ಅಜೆಂಡಾದಲ್ಲಿ ಪ್ರಸ್ತಾಪಿಸಿರುವುದು ಹಾಗೂ ಈ ವಿಷಯ ಮೇಯರ್ ಅವರಿಗೇ ಗೊತ್ತಿಲ್ಲದಿರುವುದು ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಸಿಟಿ ಸೆಂಟರ್ ಮಾಲ್ ಅನ್ನು ಖಾಸಗಿ ಸಂಸ್ಥೆಯೊಂದಕ್ಕೆ 2 ವರ್ಷ ನಿರ್ಮಾಣ ಕಾಮಗಾರಿ ಸೇರಿ 32 ವರ್ಷಕ್ಕೆ ಲೀಸ್ ನೀಡಲಾಗಿತ್ತು. ಅದರಲ್ಲಿ ಈಗ 12 ವರ್ಷ ಪೂರ್ಣಗೊಂಡಿದೆ. ಇನ್ನೂ 20 ವರ್ಷ ಅವಧಿ ಬಾಕಿ ಇರುವಾಗಲೇ ಮಹಾನಗರ ಪಾಲಿಕೆ ಸಭೆಯ ಅಜೆಂಡಾದಲ್ಲಿ ಈ ವಿಷಯ ಸೇರಿಸಿರುವುದು ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ಆಕ್ರೋಶಕ್ಕೆ ಕಾರಣವಾಗಿದೆ.
ಅಲ್ಲದೆ ಗಮನಕ್ಕಿಲ್ಲದೆ ಈ ವಿಷಯ ಚರ್ಚೆಗೆ ಅಂಜೆಡಾದಲ್ಲಿ ಸೇರಿಸಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಯಾವುದೇ ವಿಷಯ ಅಜೆಂಡಾದಲ್ಲಿ ಸೇರ್ಪಡೆಯಾಗಬೇಕಾದರೆ ನಿಯಮದ ಪ್ರಕಾರ, ಮೇಯರ್ ಇಲ್ಲವೇ ಆಯುಕ್ತರಿಂದ ಅನುಮೋದನೆಗೊಳ್ಳಲೇಬೇಕು. ನಂತರ, ಅದನ್ನು ಕೌನ್ಸಿಲ್ ಕಾರ್ಯದರ್ಶಿಗಳು ಗಮನಿಸಬೇಕು. ಬೇಡದ ವಿಚಾರಗಳಿದ್ದರೆ ಅದನ್ನು ಅಲ್ಲಿಯೇ ಕೈಬಿಡಲಾಗುತ್ತದೆ. ಈ ಎರಡೂ ಹಂತಗಳನ್ನು ದಾಟಿ ಈ ವಿಷಯ ಅಜೆಂಡಾದಲ್ಲಿ ಜಾಗ ಪಡೆದಿದ್ದು ಹೇಗೆ ಎಂಬ ಪ್ರಶ್ನೆ ಈಗ ಉದ್ಭವಿಸಿದೆ.
2020 ರಲ್ಲಿ ನಡೆದ ತೆರಿಗೆ ಸ್ಥಾಯಿ ಸಮಿತಿಯಲ್ಲಿ ಈ ವಿಚಾರ ಆಗಿನ ಮೇಯರ್ ಅವರ ಗಮನಕ್ಕೆ ತರದೇ ಅಜೆಂಡಾಗೆ ಸೇರಿಸಲಾಗಿತ್ತು. ಭಾರಿ ಚರ್ಚೆಯ ಬಳಿಕ ಅದನ್ನು ಅಲ್ಲಿಗೆ ಕೈ ಬಿಡಲಾಗಿತ್ತು. ಈಗ ಮತ್ತೆ ಇದು ಮುನ್ನೆಲೆಗೆ ಬಂದಿದೆ. ಪ್ರತಿಪಕ್ಷದವರು ಆಡಳಿತ ಪಕ್ಷದ ಮೇಲೆ ಆರೋಪ ಮಾಡುತ್ತಿದ್ದು, ಆಡಳಿತ ಪಕ್ಷದವರು ಅ ಧಿಕಾರಿಗಳ ತಪ್ಪಿನಿಂದ ಈ ಕೆಲಸ ಆಗಿದೆ ಎಂದು ಜಾರಿಕೊಳ್ಳುತ್ತಿದ್ದಾರೆ.
ಆದರೆ, ಯಾವ ಉದ್ದೇಶಕ್ಕಾಗಿ ಈ ವಿಷಯ ಪದೇ ಪದೆ ಅಜೆಂಡಾದಲ್ಲಿ ಸೇರ್ಪಡೆಯಾಗುತ್ತಿದೆ ಎಂಬುದು ಯಕ್ಷಪ್ರಶ್ನೆಯಾಗಿದೆ. ಪಾಲಿಕೆಯಲ್ಲಿ ಗುರುವಾರ ಜಿಲ್ಲಾವಾಣಿಜ್ಯ ಮತ್ತು ಕೈಗಾರಿಕಾ ಸಂಘಗಳು ಹಾಗೂ ಪಾಲಿಕೆಯ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆದಿತ್ತು. ಆಗ ಲೀಸ್ ಅವ ಧಿ 99 ವರ್ಷಕ್ಕೆ ವಿಸ್ತರಣೆ ಮಾಡುವ ವಿಚಾರ ಅಜೆಂಡಾದಲ್ಲಿರುವುದು ಗಮನಕ್ಕೆ ಬಂದಿದೆ. ಆದರೆ, ಮೇಯರ್ ಅವರು ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗದು ಎಂದು ಕೈಬಿಟ್ಟಿದ್ದಾರೆ.