ಸಾಗರ: ಮಲೆನಾಡು ಭಾಗದ ರೈತರು ಕಾಡುಪ್ರಾಣಿಗಳ ಕಾಟದಿಂದ ರೋಸಿ ಹೋಗಿದ್ದಾರೆ. ಕಾಡುಪ್ರಾಣಿಗಳ ದಾಳಿಯಿಂದಾಗಿ ಫಸಲಿನ ಜೊತೆಗೆ ತಮ್ಮನ್ನು ರಕ್ಷಣೆ ಮಾಡಿಕೊಳ್ಳಲು ಹರಸಾಹಸ ಪಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ರಾಜ್ಯ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ತಿಳಿಸಿದರು.
ಇಲ್ಲಿನ ರಾಘವೇಶ್ವರ ಸಭಾಭವನದಲ್ಲಿ ಗುರುವಾರ ಮಲೆನಾಡು ಪಾರಂಪರಿಕ ಕೃಷಿ ಸಂರಕ್ಷಣಾ ಸಮಿತಿ ವತಿಯಿಂದ ಕಾಡುಪ್ರಾಣಿಗಳಿಂದ ಕೃಷಿ ಸಂರಕ್ಷಣೆ ವಿಷಯ ಕುರಿತು ಆಯೋಜಿಸಲಾಗಿದ್ದ ಸಮಾಲೋಚನಾ ಸಭೆಯನುದ್ದೇಶಿಸಿ ಅವರು ಮಾತನಾಡಿದರು.
ಮಲೆನಾಡು ಭಾಗದ ರೈತರ ತಾಳ್ಮೆ ಪರೀಕ್ಷೆ ಮಾಡುವ ಕೆಲಸ ನಡೆಯುತ್ತಿದೆ. ಕಾಡುಪ್ರಾಣಿಗಳ ಹಾವಳಿ ಹಿಂದಿನಿಂದಲೂ ಇತ್ತು. ಈಗೀಗ ಅದು ವಿಪರೀತಕ್ಕೆ ಹೋಗಿದ್ದು, ರೈತರು, ಬೆಳೆಗಾರರು ರೊಚ್ಚಿಗೆದ್ದರೆ ಅವರನ್ನು ತಡೆಯಲು ಸಾಧ್ಯವಿಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಸರ್ಕಾರ ಕಾಡುಪ್ರಾಣಿಗಳ ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾನೂನು ರೂಪಿಸಿದರೆ ಸಾಲದು. ಸ್ಥಳೀಯವಾಗಿ ನಾವು ಯಾವ ರೀತಿ ನಿಗಾ ವಹಿಸಬೇಕು ಎನ್ನುವ ಕುರಿತು ಸಹ ಆತ್ಮಾವಲೋಕನ ಅಗತ್ಯ. ಕಾಡುಪ್ರಾಣಿಗಳ ದಾಳಿಯಿಂದ ಕಳೆದುಕೊಳ್ಳುವ ಬೆಳೆಗೆ ಕೊಡುತ್ತಿರುವ ಪರಿಹಾರ ಜಾಸ್ತಿ ಮಾಡಬೇಕು. ಕಾಡಿನ ನಡುವೆ ಸೋಲಾರ್ ಬೇಲಿ ನಿರ್ಮಾಣ, ಪ್ರಗತಿಪರ ಕೃಷಿಕರು ತಮ್ಮ ತೋಟದಲ್ಲಿ ಕಾಡು ಪ್ರಾಣಿಗಳ ಹಾವಳಿ ತಪ್ಪಿಸಲು ಅನುಸರಿಸಿರುವ ಕ್ರಮಗಳ ಬಗ್ಗೆ ಗಂಭೀರ ಚರ್ಚೆಯಾಗಬೇಕು. ರಾಜ್ಯದಲ್ಲಿ ಕಾಡುಪ್ರಾಣಿಗಳ ದಾಳಿಯಿಂದ ಪ್ರತಿವರ್ಷ ಆಗುತ್ತಿರುವ ಹಾನಿಯ ಅಂದಾಜು ಪಟ್ಟಿ ತಯಾರಿಸಿ ಅದನ್ನು ಸರ್ಕಾರಕ್ಕೆ ಸಲ್ಲಿಸುವ ಮೂಲಕ ಸೂಕ್ತ ಪರಿಹಾರಕ್ಕೆ ಒತ್ತಾಯ ಮಾಡಬೇಕಾಗಿದೆ. ಮಲೆನಾಡಿನ ಜನರು ಕಾಡುಪ್ರಾಣಿಗಳ ಹಾವಳಿಯಿಂದ ಅನುಭವಿಸುತ್ತಿರುವ ನಷ್ಟವನ್ನು ಪರಿಹರಿಸಲು ಸುಮಾರು 100 ಕೋಟಿ ರೂ. ಬಜೆಟ್‌ನಲ್ಲಿ ಘೋಷಣೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿತ್ತು. ಆದರೆ ಕೊರೊನಾ ಹಿನ್ನೆಲೆಯಲ್ಲಿ ಅದು ಸಾಧ್ಯವಾಗಿಲ್ಲ. ಈ ಸಮಾಲೋಚನಾ ಸಭೆಯಲ್ಲಿ ಕೈಗೊಳ್ಳುವ ನಿರ್ಣಯವನ್ನು ಸರ್ಕಾರದ ಎದುರು ಇರಿಸಲಾಗುತ್ತದೆ ಎಂದು ಹೇಳಿದರು.
ಸಮಿತಿ ಅಧ್ಯಕ್ಷ ಎಂ.ಜಿ. ರಾಮಚಂದ್ರ ಮಾತನಾಡಿ, ಮಂಗ, ಕಾಡೆಮ್ಮೆ, ಚಿರತೆ, ಹುಲಿ, ಕಾಡುಹಂದಿ, ಕೆಂಪಳಿಲು ಹೀಗೆ ತರಹೇವಾರು ಕಾಡುಪ್ರಾಣಿಗಳು ತೋಟಗಳಿಗೆ ದಾಳಿ ಮಾಡುತ್ತಿವೆ. ಇದರಿಂದ ನಮ್ಮ ಬೆಳೆಗಳನ್ನು ಉಳಿಸಿಕೊಳ್ಳಲು ಸಹ ಸಾಧ್ಯವಾಗುತ್ತಿಲ್ಲ. ವಿಪರೀತವಾಗಿ ಕಾಡು ಕಡಿದಿರುವುದು ಸಹ ಇದಕ್ಕೆ ಕಾರಣವಾಗಿರಬಹುದು ಎಂದರು.
ಜಿಪಂ ಸದಸ್ಯ ರಾಜಶೇಖರ ಗಾಳಿಪುರ, ಎಪಿಎಂಸಿ ಅಧ್ಯಕ್ಷ ಚೇತನರಾಜ ಕಣ್ಣೂರು, ಮಲೆನಾಡು ಅಭಿವೃದ್ಧಿ ಮಂಡಳಿ ಸದಸ್ಯ ಬಿ.ಎಚ್. ರಾಘವೇಂದ್ರ, ಜೀವವೈವಿಧ್ಯ ಮಂಡಳಿ ಸದಸ್ಯ ವೆಂಕಟೇಶ್ ಕವಲಕೋಡು, ರಾಜ್ಯ ಯೋಜನಾ ಆಯೋಗದ ಸದಸ್ಯ ಪ್ರಸನ್ನ ಕೆರೆಕೈ, ಸಹಾಯಕ ಅರಣ್ಯ ಸಂರಕ್ಷಣಾ ಧಿಕಾರಿ ಶ್ರೀಧರ್, ಪ್ರಗತಿಪರ ಕೃಷಿಕ ಜಿ.ಎಂ. ಹೆಗಡೆ ಬಾಳೆಸರ, ಎಲ್.ಟಿ. ತಿಮ್ಮಪ್ಪ, ವೆಂಕಟರಾಮು, ಸತ್ಯನಾರಾಯಣ ಭಾಗಿ, ಪ್ರಖ್ಯಾತ ರಾವ್ ಇನ್ನಿತರರು ಇದ್ದರು.
ಅಶೋಕ್ ಮತ್ತು ರವಿ ಕುಗ್ವೆ ಪ್ರಾರ್ಥಿಸಿದರು. ಮುರಳಿ ವಿ.ಎನ್. ಸ್ವಾಗತಿಸಿದರು. ಪರಮೇಶ್ವರ ಅರಳಗೋಡು ವಂದಿಸಿದರು. ರಾಧಾಕೃಷ್ಣ ಬಂದಗದ್ದೆ ನಿರೂಪಿಸಿದರು.