ಶಿವಮೊಗ್ಗ: ಮಾಸ್ಕ್ ಧರಿಸದಿದ್ದರೆ ಇನ್ನು ಮುಂದೆ ಕಟ್ಟುನಿಟ್ಟಾಗಿ ದಂಡ ವಿಧಿ ಸಲಾಗುವುದೆಂದು ಕೊರೊನಾ ನಿಯಂತ್ರಣದ ಬಗ್ಗೆ ಗುರುವಾರ ನಡೆದ ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಜಿಲ್ಲಾ ಆರೋಗ್ಯ ಇಲಾಖೆ ಮತ್ತು ಮಹಾನಗರ ಪಾಲಿಕೆಯ ಆರೋಗ್ಯ ಸ್ಥಾಯಿ ಸಮಿತಿ ವತಿಯಿಂದ ಪಾಲಿಕೆ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕೋವಿಡ್ ಜಾಗೃತಿ ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಗಳು ಕೋವಿಡ್ ಲಸಿಕೆಯ ಬಗ್ಗೆ ಮತ್ತು ನಿಯಂತ್ರಣ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ನಗರದಲ್ಲಿ ಒಟ್ಟು 22 ಲಸಿಕಾ ಕೇಂದ್ರಗಳನ್ನು ತೆರೆದಿದ್ದು, ಅದರಲ್ಲಿ 12 ಖಾಸಗಿ ಆಸ್ಪತ್ರೆ, 8 ನಗರ ಆರೋಗ್ಯ ಕೇಂದ್ರ, ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯಲ್ಲಿ 5 ಕೇಂದ್ರಗಳು ಹಾಗೂ ಜಿಲ್ಲಾ ಆಯುರ್ವೇದ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ನೀಡಲಾಗುವುದು ಎಂದರು.
ಈಗಾಗಲೇ ಜಿಲ್ಲೆಯಲ್ಲಿ 1.20 ಲಕ್ಷ ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ. ಕೋವಿ ಶೀಲ್ಡ್ ಮತ್ತು ಕೋ ವ್ಯಾಕ್ಸಿನ್ ಲಸಿಕೆ ನೀಡಲಾಗುತ್ತಿದ್ದು, ನೂರಕ್ಕೆ 95 ಜನರಿಗೆ ಇದರಿಂದ ರೋಗ ನಿರೋಧಕ ಶಕ್ತಿ ವೃದ್ಧಿಯಾಗುತ್ತದೆ. 5 ಜನರಲ್ಲಿ ಸ್ವಲ್ಪ ವಿಳಂಬವಾಗಬಹುದು. ಲಸಿಕೆ ಕೊಟ್ಟ 24 ಗಂಟೆಯೊಳಗೆ ಸಣ್ಣಪುಟ್ಟ ಅಡ್ಡ ಪರಿಣಾಮ ಇರಬಹುದು. ಆದರೆ, ಆಸ್ಪತ್ರೆ ಸೇರಬೇಕಾದ ಯಾವುದೇ ಘಟನೆಗಳು ಜಿಲ್ಲೆಯಲ್ಲಿ ಸಂಭವಿಸಿಲ್ಲ. ಅದರ ಅಗತ್ಯವೂ ಇಲ್ಲ. ಅಡ್ಡ ಪರಿಣಾಮದ ಭಯ ಬೇಡ. ಜಿಲ್ಲೆಯಲ್ಲಿ ನಾಲ್ಕೂವರೆ ಲಕ್ಷ ವ್ಯಾಕ್ಸಿನೇಷನ್ ಈ ತಿಂಗಳ ಅಂತ್ಯದೊಳಗೆ ಮುಗಿಸುವ ಗುರಿಯಿದೆ. 100ಕ್ಕೂ ಹೆಚ್ಚು ಕಾರ್ಮಿಕರನ್ನು ಹೊಂದಿದ ಸಂಸ್ಥೆಯವರು ಬಯಸಿದಲ್ಲಿ ಸ್ಥಳಕ್ಕೆ ಹೋಗಿ ವ್ಯಾಕ್ಸಿನೇಷನ್ ಮಾಡಲಾಗುವುದು. ಆಧಾರ್ ಕಾರ್ಡ್ ಸೇರಿದಂತೆ 13 ದಾಖಲೆಗಳಲ್ಲಿ ಯಾವುದಾದರೊಂದು ದಾಖಲೆ ನೀಡಿ, ಆನ್‌ಲೈನ್ ಮೂಲಕವೂ ಮತ್ತು ವ್ಯಾಕ್ಸಿನೇಷನ್ ಕೇಂದ್ರಗಳಲ್ಲಿ ಸ್ಥಳದಲ್ಲೇ ನೋಂದಣಿ ಮಾಡಿ ಸಾರ್ವಜನಿಕರು ವ್ಯಾಕ್ಸಿನೇಷನ್ ಪಡೆಯಬಹುದು. ಸರ್ಕಾರಿ ಕೇಂದ್ರಗಳಲ್ಲಿ ಉಚಿತ, ಖಾಸಗೀ ಆಸ್ಪತ್ರೆಗಳಲ್ಲಿ 250 ರೂ.ಗಳನ್ನು ನೀಡಬೇಕಾಗುತ್ತದೆ. ಕೋವಿ ಶೀಲ್ಡ್ ಲಸಿಕೆ ತೆಗೆದುಕೊಂಡರೆ 2ನೇ ಡೋಸ್ 6 ವಾರಗಳ ಬಳಿಕ ತೆಗೆದುಕೊಳ್ಳಬೇಕು. ಕೋವ್ಯಾಕ್ಸಿನ್ ಆದರೆ, 4 ವಾರಗಳ ಬಳಿಕ 2ನೇ ಡೋಸ್ ಆಗಿ ಮತ್ತೆ ಅದೇ ಲಸಿಕೆಯನ್ನು ಪಡೆಯಬೇಕು ಎಂದರು.
ಸಭೆಯಲ್ಲಿ ಮೇಯರ್ ಸುನೀತಾ ಅಣ್ಣಪ್ಪ, ಉಪ ಮೇಯರ್ ಶಂಕರ್ ಗನ್ನಿ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಧೀರರಾಜ್ ಹೊನ್ನವಿಲೆ, ಸದಸ್ಯರಾದ ರಮೇಶ್ ಹೆಗ್ಗೆಡೆ, ಆರ್.ಸಿ.® ಾಯಕ್, ಕಲ್ಪನಾ ರಾಮು, ಮಂಜುನಾಥ್, ಆರೋಗ್ಯ ಇಲಾಖೆಯ ಡಾ| ನಾಗರಾಜ್ ನಾಯಕ್, ಡಾ| ಚಂದ್ರಶೇಖರ್, ಐಎಂಎ ಅಧ್ಯಕ್ಷ ಪರಮೇಶ್ವರ್ ಸಿಗ್ಗಾವಿ ಮೊದಲಾದವರು ಇದ್ದರು.