Advertisement

ಬಡವರಿಗೆ ಸಹಾಯ ಮಾಡುವ ಮನೋಭಾವ ಬೆಳೆಸಿಕೊಳ್ಳಿ

06:45 PM Apr 08, 2021 | Shreeraj Acharya |

ಸೊರಬ: ಗ್ರಾಮೀಣ ಪ್ರದೇಶದಲ್ಲಿರುವ ಬಡವರ ಸೇವೆ ಮಾಡಲು ಸಾಕಷ್ಟು ಅವಕಾಶಗಳಿದ್ದು, ಉಳ್ಳವರು ಇಲ್ಲದವರಿಗೆ ಸಹಕಾರ ನೀಡುವ ಮನೋಭಾವ ಬೆಳೆಸಿಕೊಳ್ಳುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಕೊಳ್ಳಬೇಕು ಎಂದು ಸಹಕಾರಿ ಧುರೀಣ ಎಚ್‌.ಎಸ್‌. ಮಂಜಪ್ಪ ಹೇಳಿದರು.

Advertisement

ತಾಲೂಕಿನ ಹೊಸಬಾಳೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಶಾಶ್ವತಿ ಮಹಿಳಾ ಮಂಡಳಿಯ 5ನೇ ವರ್ಷದ ವಾರ್ಷೀಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಳೆದ 50 ವರ್ಷಗಳಿಂದೀಚೆಗೆ ಜಾತಿ ವ್ಯವಸ್ಥೆಗಳು ಕ್ರಮೇಣವಾಗಿ ಇಳಿಮುಖವಾಗಿದೆ. ಪ್ರತಿಯೊಬ್ಬರನ್ನು ಮಾನವೀಯ ನೆಲೆಗಟ್ಟಿನಲ್ಲಿ ಕಂಡಾಗ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯವಿದೆ. ಹಸಿದವರಿಗೆ ಅನ್ನ ನೀಡುವುದು ಮಹಾ ಪುಣ್ಯದ ಕೆಲಸವಾಗಿದೆ. ಈ ನಿಟ್ಟಿನಲ್ಲಿ ಶಾಶ್ವತಿ ಮಹಿಳಾ ಮಂಡಳಿಯವರು ಆಯ್ದ ಕೆಲ ಬಡವರಿಗೆ ನಿತ್ಯ ಆಹಾರ ಪೂರೈಸುವ ಯೋಜನೆ ಹಮ್ಮಿಕೊಂಡಿರುವುದು ಶ್ಲಾಘನೀಯ. ಕಳೆದ ಐದು ವರ್ಷಗಳಿಂದ ಮಹಿಳಾ ಮಂಡಳಿಯು ತಾಲೂಕಿನಲ್ಲಿಯೇ ಮಾದರಿ ಸಂಘವಾಗಿ ಹೊರಹೊಮ್ಮುತ್ತಿದೆ ಎಂದರು. ಶಾಶ್ವತಿ ಮಹಿಳಾ ಮಂಡಳಿಯ ಸಂಸ್ಥಾಪಕಿ ಪ್ರಶಾಂತ ಜಗದೀಶ ಜೋಯಿಸ್‌ ಮಾತನಾಡಿ, ಸಮಾಜ ಸೇವೆಯಲ್ಲಿ ತೊಡಗುವವರಿಗೆ ಅಡೆತಡೆಗಳು ಹೆಚ್ಚು ಕಾಡುತ್ತದೆ. ಅವುಗಳನ್ನೆಲ್ಲವನ್ನು ಎದುರಿಸಿ ಮುನ್ನಡೆಯಬೇಕಾಗುತ್ತದೆ. ಗ್ರಾಮಿಣ ಪ್ರದೇಶಗಳಲ್ಲಿ ಮಹಿಳಾ ಮಂಡಳಿಗಳನ್ನು ನಡೆಸುವುದು ಕಷ್ಟ. ಸಮಾಜ ಸೇವೆಯಲ್ಲಿ ಸಿಗುವ ಆತ್ಮ ತೃಪ್ತಿ ಬೇರೆ ಯಾವುದೇ ಕಾರ್ಯದಲ್ಲಿಯೂ ಸಿಗುವುದಿಲ್ಲ. ಪ್ರತಿಯೊಬ್ಬರಲ್ಲೂ ಸಾಧನೆಯ ಕನಸುಗಳಿರಬೇಕು. ಕನಸಿಗೆ ತಕ್ಕಂತೆ ಶ್ರಮವೂ ಕೂಡ ಅಗತ್ಯ. ಈ ನಿಟ್ಟಿನಲ್ಲಿ ತಾವು ಕೈಗೊಳ್ಳುವ ನಿರ್ಧಾರಗಳಿಗೆ ಕುಟುಂಬಸ್ಥರು ಸಹ ಬೆಂಬಲ ನೀಡಿದ್ದರ ಪರಿಣಾಮ ಪ್ರಸ್ತುತ ಆಯ್ದ ಕೆಲ ಬಡಕುಟುಂಬಗಳಿಗೆ ಆಹಾರ ಪೂರೈಸುವ ಯೋಜನೆಯನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಯಿತು ಎಂದರು.

ಮಹಿಳಾ ಮಂಡಳಿಯ ಕಾರ್ಯದರ್ಶಿ ನಿರುಪಮಾ ಪ್ರಾಸ್ತಾವಿಕವಾಗಿ ಮಾತನಾಡಿ, ಮಂಡಳಿಯಿಂದ ಕಳೆದ ಐದು ವರ್ಷಗಳಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ. ಎರೆ ಹುಳು ಗೊಬ್ಬರ ತಯಾರಿಕಾ ಘಟಕ, ಅಡಕೆ ಹಾಳೆಯಿಂದ ತಟ್ಟೆ ಹಾಗೂ ದೊನ್ನೆ ಸೇರಿದಂತೆ ವಿವಿಧ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ಇದರಿಂದ ಸುಮಾರು 7-8 ಜನರಿಗೆ ಉದ್ಯೋಗವಕಾಶವು ದೊರೆತಿದೆ. ಈ ಹಿಂದೆ ವೃದ್ಧಾಶ್ರಮ ತೆರೆಯಲಾಗಿತ್ತು. ಕಾರಣಾಂತರಗಳಿಂದ ಸದ್ಯ ಸ್ಥಗಿತಗೊಂಡಿದೆ. ಇದೀಗ ರಿಯಾಯಿತಿ ದರದಲ್ಲಿ ಆಹಾರ ಪದಾರ್ಥಗಳನ್ನು ನೀಡುವ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಇಂತಹ ಕಾರ್ಯಗಳಿಗೆ ಸಾರ್ವಜನಿಕರ ಸಹಕಾರ ನೀಡಬೇಕು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಶಾಶ್ವತಿ ಉಪಹಾರ ಮಂದಿರಕ್ಕೆ ಸಹಕಾರಿ ಧುರೀಣ ಎಚ್‌.ಎಸ್‌. ಮಂಜಪ್ಪ ಚಾಲನೆ ನೀಡಿದರು. ಶಾಶ್ವತಿ ಮಹಿಳಾ ಮಂಡಳಿ ಅಧ್ಯಕ್ಷೆ ವಿದ್ಯಾ ಅಶೋಕ್‌ ಅಧ್ಯಕ್ಷತೆ ವಹಿಸಿದ್ದರು.

ರಾಜ್ಯ ಸರ್ಕಾರದ ನಿವೃತ್ತ ಜಂಟಿ ಕಾರ್ಯದರ್ಶಿ ಜಗದೀಶ ಜೋಯಿಸ್‌, ಸಮಾಜ ಸೇವಕ ಕೃಷ್ಣಮೂರ್ತಿ, ಪ್ರಭಾಕರ ಹೊಸಬಾಳೆ, ಮಂಜುನಾಥ, ಅಶೋಕ ಸೇರಿದಂತೆ ಮಹಿಳಾ ಮಂಡಳಿಯ ಸದಸ್ಯರು, ಇತರರಿದ್ದರು. ಪ್ರೇರಣಾ ಸಂಪನ್ಮೂಲ ಕೇಂದ್ರದ ಡಾ. ಮೇಘನಾ ಜೋಯಿಸ್‌ ನಿರ್ವಹಿಸಿದರು

Advertisement

Udayavani is now on Telegram. Click here to join our channel and stay updated with the latest news.

Next