ಶಿವಮೊಗ್ಗ: ಪ್ರತಿವರ್ಷ ಏ.2ರಂದು ರಾಜ್ಯದ ಎಲ್ಲಾ ಪೊಲೀಸ್ ಘಟಕಗಳಲ್ಲಿ ಪೊಲೀಸ್ ಧ್ವಜ ದಿನಾಚರಣೆಯನ್ನು ಆಚರಿಸಲಾಗುತ್ತದೆ. 1965, ಏ.2ರಂದು ರಾಜ್ಯ ಪೊಲೀಸ್ ಕಾಯ್ದೆ ಜಾರಿಯಲ್ಲಿ ಬಂದಿದ್ದು, ಈ ದಿನವನ್ನು ಪೊಲೀಸ್ ಧ್ವಜ ದಿನಾಚರಣೆಯನ್ನಾಗಿ ಆಚರಿಸಿ ಪೊಲೀಸ್ ಸೇವೆಯಲ್ಲಿ ಇರುವವರೆಲ್ಲರೂ ತಮ್ಮನ್ನು ಸೇವೆಗೆ ಪುನರ್ ಸಮರ್ಪಿಸಿಕೊಳ್ಳುವುದಲ್ಲದೆ ಈ ದಿನವನ್ನು “ಪೊಲೀಸ್ ಕಲ್ಯಾಣ ದಿನ’ ವನ್ನಾಗಿ ಕೂಡಾ ಆಚರಿಸಲಾಗುತ್ತದೆ.
ಈ ವಿಶೇಷ ದಿನದಂದು ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರನ್ನು ನೆನಪಿಸಿಕೊಂಡು ಅವರ ಕಲ್ಯಾಣ ಕಾರ್ಯಕ್ರಮವನ್ನು ಚಿಂತಿಸಲಾಗುತ್ತದೆ ಎಂದು ಶಿವಮೊಗ್ಗ ಜಿಲ್ಲೆಯ ನಿವೃತ್ತ ಸಿ.ಪಿ.ಐ. ಜಿ.ವಿ. ಗಣೇಶಪ್ಪ ಹೇಳಿದರು.
ನಗರದ ಜಿಲ್ಲಾ ಪೋಲೀಸ್ ಕವಾಯತು ಮೈದಾನದಲ್ಲಿ ಆಯೋಜಿಸಿದ್ದ ಪೋಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಜೀವನದಲ್ಲಿ ಅತ್ಯಂತ ಸುಂದರವಾದ ಘನತೆ ಹೊಂದಿರುವ ಇಲಾಖೆ ಪೊಲೀಸ್ ಇಲಾಖೆ. ಈ ಇಲಾಖೆಯ ಘನತೆ- ಗೌರವ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ. ದೇಶದಲ್ಲೇ ಅತ್ಯಂತ ಹೆಮ್ಮೆ ಪಡುವ ಇಲಾಖೆ ನಮ್ಮ ಕರ್ನಾಟಕ ಪೊಲೀಸ್ ಇಲಾಖೆ. ಈ ಒಂದು ರೀತಿಯಲ್ಲಿ ಹೆಸರುವಾಸಿಯಾಗಿರುವ ಇಲಾಖೆಯನ್ನು ಇದೇ ರೀತಿಯಾಗಿ ಮುಂದುವರಿಸಿಕೊಂಡು ಹೋಗಲು ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಪಣ ತೂಟ್ಟು ಕಾರ್ಯ ನಿರ್ವಹಿಸಬೇಕು. ವೃತ್ತಿಯನ್ನು ಕಾರ್ಯನಿಷ್ಠೆಯಿಂದ ನಿರ್ವಹಿಸಿದ್ದೇ ಆದರೆ ಜೀವನದಲ್ಲಿ ಒಂದು ಉನ್ನತ ಗುರಿ ತಲುಪಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಇಲಾಖೆಯಿಂದ ನಿವೃತ್ತರಾದ ಅ ಧಿಕಾರಿಗಳು ಮತ್ತು ಸಿಬ್ಬಂದಿಗೆ ನಿವೃತ್ತಿ ಗುರುತಿನ ಚೀಟಿ, ಕಟ್ಟಡಗಳು, ಗ್ರಂಥಾಲಯ, ನಿವೃತ್ತ ಪೊಲೀಸ್ ಅಧಿ ಕಾರಿಗಳ ಮತ್ತು ಸಿಬ್ಬಂದಿ ಭವನ ಹಾಗೂ ಇನ್ನೂ ಹಲವು ಬೇಡಿಕೆ ಅ ಧಿಕಾರಿಗಳ ಮುಂದಿಟ್ಟರು.
ಕಾರ್ಯಕ್ರಮದಲ್ಲಿ ಎಂಟು ತುಕಡಿಗಳು ಪಥಸಂಚಲನದಲ್ಲಿ ಭಾಗವಹಿಸಿ ಗಮನ ಸೆಳೆದವು. ಎಸ್ಪಿ ಕೆ.ಎಂ ಶಾಂತರಾಜು, ಮಹಾನಗರ ಪಾಲಿಕೆಯ ಮೇಯರ್ ಸುನಿತ ಅಣ್ಣಪ್ಪ, ಉಪ ಮೇಯರ್ ಶಂಕರ್ ಗನ್ನಿ ಮತ್ತಿತರರು ಇದ್ದರು.