ಶಿವಮೊಗ್ಗ: ಆಡಳಿತ ಮತ್ತು ವಿಪಕ್ಷಗಳ ಗದ್ದಲ, ಗಲಾಟೆ, ಕೂಗಾಟ ಪ್ರತಿಭಟನೆಯ ನಡುವೆ ಮಹಾನಗರ ಪಾಲಿಕೆಯ 2020-21 ನೇ ಸಾಲಿನ 281.14 ಲಕ್ಷ ರೂ. ಉಳಿತಾಯ ಬಜೆಟ್ ಬುಧವಾರ ಮಂಡನೆಯಾಯಿತು. ತೆರಿಗೆ ನಿರ್ಧರಣೆ ಹಣಕಾಸು ಮತ್ತು ಅಪೀಲುಗಳಿಗಾಗಿ ಸ್ಥಾಯಿ ಸಮಿತಿ ಅಧ್ಯಕ್ಷೆಯಾಗಿರುವ ಅನಿತಾ ರವಿಶಂಕರ್ ಬಜೆಟ್ ಮಂಡಿಸಿದರು.
ಬಜೆಟ್ ಮಂಡನೆ ಪ್ರಾರಂಭಿಸುತ್ತಿದ್ದಂತೆ ವಿರೋಧ ಪಕ್ಷವಾದ ಕಾಂಗ್ರೆಸ್ ಸದಸ್ಯರು ಬಜೆಟ್ ಮಂಡನೆಗೆ ಅವಕಾಶ ಕೊಡದೆ ಘೋಷಣೆ ಕೂಗುತ್ತಾ ಇದು ಸುಳ್ಳಿನ ಕಂತೆಯ ಬಜೆಟ್ ಇದೊಂದು ಕಾಗದದ ಹಾಳೆ ಕಳೆದ ಸಾರಿ ಮಂಡಿಸಿದ ಬಜೆಟ್‌ನ ಹಣವೇ ನ್ಯೂನತೆಯಿಂದ ಕೂಡಿದೆ. ಅದು ಈ ಬಾರಿಯ ಬಜೆಟ್ ಕೂಡ ಮುಂದುವರಿದಿದೆ. ಹಾಗಾಗಿ ಬಜೆಟ್ ಮಂಡಿಸಲು ಬಿಡುವುದಿಲ್ಲ ಎಂದು ಬಾವಿಗಿಳಿದು ಪ್ರತಿಭಟನೆ ಮಾಡಿದರು.
ವಿಪಕ್ಷ ನಾಯಕಿ ಯಮುನಾ ರಂಗೇಗೌಡ, ಎಚ್ .ಸಿ.ಯೋಗೀಶ್, ನಾಗರಾಜ್ ಕಂಕಾರಿ, ರಮೇಶ್ ಹೆಗ್ಡೆ, ಮಂಜುಳಾ ಶಿವಣ್ಣ, ರೇಖಾ ರಂಗನಾಥ್, ಸೇರಿದಂತೆ ಹಲವರಿದ್ದರು. ಪ್ರತಿಭಟನೆ ಕೂಗಾಟ ಮತ್ತು ಗದ್ದಲದ ನಡುವೆಯೇ ಅನಿತಾ ರವಿಶಂಕರ್ ಬಜೆಟ್ ಮುಖ್ಯಾಂಶಗಳನ್ನು ಓದಲು ಆರಂಭಿಸಿದರು. ಪಾಲಿಕೆಯ ವ್ಯಾಪ್ತಿಗಳ ಕೆರೆಗಳ ಕಾಯಕಲ್ಪಕ್ಕೆ 1 ಕೋಟಿ ಎಂದು ಸುಳ್ಳು ಹೇಳಲಾಗಿದೆ. ಸ್ತ್ರೀ ಸಬಲೀಕರಣಕ್ಕೆ 10 ಸಾವಿರ, ರಸ್ತೆಗಳ ಸೌಂದರ್ಯಕ್ಕೆ 50 ಲಕ್ಷ, ಜನಪ್ರತಿನಿಧಿ ಗಳ ಸಮಾಲೋಚನೆ ಕೊಠಡಿಗೆ 50 ಲಕ್ಷ, ಮೀನು ಮತ್ತು ಮಾಂಸ ಮಾರುಕಟ್ಟೆಗೆ 50 ಲಕ್ಷ, ಕಸಾಯಿಖಾನೆಗೆ 25 ಲಕ್ಷ ಎಂದು ಹೇಳಲಾಗುತ್ತಿದೆ. ಆದರೆ ಇದೆಲ್ಲವೂ ಸುಳ್ಳು ಎಂದು ವಿರೋಧ ಪಕ್ಷದವರು ಆರೋಪಿಸಿದರು. 2019-20 ರಲ್ಲಿಯೂ ಕೂಡ ಇದೇ ನ್ಯೂನತೆಗಳಿದ್ದವು. ಗೋವು ಸಂರಕ್ಷಣೆ ಯೋಜನೆಗೆ 50 ಲಕ್ಷ ಎಂದು ಘೋಷಿಸಲಾಗಿತ್ತು. ಆದರೆ ಸಂರಕ್ಷಣೆ ಎಲ್ಲಿದೆ. ಸಿದ್ಧಗಂಗಾ ಶ್ರೀ ವಿದ್ಯಾ ಸರಸ್ವತಿ ಯೋಜನೆಗೆ 40 ಲಕ್ಷ ನಿಗದಿ ಮಾಡಲಾಗಿತ್ತು. ಆದರೆ ಎಲ್ಲಿದೆ ಇದು ಶ್ರೀಗಳಿಗೆ ಮಾಡಿದ ಅವಮಾನ. ಲವ-ಕುಶ ಮಕ್ಕಳ ಕಲ್ಯಾಣ ಯೋಜನೆ 10 ಲಕ್ಷ ಕೂಡ ನನೆಗುದಿಗೆ ಬಿದ್ದು, ಶ್ರೀ ರಾಮನ ಮಕ್ಕಳನ್ನು ಅವಮಾನಿಸಲಾಗಿದೆ. ಡಾ.ಅಬ್ದುಲ್ ಕಲಾಂ ಹೆಸರಿನಲ್ಲಿಯೂ ಕೂಡ ಸುಳ್ಳು ಹೇಳಲಾಗಿದೆ ಎಂದು ಕಾಂಗ್ರೆಸ್ ಸದಸ್ಯರು ಆರೋಪ ಮಾಡಿದರು.
ಇದರ ಪ್ರಕಾರ 2021-22ನೇ ಸಾಲಿನಲ್ಲಿ ನಗದು 11352.08 ಲಕ್ಷ ಇದ್ದು, ರಾಜಸ್ವ ಆದಾಯ 11227.91 ಲಕ್ಷ ಆಗಿದೆ. ಬಂಡವಾಳ ಆದಾಯ 4386.78 ಆಗಿದೆ. ಅಸಾಧಾರಣ ಆದಾಯ 1882.37 ಆಗಿದೆ. ಒಟ್ಟು 28849.14 ಲಕ್ಷ ಜಮೆ ಆಗಿದೆ. ಇದರಲ್ಲಿ ರಾಜಸ್ವ ವೆಚ್ಚ 9937.62 ಲಕ್ಷ. ಬಂಡವಾಳ ವೆಚ್ಚ 16118.00 ಲಕ್ಷ, ಅಸಾಧಾರಣ ವೆಚ್ಚ 2511.37 ಲಕ್ಷ ಒಟ್ಟು 28567.99 ಲಕ್ಷ ಆಗಿದ್ದು, 281.14 ಉಳಿತಾಯ ಬಜೆಟ್ ಇದಾಗಿದೆ. ಆಡಳಿತಾರೂಢ ಬಿಜೆಪಿಯಿಂದ ಮಂಡಿಸಿರುವ ಬಜೆಟ್ ಏಕ ಪಕ್ಷೀಯವಾಗಿದೆ. ಸಂಘ-ಸಂಸ್ಥೆಗಳ ಅಭಿಪ್ರಾಯಗಳಿಗೆ ಮನ್ನಣೆ ನೀಡುತ್ತಿಲ್ಲ. ಇದು ಕೇವಲ ಅಂಕಿ-ಅಂಶಗಳನ್ನು ಒಳಗೊಂಡ, ವಾಸ್ತವಕ್ಕೆ ದೂರವಾದ ಹಾಗೂ ಜನವಿರೋಧಿ ಬಜೆಟ್ ಆಗಿದೆ ಪಾಲಿಕೆ ಕಾಂಗ್ರೆಸ್ ಸದಸ್ಯ ರಮೇಶ್ ಹೆಗಡೆ ಆರೋಪಿಸಿದರು. ಮೇಯರ್ ಸುನಿತಾ ಅಣ್ಣಪ್ಪ, ಉಪ ಮೇಯರ್ ಶಂಕರ ಗನ್ನಿ, ಪಾಲಿಕೆ ಆಯುಕ್ತರು ಚಿದಾನಂದ ವಠಾರೆ ಸೇರಿದಂತೆ ಸದಸ್ಯರು ಹಾಜರಿದ್ದರು.