ಶಿವಮೊಗ್ಗ: ಸಾಗರ ರಸ್ತೆಯಲ್ಲಿರುವ ಖಾಸಗಿ ಹೋಟೆಲ್‌ಗೆ ಅಕ್ರಮವಾಗಿ ಸರ್ಕಾರಿ ಜಾಗ ಬಿಟ್ಟುಕೊಟ್ಟಿರುವುದನ್ನು ವಿರೋಧಿ ಸಿ ಅಣ್ಣಾ ಹಜಾರೆ ಹೋರಾಟ ಸಮಿತಿ ಮತ್ತು ಶಿವಮೊಗ್ಗ ನಾಗರಿಕ ಹಿತ ರಕ್ಷಣಾ ವೇದಿಕೆಗಳ ಒಕ್ಕೂಟದ ಸದಸ್ಯರು ಬುಧವಾರ ಸಾಗರ ರಸ್ತೆಯಲ್ಲಿರುವ ತುಂಗಾ ಮೇಲ್ದಂಡೆ ಯೋಜನಾ ವಿಭಾಗದ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಸಾಗರ ರಸ್ತೆಯ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ತುಂಗಾ ಮೇಲ್ದಂಡೆ ಯೋಜನೆ ವಿಭಾಗದ ಜಾಗವನ್ನು ಪ್ರತಿಷ್ಠಿತ ಹೋಟೆಲ್‌ಗೆ ಓಡಾಡಲು ಅವಕಾಶ ನೀಡಲಾಗಿದೆ. ಇದು ಸುಮಾರು 45 ಕೋಟಿಗಿಂತ ಹೆಚ್ಚು ಬೆಲೆ ಬಾಳುವ ಜಾಗವಾಗಿದೆ. ಈ ಜಾಗವನ್ನು ದುರುದ್ದೇಶ ಪೂರಕವಾಗಿ ಯಾವುದೋ ಪಟ್ಟಭದ್ರ ಹಿತಾಸಕ್ತಿಗಳ ಹೋಟೆಲ್‌ಗೆ ರಾಜಮಾರ್ಗ ಕಲ್ಪಿಸಿರುವುದು ದುರಾಡಳಿತದ ಪರಮಾವಧಿ ಯಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಆದ್ದರಿಂದ, ಈ ರಸ್ತೆ ಜಾಗ ಯಾರಿಗೆ ಸೇರಿದ್ದು, ಹೋಟೆಲ್ ಗೆ ಹೋಗಲು ರಸ್ತೆಯಿದ್ದರೂ ಮತ್ತೂಂದು ರಸ್ತೆಯನ್ನು ಬಿಟ್ಟುಕೊಡುವ ಉದ್ದೇಶವಾದರೂ ಏನಿತ್ತು. ಕಾಮಗಾರಿಗೆ ಯಾವ ಹಣ ಬಳಸಿದ್ದೀರಿ. ಟೆಂಡರ್ ಪ್ರಕ್ರಿಯೆ ನಡೆದಿದೆಯೇ ಎಂಬ ಬಗ್ಗೆ ತನಿಖೆ ನಡೆಸಬೇಕು ಮತ್ತು ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಈ ಸಂದರ್ಭದಲ್ಲಿ ಅಣ್ಣಾ ಹಜಾರೆ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಟಿ.ಎಂ.ಅಶೋಕ್ ಯಾದವ್, ವಸಂತಕುಮಾರ್, ಡಾ|ಸತೀಶ್ ಕುಮಾರ್ ಶೆಟ್ಟಿ, ಜನಮೇಜಿರಾವ್, ಶ್ರೀಕಾಂತ್, ತಿಮ್ಮಪ್ಪ, ಎಸ್.ಆರ್. ಗೋಪಾಲ್, ಸೀತಾರಾಮ, ಭಾಸ್ಕರ ಶೆಟ್ಟಿ, ಶ್ರೀಪತಿ ಎಲ್.ಕೆ. ಸೇರಿದಂತೆ ಹಲವರಿದ್ದರು.
ಓದಿ : Gold declines Rs 358; silver up Rs 151