Advertisement

ಭಾಷೆ-ಗಡಿ ತಂಟೆಗೆ ಬಂದ್ರೆ ಸಹಿಸಲ್ಲ : ಈಶ್ವರಪ್ಪ

06:35 PM Jan 25, 2021 | Shreeraj Acharya |

ಶಿವಮೊಗ್ಗ: ಕನ್ನಡ ಭಾಷೆ, ನೆಲ, ನೀರು ಹಾಗೂ ಗಡಿ ವಿಚಾರದಲ್ಲಿ ಯಾರೇ ಅಡ್ಡಿಪಡಿಸಲು ಮುಂದಾದರೂ ರಾಜ್ಯದ ಕನ್ನಡಿಗರು ಎಂದಿಗೂ ಸಹಿಸುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌. ಈಶ್ವರಪ್ಪ ಅಭಿಪ್ರಾಯಪಟ್ಟರು.

Advertisement

ಚಾಲುಕ್ಯ ನಗರದ ಗೋಪಿಶೆಟ್ಟಿಕೊಪ್ಪ ಬಡಾವಣೆಯ ಸಾಹಿತ್ಯ ಗ್ರಾಮದಲ್ಲಿರುವ ರಾಷ್ಟ್ರಕವಿ ಡಾ| ಜಿ.ಎಸ್‌. ಶಿವರುದ್ರಪ್ಪ ಸಾಹಿತ್ಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಶಿವಮೊಗ್ಗ ತಾಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡಿಗರು ಶಾಂತಿ, ತಾಳ್ಮೆಯಿಂದ ಇರುವವರು. ಸಂತೋಷ, ಸಹಬಾಳ್ವೆಯಿಂದ ಎಲ್ಲರೂ ಒಟ್ಟುಗೂಡಿ ಬದುಕಬೇಕೆಂಬುದು ಕನ್ನಡಿಗರ ಆಶಯ. ಆದರೆ ಕನ್ನಡ ಭಾಷೆ, ಗಡಿಯ ವಿಚಾರಕ್ಕೆ ಬಂದರೆ ಎಂದಿಗೂ ಸಹಿಸುವುದಿಲ್ಲ. ಕನ್ನಡಿಗರು ಸ್ವಾಭಿಮಾನ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.

ಹಿಂದೆಲ್ಲಾ ಕಿಡಿಗೇಡಿಗಳು ಗಡಿ ವಿವಾದದ ಹೇಳಿಕೆ ನೀಡುತ್ತಿದ್ದರು. ಇದೀಗ ಮಹಾರಾಷ್ಟ್ರದ ಮುಖ್ಯಮಂತ್ರಿ ನೀಡಿರುವ ಹೇಳಿಕೆ ಕೀಡಿಗೇಡಿ ರೀತಿಯದ್ದು. ಮಹಾರಾಷ್ಟ್ರದಲ್ಲಿಯೂ ಅನೇಕ ಪ್ರದೇಶಗಳಲ್ಲಿ ಕನ್ನಡಿಗರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿದ್ದಾರೆ. ಆದ ಮಾತ್ರಕ್ಕೆ ಮಹಾರಾಷ್ಟ್ರದ ಎಲ್ಲ ಪ್ರದೇಶಗಳನ್ನು ಆಕ್ರಮಿಸಿಕೊಳ್ಳಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಗಡಿ ವಿವಾದ ಕುರಿತ ಹೇಳಿಕೆಯನ್ನು ಯಾರೂ ಒಪ್ಪುವುದಿಲ್ಲ. ಮಹಾರಾಷ್ಟ್ರದ ಜನರೇ ಅಲ್ಲಿಯ ಮುಖ್ಯಮಂತ್ರಿ ಹೇಳಿಕೆಯನ್ನು ಪೂರ್ಣ ಒಪ್ಪುವುದಿಲ್ಲ. ಕೆಲ ಕಿಡಿಗೇಡಿಗಳನ್ನು ಮೆಚ್ಚಿಸುವುದಕ್ಕೆ ಹಾಗೂ ರಾಜಕೀಯ ಕಾರಣಕ್ಕೆ ಆ ರೀತಿ ಹೇಳಿದ್ದಾರೆ. ಭಾಷೆ, ಗಡಿ ವಿಚಾರದಲ್ಲಿ ಕನ್ನಡಿಗರು ಒಗ್ಗಟ್ಟಾಗಿರುತ್ತಾರೆ ಎಂದು ಹೇಳಿದರು.

ಕರ್ನಾಟಕ ರಾಜ್ಯದಲ್ಲಿ ವಾಸಿಸುತ್ತಿರುವ ಹಾಗೂ ಜನಿಸಿರುವ ಎಲ್ಲ ಭಾಷೆಯ ಜನರು ಕನ್ನಡಿಗರೇ. ಅವರ ಮನೆಯಲ್ಲಿ ಯಾವುದೇ ಭಾಷೆ ಇದ್ದರೂ ನಾಡು- ನುಡಿ ವಿಚಾರಕ್ಕೆ ಬಂದಾಗ ಕರ್ನಾಟಕದಲ್ಲಿರುವ ಎಲ್ಲರೂ ಕನ್ನಡಿಗರೇ. ಎಲ್ಲರೂ ಪ್ರೀತಿ ಭಾವದಿಂದ ಒಟ್ಟಿಗಿದ್ದೇವೆ
ಎಂದು ತಿಳಿಸಿದರು.

ಬಸವಕೇಂದ್ರದ ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಜಿ.ಪಿ. ಸಂಪತ್‌ಕುಮಾರ್‌ ಮಾತನಾಡಿದರು. ಸಾಹಿತಿ ಕೆ. ಪದ್ಮನಾಭ ಉಡುಪ ಅವರು ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಿ.ಬಿ. ಶಂಕರಪ್ಪ, ನಿಕಟಪೂರ್ವ ತಾಲೂಕು ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ| ಎಚ್‌.ಎಸ್‌. ರುದ್ರೇಶ್‌, ಜಿಲ್ಲಾ ಕಸಾಪ ಕಾರ್ಯದರ್ಶಿ ರುದ್ರಮುನಿ ಸಜ್ಜನ್‌, ಎಂ.ಎನ್‌. ಸುಂದರ್‌ರಾಜ್‌, ಚನ್ನಬಸಪ್ಪ ನ್ಯಾಮತಿ, ಜಿ.ಎಸ್‌. ಅನಂತ್‌, ಡಿ.ಬಿ. ರುದ್ರಪ್ಪ, ಎಂ. ರವಿ, ವೈ.ಎಂ. ಧರ್ಮಪ್ಪ, ಮ.ಸ. ನಂಜುಂಡಸ್ವಾಮಿ, ಲೋಕೇಶ್‌ ಮತ್ತಿತರರು ಇದ್ದರು.

Advertisement

ಇದಕ್ಕೂ ಮುನ್ನ ಶಿವಮೊಗ್ಗ ತಾಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಕೆ. ಪದ್ಮನಾಭ ಉಡುಪ ಅವರನ್ನು ಗೋಪಾಳ ವೃತ್ತದಿಂದ ಸಾಹಿತ್ಯ ಗ್ರಾಮದವರೆಗೂ ಮೆರವಣಿಗೆಯಲ್ಲಿ ಕರೆತರಲಾಯಿತು.

ಓದಿ: ಜೆಸ್ಕಾಂಗೆ ಕೋಟ್ಯಂತರ ರೂ. ಬಿಲ್‌ ಬಾಕಿ

Advertisement

Udayavani is now on Telegram. Click here to join our channel and stay updated with the latest news.

Next