ಸಾಗರ: ಭಾರತೀಯ ಕರಕುಶಲ ಕಲೆಗಳ ಪಾರಂಪರಿಕ ಜ್ಞಾನವನ್ನು ಪರಸ್ಪರ ಹಂಚಿಕೊಳ್ಳುವ, ಪರಿಚಯಿಸಿಕೊಳ್ಳುವ ನಿಟ್ಟಿನಲ್ಲಿ ಹೆಚ್ಚಿನ ಕೆಲಸ ಆಗಬೇಕು ಎಂದು ಜೈಪುರದ ಭಾರತೀಯ ಶಿಲ್ಪ ಸಂಸ್ಥಾನದ ನಿರ್ದೇಶಕಿ ದುಲಿಕಾ ಗುಪ್ತಾ ಹೇಳಿದರು.
ತಾಲೂಕಿನ ಹೊನ್ನೇಸರದ ಶ್ರಮಜೀವಿ ಆಶ್ರಮದಲ್ಲಿ ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರಿ ಸಂಘ, ಭೀಮನಕೋಣೆಯ ಕವಿಕಾವ್ಯ ಟ್ರಸ್ಟ್ ಹಾಗೂ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಆಶ್ರಯದಲ್ಲಿ ಹಮ್ಮಿಕೊಂಡ ಚರಕ ಉತ್ಸವದ ಅಂಗವಾಗಿ ಭಾನುವಾರ ನಡೆದ ಕೊಡು-ಕೊಳ್ಳುವವರ ಸಮಾವೇಶದಲ್ಲಿ ಅವರು ಮಾತನಾಡಿದರು. 1995ರಲ್ಲಿ ರಾಜಸ್ಥಾನ ಸರ್ಕಾರ ಭಾರತೀಯ ಶಿಲ್ಪ ಸಂಸ್ಥಾನವನ್ನು ಸ್ಥಾಪಿಸಿದೆ. 2007ರಿಂದ ಅಂಬುಜ ಶಿಕ್ಷಣ ಸಂಸ್ಥೆಯ ಸಹಭಾಗಿತ್ವದಲ್ಲಿ ಕೆಲಸ ಮಾಡಲಾಗುತ್ತಿದೆ. ಪಾರಂಪರಿಕ ಕರಕುಶಲ ಕಲೆಗಳನ್ನು ಮರ, ಕಲ್ಲು, ಲೋಹ, ಬಟ್ಟೆ, ಚರ್ಮ, ಕಾಗದ ಬಳಸಿ ಕಲಾತ್ಮಕ ವಸ್ತುಗಳನ್ನು ತಯಾರಿಸುವ ನಿಟ್ಟಿನಲ್ಲಿ 4 ವಿಭಾಗಗಳಿವೆ. ಭಾರತೀಯ ಕರಕುಶಲಕರ್ಮಿಗಳು ಶಿಕ್ಷಣ ನೀಡುತ್ತಾರೆ ಎಂದರು.
ದೇಸಿ ಚಿಂತಕ ಪ್ರಸನ್ನ ಮಾತನಾಡಿ, ಪವಿತ್ರ ವಸ್ತ್ರ ಎಂಬ ಹೈಬ್ರಿಡ್ ಖಾದಿಯ ಮೂಲಕ ನೈಸರ್ಗಿಕ ಬಣ್ಣಗಾರಿಕೆಯ ಸಂಶೋಧನೆ ನಡೆಯುತ್ತಿದೆ. ಉತ್ಪಾದನೆ ಮತ್ತು ಸಂಶೋಧನೆಗೆ ಆದ್ಯತೆ ನೀಡುತ್ತಿದ್ದು, ವಿವಿಧ ವಿವಿಗಳ ಜತೆ ಮಾತುಕತೆ ನಡೆಯುತ್ತಿದೆ. ಮಠಾ ಧೀಶರು, ಮಠಗಳು ಖಾದಿ ಬಳಸಿದರೆ ನೇಕಾರರು ಹಸಿವಿನಿಂದ ಬಳಲುವುದಿಲ್ಲ ಎಂದರು.
ಬೆಳಗಾವಿಯ ಗೋಪಿಕೃಷ್ಣ, ಜಪಾನಿನ ಯೋಕೋ ಮಾತನಾಡಿದರು. ಪ್ರಾರಂಭದಲ್ಲಿ ಅಕ್ಷತಾ ಮತ್ತು ತಂಡದವರು ಚರಕದ ಸಿದ್ಧ ಉಡುಪುಗಳನ್ನು ಧರಿಸಿ, ವಿನ್ಯಾಸಗಳ ಪ್ರದರ್ಶನ ನೀಡಿದರು. ಸಂಘದ ಅಧ್ಯಕ್ಷೆ ಗೌರಮ್ಮ, ದೇಸಿ ಸಂಸ್ಥೆಯ ಜೆ. ಕೃಷ್ಣ, ಎಂ.ವಿ. ಪ್ರತಿಭಾ ರಾಘವೇಂದ್ರ, ಎನ್. ರಮೇಶ, ಆನಂದ, ಮಹಾಲಕ್ಷ್ಮಿ, ಅಭಿಲಾಷ್, ರುದ್ರಯ್ಯ ಮುಂತಾದವರಿದ್ದರು. ಮಂಟೇಸ್ವಾಮಿ ಪದಗಳ ಮೂಲಕ ಶಿವಸ್ವಾಮಿ ಪ್ರಾರ್ಥಿಸಿದರು. ಪದ್ಮಶ್ರೀ ನಿರ್ವಹಿಸಿದರು.
ಓದಿ:
ಕಂಗನಾ ರಾಣಾವತ್ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು: ಪಾಟೀಲ್