ಸಾಗರ: ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರ ಹಿತ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿರುವಂತೆ ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ ಎಚ್.ಹಾಲಪ್ಪ ಹರತಾಳು ಸಹ ರೈತರ ಬಗ್ಗೆ ಕಿಂಚಿತ್ ಕಾಳಜಿ ಇಲ್ಲದಂತೆ ವರ್ತಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ತೀ.ನ. ಶ್ರೀನಿವಾಸ್ ದೂರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ 24 ಸಾವಿರಕ್ಕೂ ಹೆಚ್ಚು ಬಗರ್‌ಹುಕುಂ ಅರ್ಜಿಗಳು ಬಾಕಿ ಇವೆ. ಬಗರ್‌ಹುಕುಂ ಸಮಿತಿ
ರಚನೆಯಾಗಿ ವರ್ಷ ಕಳೆಯುತ್ತಾ ಬಂದಿದೆ. ಒಂದು ಬಾರಿ ಮಾತ್ರ ಸಮಿತಿ ಸಭೆ ಸೇರಿದ್ದು, ಈತನಕ ಒಂದು ಅರ್ಜಿಯನ್ನು ಸಹ ವಿಲೇವಾರಿ ಮಾಡಿಲ್ಲ. ಹೊಸನಗರದಲ್ಲಿ 20 ಸಾವಿರ ಬಗರ್‌ಹುಕುಂ ಅರ್ಜಿ ವಿಲೇಯಾಗದೆ ಹಾಗೆ ಬಾಕಿ ಉಳಿದಿದೆ ಎಂದು ಹೇಳಿದರು.
ಫಾರಂ ನಂ. 53ಗೆ ಸಂಬಂಧಪಟ್ಟ 500 ಅರ್ಜಿ ವಿಲೇವಾರಿಯಾಗಿಲ್ಲ. ಉಪವಿಭಾಗಾಧಿ ಕಾರಿಗಳ ಕಚೇರಿಯಲ್ಲಿ 800ಕ್ಕೂ ಹೆಚ್ಚು ಅರ್ಜಿಗಳಿದ್ದು ಅದನ್ನು ವಿಲೇವಾರಿ ಮಾಡಿಲ್ಲ. 94ಸಿ ಅಡಿಯಲ್ಲಿ ಸರ್ಕಾರಿ ಜಾಗ ಸಕ್ರಮಗೊಳಿಸುವ ಸುಮಾರು 4 ಸಾವಿರ ಅರ್ಜಿಯಿದ್ದು ಅದರ ಬಗ್ಗೆ ಶಾಸಕರ ಗಮನ ಹರಿಸಿಲ್ಲ. ಅರಣ್ಯಹಕ್ಕು ಕಾಯ್ದೆಯಡಿ ಒಂದೂ ಹಕ್ಕುಪತ್ರವನ್ನು ನೀಡಿಲ್ಲ. ಒಟ್ಟಾರೆ ಶಾಸಕರು ಗ್ರಾಮೀಣ ಭಾಗದ ರೈತರನ್ನು ಕಚೇರಿ ಅಲೆಯುವ ಸ್ಥಿತಿಗೆ ತಂದು ನಿಲ್ಲಿಸಿದ್ದಾರೆ. ರೈತರಿಗೆ ನ್ಯಾಯ ದೊರಕಿಸಿಕೊಡುವ ಕೆಲಸವನ್ನು ಶಾಸಕ ಹಾಲಪ್ಪ ಮಾಡುತ್ತಿಲ್ಲ ಎಂದು ಹೇಳಿದರು.
ತಾಲೂಕಿನ ತಹಶೀಲ್ದಾರ್ ಕಚೇರಿ, ಸರ್ವೇ ಕಚೇರಿ, ನಗರಸಭೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಶಾಸಕರೇ ಸಾರ್ವಜನಿಕವಾಗಿ ಹೇಳುತ್ತಿದ್ದಾರೆ. ಆದರೆ ಈತನಕ ಭ್ರಷ್ಟಾಚಾರವನ್ನು ತಡೆಗಟ್ಟುವ ನಿಟ್ಟಿನಲ್ಲಿ ಶಾಸಕರು ಏನು ಕ್ರಮ ಕೈಗೊಂಡಿದ್ದಾರೆ ಎಂದು ಸಾರ್ವಜನಿಕರಿಗೆ ತಿಳಿಸಬೇಕು ಎಂದು ಒತ್ತಾಯಿಸಿದ ತೀ.ನ., ಆಶ್ರಯ ಲೇಔಟ್‌ಗಳಲ್ಲಿ ರಿಯಲ್ ಎಸ್ಟೇಟ್ ಮಾಫಿಯಾದವರು ಅಕ್ರಮ ನಡೆಸಿದ್ದಾರೆ ಎಂದು ಶಾಸಕರು ಆರೋಪಿಸಿದ್ದಾರೆ.
ಇದರ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿ ಸಲಿ ಎಂದು ಸವಾಲು ಹಾಕಿದರು. ತಹಶೀಲ್ದಾರ್ ಕಚೇರಿಯಲ್ಲಿ ಎರಡು ಮೂರು ಜನ ತಹಶೀಲ್ದಾರರಾಗಿದ್ದಾರೆ. ಅಧಿಕೃತ ತಹಶೀಲ್ದಾರ್‌ಗೆ ಯಾವ ಮಾಹಿತಿಯೂ ಇರುವುದಿಲ್ಲ. ಯಾರೂ ಆಸಕ್ತಿವಹಿಸಿ ಕೆಲಸ ಮಾಡುತ್ತಿಲ್ಲ. ಅಧಿ ಕಾರಿಗಳ ಮೇಲೆ ಶಾಸಕರ ನಿಯಂತ್ರಣ ಇಲ್ಲದೆ ಇರುವುದೇ ಇದಕ್ಕೆ ಕಾರಣವಾಗಿದೆ. ಶಾಸಕರು ಆಡಳಿತ ವ್ಯವಸ್ಥೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಆಡಳಿತ ವೈಫಲ್ಯ ಖಂಡಿಸಿ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಗೋಷ್ಠಿಯಲ್ಲಿ ಎಲ್.ವಿ. ಸುಭಾಷ್, ವಸಂತ ಶೇಟ್, ರವಿ ಜಂಬಗಾರು, ಮಹಾಬಲೇಶ್ವರ ಶೇಟ್ ಇದ್ದರು.
ಓದಿ :
ಉತ್ತರಾಖಂಡ ಹಿಮಪಾತ; ಪ್ರವಾಹ ಪೀಡಿತರ ರಕ್ಷಣೆಗೆ ಕೇಂದ್ರ ಸಿದ್ಧ: ಅಮಿತ್ ಶಾ