Advertisement

ಸಾಹಿತ್ಯ ಜನಸಮೂಹದ ದನಿಯಾಗಲಿ

02:03 PM Feb 03, 2021 | Shreeraj Acharya |

ಶಿವಮೊಗ್ಗ: ಜನಸಮೂಹದ ದನಿಯಾಗಿ ಸಾಹಿತ್ಯ ಹೊರ ಹೊಮ್ಮ ಬೇಕಾಗಿರುವುದು ಇಂದಿನ ಪ್ರಸ್ತುತತೆ ಎಂದು ಪ್ರಾಧ್ಯಾಪಕ
ಡಾ| ಮೇಟಿ ಮಲ್ಲಿಕಾರ್ಜುನ ಅಭಿಪ್ರಾಯಪಟ್ಟರು.

Advertisement

ಜಿಲ್ಲಾ 15ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮೂರನೇ ದಿನ ಆಯೋಜಿಸಿದ್ದ “ಸಂಕೀರ್ಣ ಗೋಷ್ಠಿ’ ಯಲ್ಲಿ ಆಶಯ ಭಾಷಣ ಮಾಡಿದ
ಅವರು, ಸಾಹಿತ್ಯವೆಂದರೆ ಅತ್ಯಂತ ಸರಳವಾಗಿ ಕಥನ, ಕಾವ್ಯ, ಕವನ, ಕಾದಂಬರಿ ರೂಪದಲ್ಲಿ ಮೂಡಿಬರಬೇಕಾಗಿರುವ ಸಾಹಿತ್ಯ. ಆದರೆ ಕೆಲವೊಮ್ಮೆ ಸಾಹಿತ್ಯ ಸಂಕೀರ್ಣ ರೂಪ ಪಡೆದುಕೊಳ್ಳುತ್ತ ಸಾಗುತ್ತದೆ ಎಂದು ತಿಳಿಸಿದರು.

ಸಾಹಿತ್ಯ ಇಡೀ ಸಮೂಹದ ದೃಷ್ಟಿಕೋನವನ್ನು ಒಟ್ಟಾಗಿ ಗ್ರಹಿಸಿ ಅರ್ಥೈಸಿಕೊಂಡು ಅಭಿವ್ಯಕ್ತಗೊಳಿಸುವ ಮಾಧ್ಯಮವಾಗಿದೆ. ಜನರ ಆಶಯ, ಬದುಕಿನ ಚಿತ್ರಣ, ವಾಸ್ತವದ ಆಲೋಚನಾ ಕ್ರಮಗಳನ್ನು ಸಾಹಿತ್ಯದ ಮುಖಾಂತರ ತಲುಪಿಸಬೇಕಾಗಿದೆ. ದಲಿತ ಚಳವಳಿಯ ಕಾಲಘಟ್ಟದಲ್ಲಿ ಮೂಡಿಬಂದ ಆಶಯವು ಜನರ ದನಿಯಾಗಿ ರೂಪುಗೊಂಡಿತು ಎಂದರು.

ಇಂದಿನ ಕಾಲಘಟ್ಟದಲ್ಲಿ ಸಾಹಿತ್ಯ ಓದುವ ಕ್ರಮವೇ ಬದಲಾಗಿ ಹೋಗಿದೆ. ಸಾಹಿತ್ಯ ಓದನ್ನು ಅಥವಾ ವಿಮರ್ಶೆಯನ್ನು ವೈಚಾರಿಕತೆಯ ಚೌಕಟ್ಟಿನಲಿ ಅಥವಾ ಸೀಮಿತಕ್ಕೆ ಒಳಗಾಗಿ ಓದುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸಾಹಿತ್ಯದ ಓದು ಸೀಮಿತಕ್ಕೆ ಒಳಗಾದಲ್ಲಿ ಅರ್ಥೈಸುವ ರೀತಿ ಅಪಾಯದ ಕಡೆಗೆ ಕೊಂಡೊಯ್ಯುವ ಸಾಧ್ಯತೆ ಇದೆ. ಸಾಹಿತ್ಯ ಓದುವ ಕ್ರಮವು ಸರಿಯಾದ ರೀತಿಯಲ್ಲಿ ಸಾಗುವ ಬಗ್ಗೆ
ತಿಳವಳಿಕೆ ಮೂಡಿಸಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.
ಸಮೂಹ ಮಾಧ್ಯಮ ಹಾಗೂ ಸಾಹಿತ್ಯಒಂದಕ್ಕೊಂದು ಸೇರಿಕೊಂಡಿದೆ.ಹಿಂದೆ ಬಹುತೇಕ ಸಾಹಿತಿಗಳು ಸಮೂಹ ಮಾಧ್ಯಮದ ಮೂಲಕ ಅಭಿವ್ಯಕ್ತಗೊಳಿಸುವ ಕಾರ್ಯ ಮಾಡುತ್ತಿದ್ದರು. ವಿವಿಧ ನೆಲೆಗಳಿಂದ ಕೆಲಸ ಮಾಡುತ್ತಿದ್ದ ಸಾಹಿತಿಗಳು ಸಮೂಹ ಮಾಧ್ಯಮದ ಭಾಗವಾಗುತ್ತಿದ್ದರು ಎಂದು ತಿಳಿಸಿದರು.

ಬದಲಾದ ಕಾಲಘಟ್ಟದಲ್ಲಿ ಪ್ರಸ್ತುತ ಸಮೂಹ ಮಾಧ್ಯಮಗಳ ಧೋರಣೆ ಬದಲಾಗುತ್ತಿದ್ದು, ಜನರ ಬದುಕಿನ ಉನ್ನತಿಗೆ ಮಾರ್ಗದರ್ಶನ ಆಗುವ
ಬದಲಾಗಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿವೆ ಎನ್ನಬಹುದು. ಜನರ ಬದುಕಿನ ಆಶಯಗಳಿಗೆ ಧ್ವನಿಯಾಗಿ ಸಮೂಹ ಮಾಧ್ಯಮ ಪಾತ್ರ ನಿರ್ವಹಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.

Advertisement

ಕನ್ನಡ ಸಾಹಿತ್ಯದಲ್ಲಿ ದಲಿತ ಚಳವಳಿ ವಿಷಯ ಕುರಿತು ಪ್ರಾಧ್ಯಾಪಕಿ ಡಾ| ಎಂ.ಹಾಲಮ್ಮ ಮಾತನಾಡಿ, ವಚನ ಸಾಹಿತ್ಯದ ಕಾಲಘಟ್ಟದಲ್ಲಿ ಶೋಷಿತರು, ದಲಿತರು, ಹಿಂದುಳಿದವರು, ದೌರ್ಜನ್ಯಕ್ಕೆ ಒಳಗಾದವರ ಧ್ವನಿಯಾದವರು ಬಸವಣ್ಣ. ಅಂದಿನ ಕಾಲದಲ್ಲಿ ಸಮಾಜದಲ್ಲಿದ್ದ ಅನೇಕ
ಶೋಷಣೆ ಅಂಶಗಳನ್ನು ವಚನಕಾರರು ಕಟುವಾಗಿ ಖಂಡಿಸಿದರು. ಸಾಹಿತ್ಯದ ಮೂಲಕ ನೊಂದವರ ಪರವಾಗಿ ಧ್ವನಿ ಎತ್ತಿದರು ಎಂದು ಹೇಳಿದರು.

ಸಮಾಜದಲ್ಲಿ ಶತ ಶತಮಾನಗಳಿಂದಲೂ ಅನ್ಯಾಯ, ಅಸಮಾನತೆ ಎಂಬುದು ಎಲ್ಲ ಕಡೆಗಳಲ್ಲಿಯೂ ಬೆರೆತು ಹೋಗಿದೆ. ಇಂತಹ ಅನೇಕ ಶೋಷಿತ ಸಮಾಜಗಳ ಧ್ವನಿಯಾದವರು ಸಾಹಿತಿಗಳು. 60-70ರ ದಶಕದಲ್ಲಿಯೂ ಚಳವಳಿ ಹೆಚ್ಚುತ್ತಿದ್ದ ಸಂದರ್ಭದಲ್ಲಿ ಅನೇಕರು ಸಾಹಿತ್ಯದ
ಮೂಲಕವೇ ಅನೇಕ ಸಂಗತಿಗಳ ಮೇಲೆ ಬೆಳಕು ಚೆಲ್ಲಿ ಅನ್ಯಾಯಕ್ಕೆ ಒಳಗಾದವರ ಪರವಾಗಿ ನಿಂತರು ಎಂದರು.

ಕನ್ನಡ ಸಾಹಿತ್ಯದಲ್ಲಿ ಸಮೂಹ ಮಾಧ್ಯಮಗಳ ಪಾತ್ರ ವಿಷಯ ಕುರಿತು ಪತ್ರಕರ್ತ ಚಂದ್ರಹಾಸ ಹಿರೇಮಳಲಿ, ಕನ್ನಡ ಸಾಹಿತ್ಯದಲ್ಲಿ ಮಹಿಳಾ ಪರಂಪರೆ ವಿಷಯ ಕುರಿತು ವಿಶ್ರಾಂತ ಪ್ರಾಧ್ಯಾಪಕಿ ಪ್ರೊ|ಕಿರಣ್‌ ದೇಸಾಯಿ, ಸಾಹಿತ್ಯದಲ್ಲಿ ಕೃಷಿ ಪದ್ಧತಿ ಕುರಿತು ವಿಶ್ರಾಂತ ಪ್ರಾಧ್ಯಾಪಕ ಡಾ|ನಾಗರಾಜ್‌, ಆಡಳಿತದಲ್ಲಿ ಕನ್ನಡ ಭಾಷೆ ಕುರಿತು ಬಾರಂದೂರು ಪ್ರಕಾಶ್‌ ಮಾತನಾಡಿದರು. ಶಿವಮೊಗ್ಗ ಜಿಲ್ಲಾ 15ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಡಾ| ವಿಜಯಾದೇವಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ಅಧ್ಯಕ್ಷ ಡಿ.ಬಿ. ಶಂಕರಪ್ಪ ಉಪಸ್ಥಿತರಿದ್ದರು.

ಮೂರನೇ ದಿನದ ಕವಿಗೋಷ್ಠಿಯಲ್ಲಿ ಸಾಹಿತಿ ಡಾ|ರಾಜೇಂದ್ರ ಬುರಡಿಕಟ್ಟಿ ಆಶಯ ನುಡಿಗಳನ್ನಾಡಿದರು. ಜಿಲ್ಲಾಕನ್ನಡ ಸಾಹಿತ್ಯ ಪರಿಷತ್‌ಉಪಾಧ್ಯಕ್ಷತಿರುಮಲ ಮಾವಿನಕುಳಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಸಾಪ ಉಪಾಧ್ಯಕ್ಷ ಕೆ. ಬಸವನಗೌಡ, ಹಸನ್‌ ಬೆಳ್ಳಿಗನೂಡು,
ಚನ್ನಬಸಪ್ಪ ನ್ಯಾಮತಿ, ಡಾ| ಕೆ.ಆಂಜನಪ್ಪ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next