ಶಿವಮೊಗ್ಗ: ರಾಜ್ಯದಲ್ಲಿ ಸಂಪೂರ್ಣವಾಗಿ ಕನ್ನಡ ಭಾಷೆ ಅನುಷ್ಠಾನಗೊಳಿಸುವ ಬಗ್ಗೆ ಕನ್ನಡದ ಇಡೀ ಸಮುದಾಯ ಜಾಗೃತಗೊಳ್ಳಬೇಕಾದ ಅವಶ್ಯಕತೆ ಇದೆ ಎಂದು ಶಿವಮೊಗ್ಗ ಜಿಲ್ಲಾ 15 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಡಾ|ವಿಜಯಾದೇವಿ ಹೇಳಿದರು.
ಜಿಲ್ಲಾ 15ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರ ಜತೆ ಸಂವಾದ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾನ್ಯವಾಗಿ ಸೂಚನಾಪತ್ರ, ನ್ಯಾಯಾಲಯದ ಆದೇಶಗಳು ಆಂಗ್ಲ ಭಾಷೆಯಲ್ಲಿ ಬರುತ್ತವೆ. ನ್ಯಾಯಾಲಯದ ಆದೇಶ ಕನ್ನಡದಲ್ಲಿ ಬರಬೇಕೆಂದು ಹೇಳುವ ಹಕ್ಕು ಸಾಹಿತಿಗಳಿಗಿಲ್ಲ. ಆದರೆ ಆದೇಶ ಪ್ರತಿ ಸ್ವೀಕರಿಸುವವರಿಗೆ ಅರ್ಥವಾಗುವ ಭಾಷೆಯಲ್ಲಿ ಇರಬೇಕು ಎಂಬುದು ತಮ್ಮ ಅನಿಸಿಕೆ ಎಂದರು. ಕನ್ನಡ ಸಮುದಾಯ ಜಾಗೃತಗೊಂಡು ರಾಜ್ಯದ ಎಲ್ಲ ಆಡಳಿತಾತ್ಮಕ ವಿಷಯ, ಕಚೇರಿಗಳಲ್ಲಿ ಹಾಗೂ ಸಂವಹನ ನಡೆಸಲು ಎಲ್ಲೆಲ್ಲಿ ಕನ್ನಡ ಭಾಷೆ ಬಳಸಲು ಸಾಧ್ಯವೋ ಅಲ್ಲೆಲ್ಲಾ ಕನ್ನಡವನ್ನೇ ಬಳಸುವಂತೆ ಒತ್ತಾಯಿಸಬೇಕಾಗಿರುವುದು ಕನ್ನಡಿಗರ ಕರ್ತವ್ಯವಾಗಿದೆ ಎಂದು ಅಭಿಪ್ರಾಯಟ್ಟರು.
ಕುವೆಂಪು ಅವರು ವಿಶ್ವವಿದ್ಯಾಲಯದ ಎಲ್ಲ ವಿಭಾಗಗಳಲ್ಲಿಯೂ ಆಯಾ ವಿಷಯದ ಪಠ್ಯಕ್ರಮಗಳನ್ನು ಮಕ್ಕಳಿಗೆ ಕನ್ನಡದಲ್ಲಿಯೂ ಬೋಧನೆ ಮಾಡುವಂತೆ ಹಾಗೂ ವಿಷಯದ ಪಠ್ಯಗಳು ಕನ್ನಡದಲ್ಲಿ ಸಿಗುವಂತಾಗಬೇಕು ಎಂದಿದ್ದರು.ವಿಶ್ವವಿದ್ಯಾಲಯದ ಪ್ರತಿ ವಿಭಾಗ ಹಾಗೂ ಅದರ ಕಚೇರಿಗಳಲ್ಲಿ ಕನ್ನಡ ಬಳಸುವ ಬಗ್ಗೆ ಕ್ರಮ ಕೈಗೊಳ್ಳುವ ನಿರ್ಧಾರ ತೆಗೆದುಕೊಳ್ಳಬೇಕಿದೆ ಎಂದು ಹೇಳಿದರು.
ಕನ್ನಡ ಭಾಷಾ ಸಾಹಿತ್ಯವೇ ನನ್ ಜೀವನದ ಸಾಧನೆಗೆ ಪ್ರೇರಣೆ. ಕನ್ನಡ ಸಾಹಿತ್ಯವು ಕಲಿಸಿದ ಜೀವನ ಮಾರ್ಗದಲ್ಲಿ ಸಾಗಿಬಂದು ಈ ವರೆಗಿನ ಕಾರ್ಯಗಳನ್ನು ಮಾಡಿದ್ದೇನೆ. ಎಲ್ಲ ಸಾಧನೆಗೂ ಕನ್ನಡ ಭಾಷೆಯೇ ಪ್ರೇರಕ ಶಕ್ತಿಯಾಗಿದೆ. ಮಕ್ಕಳಿಗೆ ಕನ್ನಡದ ಶ್ರೇಷ್ಠ ಸಾಹಿತ್ಯದ ಬಗ್ಗೆ ಪರಿಚಯಿಸುವ ಕೆಲಸ ಆಗಬೇಕು ಎಂದರು. ಜಿಲ್ಲಾ ಕಸಾಪ ಕಾರ್ಯದರ್ಶಿ ರುದ್ರಮುನಿ ಸಜ್ಜನ್ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಎಚ್.ಎನ್. ಮಹಾರುದ್ರ ಆಶಯ ನುಡಿಗಳನ್ನಾಡಿದರು. ಮಮತಾ ಹೆಗ್ಡೆ, ಡಾ|ಎನ್.ಆರ್. ಮಂಜುಳಾ, ಲಕ್ಷ್ಮೀ ಶಾಸ್ತ್ರಿ, ರುಕ್ಮಿಣಿ ಆನಂದ್, ಶಾಲಿನಿ ರಾಮಸ್ವಾಮಿ, ವಿನೋದ ಆನಂದ, ಜಿ.ಎಸ್. ಸರೋಜಾ, ಶೀಲಾ ಸುರೇಶ್, ಕೆ.ವೈ. ರಾಮಚಂದ್ರಪ್ಪ, ಶ್ರೀರಂಜಿನಿ ದತ್ತಾತ್ರಿ ಸಂವಾದದಲ್ಲಿ ಪಾಲ್ಗೊಂಡಿದ್ದರು.
ಓದಿ :
ಮಂಗಳೂರು: ಎಸಿಬಿ ದಾಳಿ ಅಂತ್ಯ; ಕೋಟ್ಯಾಂತರ ರೂಪಾಯಿ ಆಸ್ತಿ ಪತ್ತೆ !