Advertisement

ಕೋವಿಡ್ ಸಂಕಷ್ಟದಲ್ಲಿಯೂ ಕುವೆಂಒಪು ವಿವಿ ಗಮನಾರ್ಹ ಕಾರ್ಯ

06:44 PM Aug 03, 2021 | Shreeraj Acharya |

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯವು ಕೋವಿಡ್‌19 ಸಂಕಷ್ಟ ಕಾಲದಲ್ಲಿಯೂ ಆನ್‌ ಲೈನ್‌ ತರಗತಿಗಳು, ಉಪನ್ಯಾಸ ಸರಣಿಗಳು ಮತ್ತು ವೆಬಿನಾರ್‌ಗಳನ್ನು ನಡೆಸುವ ಮೂಲಕ ವಿದ್ಯಾರ್ಥಿಗಳ ಬೌದ್ಧಿಕ ಬೆಳವಣಿಗೆಗೆ ಸಮಗ್ರ ಗಮನ ನೀಡಿದೆ.

Advertisement

ಅಲ್ಲದೆ ವಿಶ್ವವಿದ್ಯಾಲಯವನ್ನು ಜ್ಞಾನದ ಹರಿವಿನಲ್ಲಿ ಮುಂಚೂಣಿಯಲ್ಲಿಡಲಾಗಿದೆ ಎಂದು ವಿವಿಯ ಕುಲಪತಿ ಪ್ರೊ| ಬಿ.ಪಿ. ವೀರಭದ್ರಪ್ಪ ಹೇಳಿದರು. ಕುವೆಂಪು ವಿಶ್ವವಿದ್ಯಾಲಯದ ಜ್ಞಾನಸಹ್ಯಾದ್ರಿ ಆವರಣದಲ್ಲಿರುವ ಬಸವ ಸಭಾ ಭವನದಲ್ಲಿ ಸೋಮವಾರ ನಡೆದ “ವಿವಿ ಆಡಳಿತ ಮತ್ತು ಶೈಕ್ಷಣಿಕ ಪ್ರಗತಿಯ ಚಿಂತನ-ಮಂಥನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಆನ್‌ಲೈನ್‌ ಫ್ಲಾಟ್‌ಫಾರ್ಮ್ಗಳ ಮೂಲಕ ಕಳೆದ ಒಂದೂವರೆ ವರ್ಷಗಳಿಂದ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರನ್ನು ಚಲನಶೀಲರನ್ನಾಗಿ ಮುನ್ನಡೆಸಲಾಗಿದೆ. ಶೈಕ್ಷಣಿಕ ಬೆಳವಣಿಗೆಗೆ ತೊಂದರೆಯಾಗದಂತೆ ಆನ್‌ಲೈನ್‌ ಮೂಲಕವೇ ಘಟಿಕೋತ್ಸವವನ್ನು ಯಶಸ್ವಿಯಾಗಿ ನಡೆಸಲಾಗಿದೆ. ಕೊರೊನಾ ಸಮಸ್ಯೆಯಿಂದ ಪ್ರಗತಿಗೆ ಅಲ್ಪ ತಡೆಯಾದರೂ ಸಹ ವಿವಿಯು ಶಿಕ್ಷಣ ಮತ್ತು ಸಂಶೋಧನೆಯಲ್ಲಿ ಮುಂದಿದೆ. ಈ ಅಕಾಡೆಮಿಕ್‌ ಬೆಳವಣಿಗೆಯೇ ವಿಶ್ವವಿದ್ಯಾಲಯ ಎಂದು ನಾನು ನಂಬಿದ್ದು ಇದನ್ನು ಮುಂದುವರಿಸೋಣ ಎಂದರು.

ವಿದೇಶದ 25 ವಿವಿಗಳೊಂದಿಗೆ ಸಂಶೋಧನಾ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ. ರಾಜ್ಯ ಮತ್ತು ದೇಶದ ಮಹನೀಯರುಗಳಾದ ವಚನಗಾರ್ತಿ ಅಕ್ಕಮಹಾದೇವಿ, ಅಲ್ಲಮಪ್ರಭು, ವರನಟ ಡಾ| ರಾಜ್‌ ಕುಮಾರ್‌ ಸೇರಿದಂತೆ ಹಲವು ಮಹನೀಯರುಗಳ ಅಧ್ಯಯನ ಪೀಠಗಳನ್ನು ಆರಂಭಿಸಿ ಅವರ ಕೊಡುಗೆ, ಚಿಂತನೆಗಳ ಕುರಿತ ಸಂಶೋಧನೆಗಳನ್ನು ಕೈಗೊಳ್ಳಲು ಉತ್ತೇಜಿಸಲಾಗಿದೆ. ದೇಶದ ಪ್ರತಿಷ್ಠಿತ ಡಿ.ಆರ್‌.ಡಿ.ಒ. ಸಂಸ್ಥೆಯು ಸಂಶೋಧನಾ ಪ್ರಯೋಗಾಲಯವನ್ನು ವಿವಿಯಲ್ಲಿ ಆರಂಭಿಸಲು ಯೋಜಿಸುತ್ತಿದೆ.

ದೂರಶಿಕ್ಷಣ ನೀಡುವ ಅವಕಾಶವನ್ನು ನಿಲ್ಲಿಸಿದಾಗ ಯು.ಜಿ.ಸಿ. ಜೊತೆಗೆ ಸಮನ್ವಯ ಸಾ ಧಿಸಿ ವಿವಿಗೆ ಆನ್‌ಲೈನ್‌ ಮೂಲಕ ಪದವಿ, ಸ್ನಾತಕೋತ್ತರ ಕೋರ್ಸ್‌ಗಳನ್ನು ನೀಡುವ ಅರ್ಹತೆ ಮತ್ತು ಅನುಮತಿಯನ್ನು ದೊರಕಿಸಿಕೊಳ್ಳಲಾಗಿದೆ. ಈಗಾಗಲೇ ಪ್ರವೇಶಾತಿ ಕಾರ್ಯ ಆರಂಭಿಸಲಾಗಿದೆ. ವಿವಿಯ ಸೆಕ್ಯುರಿಟಿ ಗಾರ್ಡ್‌ಗಳು ಮತ್ತು ಸ್ವಚ್ಚತಾ ಕಾರ್ಮಿಕರಿಗೆ ಉಚಿತವಾಗಿ ಕೋವಿಡ್‌ ವ್ಯಾಕ್ಸಿನ್‌ ನೀಡಲಾಗಿದೆ ಹಾಗೂ ಕಳೆದ ಒಂದೂವರೆ ವರ್ಷಗಳಿಂದ ಕೊರೊನಾ ಸಂಕಷ್ಟ ಕಾಲದಲ್ಲಿಯೂ ಯಾವುದೇ ತೊಂದರೆಯಾಗದಂತೆ ಪಾಠ-ಪ್ರವಚನ, ಶೈಕ್ಷಣಿಕ ಕಾರ್ಯಕ್ರಮಗಳನ್ನು ಆನ್‌ಲೈನ್‌ ಹಾಗೂ ಭೌತಿಕ ಮಾದರಿಗಳಲ್ಲಿ ಮುನ್ನಡೆಸಲಾಗಿದೆ. ಎನ್‌.ಐ.ಆರ್‌. ಎಫ್‌. ರ್‍ಯಾಂಕಿಂಗ್‌ನಲ್ಲಿ ದೇಶದಲ್ಲಿಯೇ 73ನೇ ಸ್ಥಾನದಲ್ಲಿ ಸತತ ಎರಡು ವರ್ಷಗಳಿಂದ ಮುನ್ನಡೆಯುವ ಹೆಮ್ಮೆಯ ಸಾಧನೆ ಮಾಡಲಾಗಿದೆ ಎಂದರು.

Advertisement

ಮುಂದಿನ ದಿನಗಳಲ್ಲಿ ವಿವಿಯ ಸಂಶೋಧನಾ ಚಟುವಟಿಕೆಗಳನ್ನು ಮತ್ತಷ್ಟು ಹೆಚ್ಚಿಸಲು ಯೋಜನೆಗಳನ್ನು ಕೈಗೊಳ್ಳಲಾಗಿದೆ. ಸಹ್ಯಾದ್ರಿ ಕಾಲೇಜಿಗೆ 15 ಕೋಟಿಗೂ ಅ ಧಿಕ ಅನುದಾನದಲ್ಲಿ ಕಾಲೇಜು ಕಟ್ಟಡ, ಪ್ರಯೋಗಾಲಯ ಅಭಿವೃದ್ಧಿ, ಹಾಸ್ಟೆಲ್‌ಗ‌ಳ ನಿರ್ಮಾಣ ಇತ್ಯಾದಿ ಅಭಿವೃದ್ಧಿಯ ಚಟುವಟಿಕೆಗಳನ್ನು ಕೈಗೊಳ್ಳಲು ಸರ್ಕಾರ ಅನುಮೋದನೆ ನೀಡಿದೆ. ಇನ್ನೂ 15 ಕೋಟಿಗೂ ಅ ಧಿಕ ಮೊತ್ತದ ಅಭಿವೃದ್ಧಿ ಪ್ರಸ್ತಾವನೆ ಸಲ್ಲಿಸಲಾಗಿದೆ. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲು ತರಬೇತಿ ಕೇಂದ್ರ, ಕೌಶಲ್ಯ ಕೇಂದ್ರಗಳನ್ನು ಸ್ಥಾಪಿಸಲು ಯೋಜಿಸಲಾಗುತ್ತಿದೆ ಎಂದರು.

ಕುಲಸಚಿವರಾದ ಅನುರಾಧ ಜಿ. ಮಾತನಾಡಿ, ವಿಶ್ವವಿದ್ಯಾಲಯದ ಸರ್ವತೋಮುಖ ಅಭಿವೃದ್ಧಿಯ ದೃಷ್ಟಿಯಿಂದ ಸಾಂಸ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಯೋಜನೆಗಳನ್ನು ರೂಪಿಸಲಾಗಿದ್ದು, ಕುಲಪತಿಗಳ ನೇತೃತ್ವದಲ್ಲಿ ಮುಂಬರುವ ದಿನಗಳಲ್ಲಿ ವಿಶ್ವವಿದ್ಯಾಲಯದ ರ್‍ಯಾಂಕಿಂಗ್‌ ಉತ್ತಮಪಡಿಸುವ ನಿಟ್ಟಿನಲ್ಲಿ ಎಲ್ಲರೂ ಕಾರ್ಯೋನ್ಮುಖರಾಗಬೇಕು ಎಂದರು. ಈ ಸಂದರ್ಭದಲ್ಲಿ ಕುಲಸಚಿವ ಪ್ರೊ| ಸಿ. ಎಂ. ತ್ಯಾಗರಾಜ್‌, ಪ್ರಾಧ್ಯಾಪಕರುಗಳಾದ ಪ್ರೊ| ಜಯಣ್ಣ, ಪ್ರೊ| ಜಯರಾಮ್‌ ಭಟ್‌ ಸೇರಿದಂತೆ ಹಲವರು ವಿವಿ ಬೆಳವಣಿಗೆಯನ್ನು ಮೆಲುಕು ಹಾಕಿದರು.

ಕಾರ್ಯಕ್ರಮದಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಸರ್ಕಾರದ ಮಾರ್ಗಸೂಚಿಯ ಅನ್ವಯ ದೈಹಿಕ ಅಂತರ ಕಾಯ್ದುಕೊಂಡು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next