Advertisement

ಬಸವಣ್ಣನವರ ತತ್ವಾದರ್ಶ ಎಲ್ಲರೂ ಪಾಲಿಸಿ

06:41 PM Jul 25, 2021 | Shreeraj Acharya |

ಶಿವಮೊಗ್ಗ: ಸಮ ಸಮಾಜ ನಿರ್ಮಾಣದ ಹರಿಕಾರ ಬಸವಣ್ಣನವರ ತತ್ವಗಳನ್ನು ಎಲ್ಲರೂ ಪಾಲಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು. ಶನಿವಾರ ಬೆಂಗಳೂರಿನ ಸಿಎಂ ಗೃಹ ಕಚೇರಿ ಕೃಷ್ಣದಿಂದ ಶಿವಮೊಗ್ಗದಲ್ಲಿ ಪ್ರತಿಷ್ಠಾಪಿಸಿರುವ ಬಸವೇಶ್ವರ ಪುತ್ಥಳಿ ಲೋಕಾರ್ಪಣೆ ಕಾರ್ಯಕ್ರಮವನ್ನು ವರ್ಚುವಲ್‌ ಹೋಸ್ಟಿಂಗ್‌ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಪುತ್ಥಳಿ ಅನಾವರಣಗೊಂಡಿರುವುದು ಸಂತಸ ತಂದಿದೆ. ಈ ಮೂಲಕ ಬಸವಣ್ಣನವರ ತತ್ವಗಳು ಇಡೀ ಜಗತ್ತಿಗೆ ಪಸರಿಸಿಕೊಂಡಿವೆ.

Advertisement

ಬಸವಣ್ಣನವರು ತೋರಿಸಿದ ಅನುಭವ ಮಂಟಪದ ಮಾರ್ಗ, ಸಮಾನತೆ, ಜಾತಿ, ಮತ, ಭೇದವಿಲ್ಲದ ಸಮ ಸಮಾಜ ನಿರ್ಮಾಣ, ಮೇಲು, ಕೀಳು ಭಾವನೆ ತೊರೆಯುವುದು ಇವೆಲ್ಲವೂ ನಮಗೆ ಆದರ್ಶವಾಗಿವೆ. ಬಸವಣ್ಣ ವ್ಯಕ್ತಿಯ ಅಂತರಂಗದ ಶಕ್ತಿಯನ್ನು ಜಗತ್ತಿಗೆ ಸಾರಿದ ಮಹಾತ್ಮ ಎಂದರು.

ಬಸವಣ್ಣನವರು ಕಾಯಕವೇ ಕೈಲಾಸ ಎಂದು ಹೇಳುವ ಮೂಲಕ ದುಡಿಮೆಯ ಮಹತ್ವ ಮತ್ತು ಶ್ರಮಿಕರ ಶ್ರೇಷ್ಠತೆಯನ್ನು ಸಾರಿದವರು. ತಮ್ಮ ಸರಳ ವಚನಗಳ ಮೂಲಕ ಸಮಾನತೆ ಕಾಯಕ ದಾಸೋಹ ಮುಂತಾದ ತತ್ವಗಳನ್ನು 12 ನೇ ಶತಮಾನದಲ್ಲಿಯೇ ತಿಳಿಸಿದವರು.

ಅವರು ಸ್ಥಾಪಿಸಿದ ಅನುಭವ ಮಂಟಪ ಸಂಸದೀಯ ವ್ಯವಸ್ಥೆಯ ಮೂಲ ಎಂದರು. ಬಸವಣ್ಣನವರ ಅನುಭವ ಮಂಟಪದಲ್ಲಿ ಸಾಮಾನ್ಯರು ಕೂಡ ತಮ್ಮ ಅನುಭವ ಮತ್ತು ಅನುಭಾವ ಹಂಚಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದರು. ಅಷ್ಟೇ ಅಲ್ಲ, ಇದರ ಜೊತೆಗೆ ಕನ್ನಡ ಸಾಹಿತ್ಯದ ಹೊಸ ಪ್ರಕಾರವೊಂದು ವಚನ ಸಾಹಿತ್ಯ ರೂಪದಲ್ಲಿ ಉದಯವಾಯಿತು.

ಅವರ ವಿಚಾರಧಾರೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಸುಮಾರು 500 ಕೋಟಿ ರೂ. ವೆಚ್ಚದಲ್ಲಿ ಅನುಭವ ಮಂಟಪದ ನಿರ್ಮಾಣಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. ಬಸವಾದಿ ಶರಣರು ಪ್ರತಿಪಾದಿಸಿದ ತತ್ವ ಸಿದ್ಧಾಂತಗಳನ್ನು ಸ್ವಲ್ಪ ಮಟ್ಟಿಗಾದರೂ ನಾವು ಅಳವಡಿಸಿಕೊಳ್ಳಬೇಕು ಎಂದರು.

Advertisement

ಈ ಸಂದರ್ಭದಲ್ಲಿ ಡಿಸಿಎಂ ಲಕ್ಷಣ ಸವದಿ, ಸಚಿವರಾದ ಭೆ„ರತಿ ಬಸವರಾಜ್‌, ಬಿ.ಸಿ. ಪಾಟೀಲ್‌, ಎಂಟಿಬಿ ನಾಗರಾಜ್‌, ವಿಧಾನ ಪರಿಷತ್‌ ಸದಸ್ಯ ಆಯನೂರು ಮಂಜುನಾಥ್‌, ಅನಂತ ಹೆಗ್ಡೆ ಆಶೀಸರ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next