Advertisement

ಜೀವ ವೈವಿಧ್ಯ ಸಮಿತಿ ಚುರುಕುಗೊಳಿಸಲು ಯತ್ನ

10:27 PM Jul 09, 2021 | Shreeraj Acharya |

ಸಾಗರ: ಜು. 2ರಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಜೀವ ವೈವಿಧ್ಯ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದ್ದು, ಆ.15ರವರೆಗೆ ರಾಜ್ಯಾದ್ಯಂತ ಅಭಿಯಾನ ಹಮ್ಮಿಕೊಳ್ಳಲಾಗುವುದು. ಸ್ಥಳೀಯವಾಗಿ ಜೀವ ವೈವಿಧ್ಯ ಸಮಿತಿಗಳನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ಸೂಕ್ತ ಯೋಜನೆ ರೂಪಿಸಬೇಕಾಗಿದೆ ಎಂದು ಕರ್ನಾಟಕ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಇಲ್ಲಿನ ತಾಪಂ ಸಾಮರ್ಥ್ಯ ಸೌಧದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಜೀವ ವೈವಿಧ್ಯ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜೀವ ವೈವಿಧ್ಯದ ಮಹತ್ವವನ್ನು ಮನಗಂಡು ತಾಲೂಕಿನಲ್ಲಿ ಬಹಳಷ್ಟು ಜನ ಕೆಲಸ ಮಾಡುತ್ತಿದ್ದಾರೆ.

ಅಂತಹ ಕ್ಷೇತ್ರ ಕಾರ್ಯ ಮಾಡುತ್ತಿರುವವನ್ನು ಸನ್ಮಾನಿಸುವ, ಅವರಿಂದ ಮಾರ್ಗದರ್ಶನ ನೀಡುವ ಕಾರ್ಯ ಗ್ರಾಪಂ ಮಟ್ಟದಲ್ಲಿ ಆಗಬೇಕು. ತಾಲೂಕಿನ ಜೀವ ವೈವಿಧ್ಯದ ವಿಶೇಷತೆಯನ್ನು ಮಂಡಳಿಯ ವರದಿಯಲ್ಲಿ ದಾಖಲಿಸಲಾಗಿದ್ದು, ಅದನ್ನು ತಾಲೂಕು ಮಟ್ಟದಲ್ಲಿ ಬಿಡುಗಡೆ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಜೀವವೈವಿಧ್ಯ ತಾಣಗಳ, ಪಾರಂಪರಿಕ ತಾಣಗಳ ಸಂರಕ್ಷಣೆ ಸಂಬಂಧ ಸ್ಥಳೀಯವಾಗಿ ಕೆಲಸವಾಗಬೇಕು. ಅಂತಹ ಒಂದು ಸ್ಥಳವನ್ನು ತಾಲೂಕು ಮಟ್ಟದಲ್ಲಿ ಗುರುತಿಸಿ, ಘೋಷಿಸುವ ಮೂಲಕ ತಾಲೂಕು ಮಟ್ಟದ ಜೀವ ವೈವಿಧ್ಯ ತಾಣವೆಂಬ ಪಟ್ಟ ನೀಡುವ ಕಾರ್ಯ ಆಗಬೇಕು ಎಂದರು.

ಕೃಷಿ ಅರಣ್ಯ ಯೋಜನೆ, ಔಷಧ ಸಸ್ಯಗಳನ್ನು ಬೆಳೆಸುವ ಹಲವು ಕಾರ್ಯ ಚಟುವಟಿಕೆಗಳನ್ನು ಬೆಂಬಲಸುವ ಯತ್ನ ಆಗಬೇಕು. ಸ್ಥಳೀಯವಾದ ದೇವರ ಕಾಡು, ನೈಸರ್ಗಿಕ ಅರಣ್ಯ, ಕೆರೆಗಳ, ಕಾನು ಗೋಮಾಳಗಳ ಸಂರಕ್ಷಣೆ ಸಂಬಂಧ ಕಾರ್ಯಕ್ರಮ ಹಮ್ಮಿಕೊಳ್ಳಬೇಕಾಗಿದೆ. ಅತ್ಯಂತ ವಿನಾಶದ ಅಂಚಿನಲ್ಲಿರುವ ವೃಕ್ಷಗಳ ವಿವರವನ್ನು ಒಳಗೊಂಡ ಜೀವ ವೈವಿಧ್ಯ ಮಂಡಳಿಯ ಪರಿಷ್ಕೃತ ಪಟ್ಟಿಯನ್ನು ಈಚೆಗೆ ಬಿಡುಗಡೆ ಮಾಡಲಾಗಿದೆ.

ತಾಲೂಕಿನಲ್ಲಿನ ಬರೂರು ಭಾಗದಲ್ಲಿನ ಕಾಡುಗಳಲ್ಲಿ ಸೀತಾ ಅಶೋಕ, ಅರಿಶಿಣ ಮರ ಮುಂತಾದ ಅಪರೂಪದ ವಿನಾಶದ ಅಂಚಿನಲ್ಲಿರುವ ವೃಕ್ಷಗಳ ಸಮೂಹವಿದೆ. ಬರೂರು ವ್ಯಾಪ್ತಿಯ ಸೀತಾ ಅಶೋಕ ವೃಕ್ಷ ಸಮೂಹಕ್ಕೆ 10 ವರ್ಷಗಳ ಹಿಂದೆ ಸಂರಕ್ಷಣೆಯ ಕವಚ ತೊಡಿಸಲಾಗಿದೆ. ಆದರೆ ಇಂತಹ ಯತ್ನಗಳು ಹೆಚ್ಚಾಗಬೇಕು. ಅರಣ್ಯ ಇಲಾಖೆಯ ಅಧಿಕಾರಿಗಳು, ಗ್ರಾಮ ಅರಣ್ಯ ಸಮಿತಿ, ಸ್ಥಳೀಯ ಪರಿಸರ ಸಂಬಂತ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಜೀವ ವೈವಿಧ್ಯದ ಜಾಗೃತಿ ಮೂಡಿಸುವ ಮತ್ತು ಸಂರಕ್ಷಣೆಯ ವಿಶೇಷ ಚಟುವಟಿಕೆಗಳನ್ನು ಆಯೋಜಿಸಬೇಕಾಗಿದೆ ಎಂದರು.

Advertisement

ಸಮಿತಿಯ ಕಾರ್ಯದರ್ಶಿ ಇಒ ಪುಷ್ಪಾ ಎಂ. ಕಮ್ಮಾರ, ಸದಸ್ಯರಾದ ಹೊಸನಗರದ ಇಒ ಪ್ರವೀಣ್‌, ಸೊರಬದ ಇಒ ಕುಮಾರ, ಜೀವ ವೈವಿಧ್ಯ ಮಂಡಳಿಯ ಸದಸ್ಯ ಕೆ. ವೆಂಕಟೇಶ್‌, ಎಂಎಡಿಬಿ ಸದಸ್ಯ ಬಿ.ಎಚ್‌. ರಾಘವೇಂದ್ರ, ತಾಪಂ ಅಧಿ ಕಾರಿ ವರ್ಗದ ಬಾಲಸುಬ್ರಹ್ಮಣ್ಯ, ಅರಣ್ಯ ಇಲಾಖೆಯ ಅ ಧಿಕಾರಿಗಳು, ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next