ಭದ್ರಾವತಿ: ಸರ್ಕಾರಿ ಮತ್ತು ಖಾಸಗಿ ಕಟ್ಟಡ ಮತ್ತಿತರ ಕಾಮಗಾರಿ ಕೆಲಸ ಮಾಡಲು ಬಂದಿರುವ ಹೊರರಾಜ್ಯಗಳ ಕಾರ್ಮಿಕರ ತಾತ್ಕಾಲಿಕ ವಸತಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದಲ್ಲಿ ತಾತ್ಕಾಲಿಕ ವಸತಿ ಸಮುಚ್ಚಯವನ್ನು ಶಿವಮೊಗ್ಗದ ಸಿದ್ದಲಿಪುರದಲ್ಲಿ ನಿರ್ಮಿಸಲಾಗುವುದು ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು. ಭಾನುವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ಜಿಲ್ಲೆಯಲ್ಲೇ ಭದ್ರಾವತಿ ತಾಲೂಕು ಅತಿ ಹೆಚ್ಚು ಕಾರ್ಮಿಕರನ್ನು ಒಳಗೊಂಡ ನಗರವಾಗಿದೆ.
ಪ್ರಧಾನಿಯವರ ಆಶಯದಂತೆ ದೇಶದಲ್ಲಿ ವಲಸೆ ಕಾಮಿಕರಿಗೆ ತಾತ್ಕಾಲಿಕ ವಸತಿ ನಿರ್ಮಾಣ ಕಾರ್ಯ ಹಲವೆಡೆ ಪ್ರಗತಿಯಲ್ಲಿದೆ. ವಿಶೇಷವಾಗಿ ಕೋವಿಡ್ ಸಂಕಷ್ಟ ಕಾಲದಲ್ಲಿ ಹೊರರಾಜ್ಯಗಳಿಂದ ಶಿವಮೊಗ್ಗ, ಭದ್ರಾವತಿಯಲ್ಲಿನ ವಿವಿಧ ಕಾಮಗಾರಿಗಳಿಗೆ ಅಸಂಖ್ಯಾತ ಕಾರ್ಮಿಕರು ಕೆಲಸಕ್ಕಾಗಿ ಬಂದಿದ್ದಾರೆ. ಈ ರೀತಿ ಬಂದ ಕಾರ್ಮಿಕರಿಗೆ ತಾತ್ಕಾಲಿಕ ವಸತಿ ನಿರ್ಮಾಣಕ್ಕಾಗಿ ರಾಜ್ಯದಲ್ಲಿ ಪ್ರಸ್ತುತ ಎರಡು ಜಿಲ್ಲೆಗಳಿಗೆ ಅನುಮತಿ ದೊರೆತಿದೆ. ಅದರಲ್ಲಿ ನಮ್ಮ ಶಿವಮೊಗ್ಗ ಜಿಲ್ಲೆ ಸಹ ಸೇರಿದೆ.
ಶಿವಮೊಗ್ಗದ ಸಿದ್ದಲಿಪುರದ ಸ.ನಂ. 103, 104, 105ರಲ್ಲಿ 10 ಎಕರೆ ವಿಸ್ತೀರ್ಣದ ಜಾಗದಲ್ಲಿ ಸುಮಾರು ಮೂವತ್ತು ಕೋಟಿ ರೂ. ವೆಚ್ಚದಲ್ಲಿ ಈ ವಲಸೆ ಕಾರ್ಮಿಕರಿಗಾಗಿ ಮೂಲ ಸೌಕರ್ಯ ಸಹಿತವಾದ ತಾತ್ಕಾಲಿಕ ವಸತಿ ಸಮುತ್ಛಯವನ್ನು ನಿರ್ಮಾಣ ಮಾಡಲು ನಿರ್ಧರಿಸಿ ಆ ಬಗ್ಗೆ ಶೀಘ್ರವಾಗಿ ಕಾಮಗಾರಿ ಆರಂಭಗೊಳ್ಳಲಿದೆ. ಅವಿವಾಹಿತರಿಗೆ ಮತ್ತು ಕುಟುಂಬಸ್ಥರಿಗೆ ತಕ್ಕಂತ ರೀತಿಯ ಗೃಹಗಳನ್ನೂ ಈ ಸಮುಚ್ಚಯದಲ್ಲಿ ನಿರ್ಮಿಸಲಾಗುತ್ತದೆ. ಸುಮಾರು 2 ಸಾವಿರ ವಲಸೆ ಕಾರ್ಮಿಕರು ಇದರ ಪ್ರಯೋಜನ ಪಡೆಯಲಿದ್ದಾರೆ ಎಂದರು.
ಭದ್ರಾವತಿಯಲ್ಲಿ ಕಾರ್ಮಿಕ ಭವನ: ಕೈಗಾರಿಕಾ ನಗರವೆನಿಸಿದ ಭದ್ರಾವತಿ ತಾಲೂಕಿನ ಸುತ್ತಮುತ್ತ ಇದೇ ರೀತಿ ತಾತ್ಕಾಲಿಕ ವಸತಿಗೃಹಗಳ ನಿರ್ಮಾಣ ಮಾಡಬೇಕೆಂಬ ಸಲಹೆ ಸಹ ಬಂದಿದ್ದು ಅದನ್ನೂ ಸಹ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಭದ್ರಾವತಿಯ ಕಾರ್ಮಿಕರಿಗಾಗಿ ಇಲ್ಲಿ ಸುಸಜ್ಜಿತವಾದ ಕಾರ್ಮಿಕ ಭವನವೊಂದನ್ನು ನಿರ್ಮಿಸುವ ಯೋಚನೆ ಸಹ ಇದ್ದು, ಅದನ್ನು ಸಹ ಕಾರ್ಯರೂಪಕ್ಕೆ ತರಲಾಗುವುದು ಎಂದರು.
ಭದ್ರಾವತಿಯಲ್ಲಿ ಕೇಂದ್ರೀಯ ವಿದ್ಯಾಶಾಲೆಯ ಸ್ಥಾಪನೆ ಮಾಡಲಾ ಗುತ್ತಿದ್ದು ರ್ಯಾಪಿಡ್ ಆ್ಯಕ್ಷನ್ ಫೋರ್ಸ್‌ನಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳ ಮಕ್ಕಳಿಗೆ ಶೇ. 20, ಉಳಿದ ಶೇ. 80 ಸೀಟ್‌ಗಳನ್ನು ಭದ್ರಾವತಿಯ ಸ್ಥಳೀಯ ನಾಗರಿಕರ ಮಕ್ಕಳಿಗೆ ಮೀಸಲಿಡಲು ನಿರ್ಧರಿಸಲಾಗಿದೆ. ಎಂಪಿಎಂ ಪುನಶ್ಚೇತನದ ಕಾರ್ಯ ಪ್ರಗತಿಯಲ್ಲಿದೆ ಮತ್ತು ವಿಐಎಸ್‌ಎಲ್ ಕಾರ್ಖಾನೆಯ ಸಮಸ್ಯೆ ಸಹ ಬಗೆಹರಿ ಯುವ ಆಶಾಭಾವನೆ ಇದ್ದು ಭದ್ರಾವತಿಗೆ ಇರುವ ಕೈಗಾರಿಕಾ ನಗರವೆಂಬ ಹೆಸರನ್ನು ಉಳಿಸುವ ನಿಟ್ಟಿನಲ್ಲಿ ಸರ್ವಪ್ರಯತ್ನಗಳೂ ನಡೆಯುತ್ತಿವೆ ಎಂದರು.
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ರುದ್ರೇಗೌಡ, ಬಿಜೆಪಿ ತಾಲೂಕು ಅಧ್ಯಕ್ಷ ಪ್ರಭಾಕರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಧರ್ಮಪ್ರಸಾದ್, ಬಿ.ಕೆ. ಶ್ರೀನಾಥ್, ಹಟ್ಟಿ ಚಿನ್ನದ ಗಣಿ ನಿಗಮದ ನಿರ್ದೇಶಕ ಕೂಡ್ಲಿಗೆರೆ ಹಾಲೇಶ್, ರಾಜ್ಯ ಒಳಚರಂಡಿ ನಿಗಮದ ಸದಸ್ಯ ಮಂಗೋಟೆ ರುದ್ರೇಶ್, ರಾಜ್ಯಕಾರಿಣಿ ಸಮಿತಿಯ ಸದಸ್ಯೆ ಆರ್.ಎಸ್. ಶೋಭಾ ಇತರರು ಇದ್ದರು.