ಶಿವಮೊಗ್ಗ: ದೇಶದ ರಾಜಧಾನಿ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಶತಕ ಬಾರಿಸಿದ್ದ ಪೆಟ್ರೋಲ್ ದರ ಮಲೆನಾಡು ಶಿವಮೊಗ್ಗದಲ್ಲೂ ಬುಧವಾರ ಶತಕ ಬಾರಿಸಿದೆ. ಶಿವಮೊಗ್ಗದಲ್ಲಿ ಇದೀಗ ಪೆಟ್ರೋಲ್ ದರ 100.14 ರೂ. ಗಳಾಗಿದ್ದು, ಡಿಸೇಲ್ ಬೆಲೆ 92.87 ರೂ.ಗೆ ಬಂದು ತಲುಪಿದೆ. ಪವರ್ ಪೆಟ್ರೋಲ್ 103.69 ರೂ. ಟಬೋìಜೆಟ್ 96.20 ರೂ. ಆಗಿದೆ ಎಂದು ವರದಿ ತಿಳಿಸಿದೆ.
ಜಿಲ್ಲೆಯಲ್ಲಿ ಮೇ.1ರಂದು ಪ್ರತಿ ಲೀಟರ್ ಪೆಟ್ರೋಲ್‌ಗೆ 94.6 ರೂ ಇತ್ತು. ಮೇ.5ರಂದು 95.15 ರೂ, ಮೇ.10ಕ್ಕೆ 95.96 ರೂ. ಹಾಗೂ ಮೇ.15ಕ್ಕೆ 95.8 ರೂ.ಮೇ 20 ರಂದು 97.33 ರೂಪಾಯಿಗೆ ತಲುಪಿತ್ತು. ಮೇ.25ಕ್ಕೆ 97.94 ರೂ., ಮೇ.31 ರಂದು 99.03 ರೂಗೆ ಏರಿಕೆಯಾಗಿತ್ತು. ಪೈಸೆ ಲೆಕ್ಕದಲ್ಲಿ ಏರಿಕೆ: ಜೂ.1ರಂದು 99.03 ರೂ. ಇದ್ದ ಪೆಟ್ರೋಲ್ ಬೆಲೆ ಪೈಸೆ ಲೆಕ್ಕದಲ್ಲಿ ಏರಿಕೆಯಾಗಿ ಶತಕ ಬಾರಿಸಿದೆ.
ಜೂ.4ರಂದು 0.28 ಪೈಸೆ ಹೆಚ್ಚಳವಾಗಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 99.31ರೂ. ಗೆ ತಲುಪಿತ್ತು. ಜೂ.6ರಂದು 99.51ರೂ. ಜೂ.7ರಂದು 99.88ರೂ. ಗೆ ತಲುಪಿತ್ತು. ಈಗ 0.26 ಹೆಚ್ಚಳವಾಗಿ ಶತಕದ ಗಡಿ ದಾಟಿದೆ. ಏರುತ್ತಲೆ ಇದೆ ದರ: ಶಿವಮೊಗ್ಗ ಜಿಲ್ಲೆಯಲ್ಲಿ ಪೆಟ್ರೋಲ್ ದರ ದುಬಾರಿಯಾಗುತ್ತಿದೆ. ಕಳೆದ ವರ್ಷ ಪ್ರತಿ ಲೀಟರ್ ದರ 74.62ರೂ ಇತ್ತು. ಆರು ತಿಂಗಳ ಹಿಂದೆ 84.96ರೂ. ತಲುಪಿತ್ತು. ಮೂರು ತಿಂಗಳ ಹಿಂದೆ 91.03 ರೂ. ಗೆ ಏರಿಕೆಯಾಯ್ತು. ಈಗ 100.14 ರೂ. ಗೆ ಏರಿಕೆಯಾಗಿದ್ದು, ವಾಹನ ಸವಾರರಿಗೆ ಹೊರೆಯಾಗಿದೆ.
ಸರ್ಕಾರದ ವಿರುದ್ಧ ಜನಾಕ್ರೋಶ: ಪೆಟ್ರೋಲ್ ಮತ್ತು ಡಿಸೇಲ್ ದರ ಏರಿಕೆ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ. ಪೆಟ್ರೋಲ್ 100 ರೂ. ಗಡಿ ದಾಟಿದರೂ ಕೇಂದ್ರ ಸರ್ಕಾರ ಈ ಬಗ್ಗೆ ಮಾತನಾಡುತ್ತಿಲ್ಲ. ಯಾವ ಪಕ್ಷದ ಸರ್ಕಾರವಿದ್ದರೂ ಬೆಲೆ ಏರಿಕೆಗೆ ಕಡಿವಾಣ ಹಾಕುವಲ್ಲಿ ವಿಫಲವಾಗಿವೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.