Advertisement

ನಿಲ್ಲದ ಸೋಂಕಿನ ಯಾತ್ರೆ-ಲಾಕ್‌ಡೌನ್‌ನಲ್ಲೂ ಜನರ ಜಾತ್ರೆ!

10:31 PM Jun 09, 2021 | Shreeraj Acharya |

ಶಿವಮೊಗ್ಗ: ಜಿಲ್ಲೆಯಲ್ಲಿ ಕಠಿಣ ಲಾಕ್‌ಡೌನ್‌ ಜಾರಿಯಲ್ಲಿದ್ದರೂ ಜನರ ಅನಗತ್ಯ ಓಡಾಟ ಮಾತ್ರ ಎಗ್ಗಿಲ್ಲದೆ ಸಾಗಿದೆ. ಕೊರೊನಾ ಸೋಂಕಿನ ಸರಪಳಿ ತುಂಡರಿಸಲು ಜೂ.14 ರವರೆಗೆ ಜಿಲ್ಲಾಡಳಿತ ಕಠಿಣ ಲಾಕ್‌ಡೌನ್‌ ಜಾರಿಗೊಳಿಸಿ ಆದೇಶಿಸಿದೆ. ಆದರೆ ಜನರ ಓಡಾಟ ಗಮನಿಸಿದರೆ ಈ ಆದೇಶ ಯಾರಿಗೆ ಎಂಬ ಪ್ರಶ್ನೆ ಮೂಡಿದೆ. ಕಳೆದ 20 ದಿನಗಳಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಪ್ರತಿದಿನ ಏರುಗತಿಯಲ್ಲಿ ಸಾಗಿತ್ತು.

Advertisement

ಸೋಂಕಿತರ ಸಾವಿನ ಸಂಖ್ಯೆಯೂ ಪ್ರತಿದಿನ 10 ಕ್ಕಿಂತ ಹೆಚ್ಚು ದಾಖಲಾಗುತ್ತಿತ್ತು. ಕೊರೊನಾ ಸೋಂಕು-ಸಾವು ತಹಬದಿಗೆ ತರಲು ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಆರೋಗ್ಯ ಇಲಾಖೆ ಅಧಿಕಾರಿಗಳು ಉಸ್ತುವಾರಿ ಸಚಿವ ಕೆ.ಎಸ್‌. ಈಶ್ವರಪ್ಪನವರ ನೇತೃತ್ವದಲ್ಲಿ ಸರಣಿ ಸಭೆಗಳನ್ನು ನಡೆಸಿ ಅನೇಕ ನಿರ್ಣಯ ಕೈಗೊಳ್ಳಲಾಗಿತ್ತು. ಅಲ್ಲದೆ ಲಾಕ್‌ಡೌನ್‌ನ್ನು ಮತ್ತಷ್ಟು ಬಿಗಿಗೊಳಿಸಲು ತೀರ್ಮಾನಿಸಲಾಗಿತ್ತು. ಮೊದಲು ವಾರದಲ್ಲಿ 2 ದಿನ ಕಠಿಣ ಲಾಕ್‌ಡೌನ್‌ ಇದ್ದದ್ದು ನಂತರ ವಾರಾಂತ್ಯದವರೆಗೂ ವಿಸ್ತರಣೆಯಾಯಿತು. ಕೇವಲ ಬೆಳಿಗ್ಗೆ 6 ರಿಂದ 7ರ ವರೆಗೆ ಮಾತ್ರ ದಿನಸಿ ಹಾಗೂ ತರಕಾರಿ ಖರೀದಿಗೆ ಅವಕಾಶ ನೀಡಲಾಗಿತ್ತು. ಈಗ ಅದನ್ನು ಸದ್ಯ ಬೆಳಿಗ್ಗೆ 8 ರವರೆಗೆ ವಿಸ್ತರಿಸಿದ್ದರೂ ಕೂಡ ತರಕಾರಿ ಮಾರುಕಟ್ಟೆಯಲ್ಲಿ 7 ಗಂಟೆಗೆ ವ್ಯಾಪಾರ ಸ್ಥಗಿತಗೊಳಿಸಲಾಗುತ್ತಿದೆ.

ಕೆಲವೊಂದು ಕಠಿಣ ನಿಯಮಗಳಿಂದ ಸೋಂಕು ಸ್ವಲ್ವ ಇಳಿಮುಖವಾಗಿದ್ದರೂ ಸಾವಿನ ಸಂಖ್ಯೆ ಕಡಿಮೆಯಾಗಿಲ್ಲ. ಹೀಗಾಗಿ ಮತ್ತೂಂದು ವಾರ ಕಠಿಣ ಲಾಕ್‌ಡೌನ್‌ ಮುಂದುವರಿಸಲಾಗಿದೆ. ಆದರೆ ಜನ ಮಾತ್ರ ಇದಕ್ಕೆ ಸ್ಪಂದಿಸದೆ ಸುತ್ತಾಡುತ್ತಲೇ ಇದ್ದಾರೆ. ಲಾಕ್‌ಡೌನ್‌ ಜಾರಿಯಾದ ದಿನದಿಂದ ಪೊಲೀಸರು ಕಾರ್ಯಾಚರಣೆ ನಡೆಸುತ್ತಲೇ ಇದ್ದಾರೆ. ವಾಹನ ವಶ ಪಡಿಸಿಕೊಳ್ಳುವುದು, ದಂಡ ಹಾಕುವುದು ಎಲ್ಲ ಮಾಡುತ್ತಿದ್ದರೂ ಜನ ಮಾತ್ರ ಭಯವಿಲ್ಲದೆ ಓಡಾಟ ಮುಂದುವರಿಸಿದ್ದಾರೆ. ಅನಗತ್ಯವಾಗಿ ರಸ್ತೆಗಳಿದವರನ್ನು ಠಾಣೆಗೆ ಕರೆದೊಯ್ದು, ಅವರಿಗೆ ತಿಳಿಹೇಳಿ, ಸೋಂಕಿನ ಬಗ್ಗೆ ಪೊಲೀಸರೇ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡುತ್ತಿದ್ದಾರೆ.

ಆದರೆ ಪೊಲೀಸರ ಯಾವ ಪ್ರಯತ್ನವೂ ಜನರನ್ನು ನಾಟುತ್ತಿಲ್ಲ. ಹಲವು ನೆಪಗಳನ್ನು ಒಡ್ಡಿ ಜನ ಮನೆಯಿಂದ ಹೊರಬರುತ್ತಿರುವುದು ನಿಂತಿಲ್ಲ. ಪೊಲೀಸರೂ ಜನರ ನಿಯಂತ್ರಣ ಅಸಾಧ್ಯ ಎಂದು ಸುಮ್ಮನಾದಂತಿದೆ. ಹೀಗಾಗಿ ಕಠಿಣ ಲಾಕ್‌ಡೌನ್‌ ಇದ್ದರೂ ಮಂಗಳವಾರ ಸಾರ್ವಜನಿಕರ ಓಡಾಟ ಉಳಿದ ದಿನಕ್ಕಿಂತ ಹೆಚ್ಚಿತ್ತು. ಸೋಂಕು ಇಳಿಮುಖವಾಗುತ್ತಿರುವುದು ಜನರಲ್ಲಿನ ಭಯವನ್ನೂ ಕಡಿಮೆಯಾಗಿಸಿತೇ ಎಂಬ ಅನುಮಾನ ಮೂಡುವಂತಿತ್ತು. ಲಾಕ್‌ ಡೌನ್‌ ಇದೆ ಎಂಬುದನ್ನೇ ಮರೆತಂತೆ ಮಾರುಕಟ್ಟೆಗಳಲ್ಲಿ ಜನಜಂಗುಳಿ ಉಂಟಾಗಿತ್ತು.

ಕಳೆದೆರಡು ದಿನಗಳಿಂದ ಪೊಲೀಸರು ದಂಡ ಹಾಕುವ ಪ್ರಕ್ರಿಯೆಯನ್ನು ಕಡಿಮೆ ಮಾಡಿರುವುದು ಕೂಡ ಜನರ ಓಡಾಟಕ್ಕೆ ಪರೋಕ್ಷ ಬೆಂಬಲ ನೀಡಿದಂತಾಗಿತ್ತು. ಇದಲ್ಲದೆ ಹಲವು ಬಡಾವಣೆಗಳಲ್ಲಿ ಕೆಲ ಅಂಗಡಿಗಳೂ 10 ಗಂಟೆ ನಂತರವೂ ತೆರೆದಿದ್ದವು. ಅಲ್ಲದೆ ಕೆಲವೆಡೆ ಕದ್ದುಮುಚ್ಚಿ ವ್ಯಾಪಾರವೂ ನಡೆದಿತ್ತು. ಅಗತ್ಯ ಕೆಲಸಗಳಿಗಾಗಿ ಮನೆಯಿಂದ ಹೊರಬಂದ ವರು ಒಂದೆಡೆಯಾದರೆ ಕೆಲವರು ಅನಗತ್ಯವಾಗಿ ರಸ್ತೆಗಳಿದಿದ್ದರಿಂದ ವಾಹನ ಸಂಚಾರ ಹೆಚ್ಚಿತ್ತು. ಇನ್ನು ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲೂ ಪರಿಸ್ಥಿತಿ ಭಿನ್ನವಾಗಿರಲಿಲ್ಲ.

Advertisement

ಸಗಟು ತರಕಾರಿ ವ್ಯಾಪಾರಕ್ಕೆ ಅವಕಾಶವಿದ್ದುದರಿಂದ ತಮ್ಮ ವಾಹನಗಳ ಜೊತೆಗೆ ಮಾರುಕಟ್ಟೆ ಒಳಗೆ ಹೋಗಿ ಸಾಮಾಜಿಕ ಅಂತರ ಮರೆತು ಮುಗಿಬಿದ್ದು ತರಕಾರಿ ಖರೀದಿಸಿದರು. ಚಿಲ್ಲರೆ ವ್ಯಾಪಾರಿಗಳು ಸಹ ಮಾರುಕಟ್ಟೆಯಲ್ಲಿ ಖರೀದಿಗೆ ಬಂದಿದ್ದರಿಂದ ಸಹಜವಾಗಿಯೇ ಜನಜಂಗುಳಿ ಹೆಚ್ಚಿತ್ತು. ಅವಶಕ್ಯಕ ವಸ್ತುಗಳ ಖರೀದಿಗೆ ಅವಕಾಶ ನೀಡಿದ ಸಮಯ ಮುಗಿದ ನಂತರವೂ ಬಹುತೇಕ ರಸ್ತೆಗಳು ಜನರಿಂದ ತುಂಬಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next