ಶಿವಮೊಗ್ಗ: ಈಗಿರುವ ಲಾಕ್‌ಡೌನ್ ಅವೈಜ್ಞಾನಿಕವಾಗಿದ್ದು, ಲಾಕ್‌ಡೌನ್ ಈಶ್ವರಪ್ಪ ಎಂದೇ ಖ್ಯಾತಿ ಹೊಂದಿರುವ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪನವರು ಇದನ್ನು ಸರಿಪಡಿಸಬೇಕು ಎಂದು ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಕೆ.ಬಿ. ಪ್ರಸನ್ನ ಕುಮಾರ್ ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಡೀ ಲಾಕ್‌ಡೌನ್ ಸಿಸ್ಟಮ್ ಅವೈಜ್ಞಾನಿಕವಾಗಿದೆ.
ಲಾಕ್‌ಡೌನ್‌ನಿಂದ ಜನ ಜೀವನ ಅಸ್ತವ್ಯಸ್ತವಾಗಿದೆ. ಇಂತಹ ಸಂದರ್ಭದಲ್ಲಿ ಜನೋಪಯೋಗಿ ಕೆಲಸ ಮಾಡುವುದು ಆಳುವ ಸರ್ಕಾರದ ಕರ್ತವ್ಯ. ಆದರೆ ಈ ಸರ್ಕಾರ ಎಲ್ಲಾ ವಿಚಾರದಲ್ಲೂ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು. ಶಿವಮೊಗ್ಗದಲ್ಲಿ ಜನ ದಿನನಿತ್ಯದ ವಸ್ತುಗಳನ್ನು ಖರೀದಿಸಲು ಬೆಳಿಗ್ಗೆ 6 ರಿಂದ 8 ರವರೆಗೆ ಅವಕಾಶ ನೀಡಲಾಗಿದೆ. ಈ ಸಮಯದಲ್ಲಿ ಜನ ಗುಂಪು ಗುಂಪಾಗಿ ಸೇರುವುದರಿಂದ ಸೋಂಕು ಹೆಚ್ಚಳಕ್ಕೂ ಕಾರಣವಾಗುತ್ತಿದೆ. ಆದ್ದರಿಂದ ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ವಸ್ತುಗಳನ್ನು ಖರೀದಿಸಲು ಅವಕಾಶ ನೀಡಬೇಕೆಂದು ಆಗ್ರಹಿಸಿದರು. ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡುವುದು ಸರ್ಕಾರದ ಆದ್ಯ ಕರ್ತವ್ಯ.
ಆದರೆ ಲಸಿಕೆ ಕೊರತೆಯಿಂದ ಜನ ಪರದಾಡುವಂತಾಗಿದೆ. ಲಸಿಕೆ ನೀಡಲು ಖಾಸಗಿ ಆಸ್ಪತ್ರೆಗಳಿಗೆ ಅನುಮತಿ ನೀಡಿರುವುದು ಖಾಸಗಿ ಆಸ್ಪತ್ರೆಗಳಿಗೆ ಲಾಭ ಗಳಿಸಲು ಅವಕಾಶ ಮಾಡಿಕೊಟ್ಟಂತಾಗಿದೆ. ಲಸಿಕೆ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು. ಪೆಟ್ರೋಲ್ ಮತ್ತು ಡಿಸೇಲ್ ದರ 100 ರೂ. ಗಡಿ ದಾಟುತ್ತಿದೆ. ಇದರಿಂದಾಗಿ ಸರಕು ಸಾಗಾಣಿಕೆ ದರ ಹೆಚ್ಚಾಗಿ ದಿನನಿತ್ಯದ ವಸ್ತುಗಳು ಸಹ ಗಗನಕ್ಕೇರುತ್ತಿದೆ. ಒಂದು ಕಡೆ ರೈತರ ಚಟುವಟಿಕೆಗಳಿಗೆ ಅವಕಾಶ ನೀಡುತ್ತೇವೆ ಎನ್ನುವ ಜಿಲ್ಲಾಡಳಿತ ಮತ್ತೂಂದು ಕಡೆ ರೈತರಿಗೆ ಪೂರಕವಾಗಿ ಬೇಕಾಗಿರುವ ಬೀಜ, ಗೊಬ್ಬರ ಹಾಗೂ ಕೃಷಿ ಪರಿಕರ ಅಂಗಡಿಗಳನ್ನು ತೆರೆಯಲು ನಿಬಂìಧ ವಿ ಧಿಸಿದೆ. ಹೀಗಾದರೆ ರೈತರು ಹೇಗೆ ತಮ್ಮ ಪರಿಕರಗಳನ್ನು ಕೊಂಡುಕೊಳ್ಳುತ್ತಾರೆ ಎಂದು ಪ್ರಶ್ನಿಸಿದರು. ಆದ್ದರಿಂದ ಬೆಳಿಗ್ಗೆ 6 ರಿಂದ 12 ರ ವರೆಗೆ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.
ಮತ್ತೂಂದು ಕಡೆ ಮದುವೆಗೆ ಅನುಮತಿ ನೀಡಲಾಗುತ್ತಿದೆ. ಆದರೆ ಮದುವೆ ಸಂದರ್ಭದಲ್ಲಿ ಬೇಕಾಗುವ ತಾಳಿ, ಬಟ್ಟೆ ಕೊಂಡುಕೊಳ್ಳಲು ಎಲ್ಲಿಗೆ ಹೋಗಬೇಕು. ಬಟ್ಟೆ ಮತ್ತು ಬಂಗಾರದ ಅಂಗಡಿಗಳನ್ನು ಮುಚ್ಚಿಸಲಾಗಿದೆ. ಬಟ್ಟೆ ಮತ್ತು ಬಂಗಾರದ ಅಂಗಡಿಗಳಿಗೆ ಬೆಳಿಗ್ಗೆ ಕನಿಷ್ಟ 1 ಗಂಟೆಗಳ ಕಾಲ ವ್ಯವಹಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆ ಮಾಜಿ ಸದಸ್ಯರಾದ ಮಂಜುನಾಥ್, ಎಸ್.ಕೆ.ಶ್ಯಾಮಸುಂದರ್, ಆರ್.ಕೆ.ಉಮೇಶ್ ಉಪಸ್ಥಿತರಿದ್ದರು.