ಭದ್ರಾವತಿ: ರಾಜ್ಯದಲ್ಲಿ ಕೊರೊನಾ ನಿಯಂತ್ರದ ಸಲುವಾಗಿ ಸರ್ಕಾರ ಘೋಷಿಸಿರುವ ವಾರಾಂತ್ಯದ ಎರಡು ದಿನಗಳಾದ ಶನಿವಾರ ಮತ್ತು ಭಾನುವಾರದ ಕರ್ಫ್ಯೂಗೆ ಶನಿವಾರ ನಗರದಲ್ಲಿ ನಾಗರಿಕರು ಮತ್ತು ವ್ಯಾಪಾರಸ್ಥರು ಸ್ಪಂದಿಸಿದ ಕಾರಣ ಶನಿವಾರ ನಗರದ ಎಲ್ಲಾ ಅಂಗಡಿ- ಮುಂಗಟ್ಟುಗಳು ಮುಚ್ಚಿದ್ದವು. ರಸ್ತೆಗಳಲ್ಲಿ ಜನ ಮತ್ತು ವಾಹನ ಸಂಚಾರವಿಲ್ಲದೆ ನಗರದ ಎಲ್ಲಾ ಪ್ರಮುಖ ರಸ್ತೆಗಳು ಬಿಕೋ ಎನ್ನುತ್ತಿದ್ದವು.
ಔಷ ಧ ಅಂಗಡಿ, ಹಾಲು ಮಾರುವ ಮಳಿಗೆ ಸೇರಿದಂತೆ ಕೆಲವೇ ಕೆಲವು ಅಗತ್ಯ ವಸ್ತುಗಳನ್ನು ಮಾರುವ ಅಂಗಡಿಗಳು ಅಲ್ಲೊಂದು, ಇಲ್ಲೊಂದು ತೆರೆದಿದ್ದನ್ನು ಹೊರತುಪಡಿಸಿದರೆ ಉಳಿದಂತೆ ಎಲ್ಲವೂ ಮುಚ್ಚಲ್ಪಟ್ಟಿದ್ದವು. ನಾಗರಿಕರು ಸಹ ಅನಗತ್ಯವಾಗಿ ಬೀದಿಗಿಳಿಯುವ ಸಾಹಸ ಪ್ರದರ್ಶಿಸದೆ ಕರ್ಫ್ಯೂಗೆ ಸಹಕಾರ ನೀಡಿದರು.
ರಸ್ತೆಗಳಲ್ಲಿ ವಿರಳ ಜನರು, ಅತೀ ವಿರಳವಾದ ವಾಹನಗಳು ಸಂಚರಿಸಿದ್ದು ಕಂಡುಬಂದಿತು. ಪ್ರತಿನಿತ್ಯ ಜನ ಮತ್ತು ವಾಹನಗಳ ಸಂಚಾರದಿಂದ ಕೂಡಿರುತ್ತಿದ್ದ ಬಿ.ಎಚ್ .ರಸ್ತೆ, ತರೀಕೆರೆ ರಸ್ತೆ, ಚೆನ್ನಗಿರಿ ರಸ್ತೆ, ಮಾಧವಾಚಾರ್ ವೃತ್ತ, ರಂಗಪ್ಪ ವೃತ್ತ, ಹಾಲಪ್ಪ ವೃತ್ತ, ಅಂಬೇಡ್ಕರ್ ವೃತ್ತ ಎಲ್ಲವೂ ಶನಿವಾರ ಜನ- ವಾಹನ ಸಚಾರವಿಲ್ಲದೆ ಬಣಗುಟ್ಟುತ್ತಿದ್ದವು. ರೈಲ್ವೆ ನಿಲ್ದಾಣ, ಕೆಎಸ್ ಆರ್‌ಟಿಸಿ ಬಸ್ ನಿಲ್ದಾಣದಲ್ಲಿಯೂ ಸಹ ಜನರಿಲ್ಲದೆ ಶಾಂತವಾಗಿತ್ತು.ನಗರದ ಚೆನ್ನಗಿರಿ ರಸ್ತೆಯಲ್ಲಿ ನಡೆಯುತ್ತಿರುವ ರಸ್ತೆ ಅಗಲೀಕರಣದ ಕಾಮಗಾರಿ ಮಾತ್ರ ಎಂದಿನಂತೆ ನಡೆಯುತ್ತಿತ್ತು. ಪ್ರಚಾರದ ಮೇಲೆ ಕರ್ಫ್ಯೂ ಕರಿನೆರಳು: ಏ.27ರಂದು ನಡೆಯಲಿರುವ ನಗರಸಭೆ ಚುನಾವಣೆಗೆ ಕೇವಲ ಮೂರು ದಿನಗಳು ಉಳಿದಿದ್ದು ವಿವಿಧ ಪಕ್ಷಗಳ ಅಭ್ಯರ್ಥಿಗಳ ಪರ ಬೀದಿ- ಬೀದಿಗಳಲ್ಲಿ ನಡೆಯುತ್ತಿದ್ದ ಮತ ಯಾಚನೆಯ ಕಾರ್ಯಕ್ರಮದ ಮೇಲೆ ಕರ್ಫ್ಯೂ ಕರಿನೆರಳು ಬಿದ್ದಿರುವ ಕಾರಣ ಶನಿವಾರ ವಾರ್ಡ್‌ಗಳ ಒಳರಸ್ತೆಗಳಲ್ಲಿ ಕೆಲವರು ಮನೆ- ಮನೆಗಳಿಗೆ ತೆರಳಿ ಮತಗಟ್ಟೆಯ ಚೀಟಿ ಕ್ರಮಸಂಖ್ಯೆ ಚೀಟಿ ನೀಡಿ ಮತ ಕೇಳುತ್ತಿದ್ದದ್ದು ಹೊರತುಪಡಿಸಿ ಉಳಿದಂತೆ ಮುಖ್ಯರಸ್ತೆಗಳಲ್ಲಿ ಯರೂ ಚುನಾವಣಾ ಪ್ರಚಾರಕ್ಕೆ ಇಳಿದದ್ದು ಕಂಡು ಬರಲಿಲ್ಲ.
ಒಟ್ಟಾರೆ ನಗರದಲ್ಲಿ ಶನಿವಾರ ಕರ್ಫ್ಯೂಗೆ ಜನತೆ ಮಾನ್ಯತೆ ನೀಡಿ ಮನೆಯಲ್ಲೇ ಉಳಿದು ಕರ್ಫ್ಯೂ ಯಶಸ್ವಿಗೊಳಿಸಿದ್ದಾರೆ.