ಶಿವಮೊಗ್ಗ: ಜಿಲ್ಲೆಯಲ್ಲಿ ನಡೆದ ಘಟನೆ ನೋವನ್ನುಂಟು ಮಾಡಿದ್ದು ರಾಜ್ಯದಲ್ಲಿರುವ ಎಲ್ಲ ಅಕ್ರಮ ಕ್ವಾರಿಗಳನ್ನು ಸರಕಾರದ ವಶಕ್ಕೆ ಪಡೆಯಲು ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಸಿಎಂ ಬಳಿ ಚರ್ಚೆ ನಡೆಸುತ್ತೇನೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಹುಣಸೋಡಿಗೆ ಸ್ಫೋಟಕಗಳು ತಂದವರು ಯಾರು? ಎಲ್ಲಿಂದ ಬಂತು? ಈ ವಿಷಯದ ಹಿಂದೆ ಯಾರ್ಯಾರು ಇದ್ದಾರೆ ಎಂಬ ಕುರಿತು ತನಿಖೆ ನಡೆಯುತ್ತಿದೆ. ಸ್ಪೋಟಕದಲ್ಲಿ ಜೆಲ್ ಮಾದರಿ ವಸ್ತು ಬಳಸಿರುವ ಬಗ್ಗೆ ಮಾಹಿತಿ ಬಂದಿದೆ. ಆ ಬಗ್ಗೆ ಹೈದರಾಬಾದ್‌ನಿಂದ ಬಂದಿರುವ ವಿಶೇಷ ತಂಡ ವರದಿ ಕೊಡಲಿದೆ ಎಂದರು.
ಜಿಲ್ಲೆಯಲ್ಲಿ 76 ಅ ಧಿಕೃತ ಕ್ವಾರಿಗಳಿದ್ದು ಇದರಲ್ಲಿ 23 ಮಂದಿ ಸ್ಫೋಟ ಮಾಡಲು ಅನುಮತಿ ಪಡೆದಿದ್ದಾರೆ. ಉಳಿದವರು ಪಡೆದಿಲ್ಲ. 76 ಮಂದಿಯೂ ಈ ಅನುಮತಿ ಪಡೆದುಕೊಂಡರೆ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಈ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಒಟ್ಟು 95 ಕ್ರಷರ್ ಗಳಿದ್ದು ಮತ್ತೆ 3 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಒಟ್ಟು 100 ಕ್ರಷರ್‌ಗಳು ಜಿಲ್ಲೆಯಲ್ಲಿವೆ. ಅಭಿವೃದ್ಧಿ ದೃಷ್ಟಿಯಿಂದ ಅವುಗಳ ಅನುಕೂಲ ಪಡೆಯಲಿದ್ದೇವೆ ಎಂದರು.
ಹುಣಸೋಡು ದುರ್ಘಟನೆ ನಂತರ ಕ್ವಾರಿ ಹಾಗೂ ಕ್ರಷರ್‌ಗಳ ಬಗ್ಗೆ ಕಾನೂನು ತಿದ್ದುಪಡಿ ಅಗತ್ಯವಿದೆ. ಈ ಬಗ್ಗೆ ಸಂಬಂಧಪಟ್ಟ ಸಚಿವರು, ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗುವುದು. ಜಿಲ್ಲಾಧಿಕಾರಿಗಳ ವರದಿ ಆಧಾರದ ಮೇಲೆ ಕಾನೂನು ರೂಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಅರಣ್ಯ ಇಲಾಖೆಯ ಅ ಧಿಕಾರಿ ಶಂಕರ್ ಮಾತನಾಡಿ, ಅರಣ್ಯದಲ್ಲಿ 23 ಗಣಿಗಾರಿಕೆ ನಡೆಯುತ್ತಿದೆ. ಅವುಗಳನ್ನು ವಶಪಡಿಸಲಾಗುವುದು ಎಂದರು. ಜಿಲ್ಲಾ ಧಿಕಾರಿ ಕೆ.ಬಿ. ಶಿವಕುಮಾರ್ ಮಾತನಾಡಿ, ನ್ಪೋಟಕ ವಸ್ತುಗಳ ಸಾಗಾಟವೂ ಕಾನೂನುಬಾಹಿರವಾಗಿದೆ. ಖರೀದಿ, ಸಾಗಾಣಿಕೆ, ಬ್ಲಾಸ್ಟ್ ಸಹ ಕಾನೂನು ಕ್ರಮದಲ್ಲಿ ಸಾಗಬೇಕು. ಅವುಗಳು ಆಗುತ್ತಿಲ್ಲ. ಸ್ಫೋಟಕಗಳನ್ನ ಮಾರಾಟ ಮಾಡುವರು ಅ ಧಿಕೃತವಾಗಿ ಒಬ್ಬನೇ ಇರುತ್ತಾನೆ. ಆದರೆ ಈ ಅ ಧಿಕೃತ ಮಾರಾಟಗಾರರ ಜೊತೆ ಈ ಅನಧಿಕೃತ ಗಣಿಗಾರಿಕೆಯವರು ಖರೀದಿಸುವುದೇ
ಇಲ್ಲ. ಇವರು ಬೇರೆ ರಾಜ್ಯಗಳಿಂದ ಖರೀದಿಸುತ್ತಾರೆ. ಇದನ್ನ ತಡೆಯಲು ಸಾಧ್ಯವಾಗುತ್ತಿಲ್ಲ ಎಂದರು.
ಕ್ವಾರಿಯಲ್ಲಿ ಸತ್ತರೆ ಲೇಬರ್ ಇಲಾಖೆಯಿಂದ ಹಣ ಬರುತ್ತಿಲ್ಲ. ಕಾರಣವೇನೆಂದರೆ ಕ್ರಶರ್‌ಗಳು ಲೇಬರ್‌ಗಳ ಮಾಹಿತಿ ಇಟ್ಟಿಲ್ಲ. ಹಾಗಾಗಿ
ಪರಿಹಾರವಿಲ್ಲವೆಂದು ಕಾರ್ಮಿಕ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ಸಭೆಯಲ್ಲಿ ಅನಂತ ಹೆಗಡೆ ಆಶೀಸರ, ಜಿಪಂ ಸಿಇಒ ಎಂ.ಎಲ್. ವೈಶಾಲಿ ಸೇರಿದಂತೆ ವಿವಿಧ ಇಲಾಖೆಗಳ ಅ ಧಿಕಾರಿಗಳು ಇದ್ದರು.
ಓದಿ : ಸದೃಢ ಪ್ರಜಾಪ್ರಭುತ್ವ ನಿರ್ಮಾಣಕ್ಕೆ ಕೈಜೋಡಿಸಿ