Advertisement

ಜೈಲಿನಿಂದ ಬಂದ ಮೇಲೆ ಅಧ್ಯಕ್ಷರನ್ನಾಗಿ ಮಾಡಿಲ್ಲವೇ?

12:43 AM Mar 08, 2023 | Team Udayavani |

ಬೆಂಗಳೂರು: ತಿಹಾರ್‌ ಜೈಲಿಗೆ ಹೋಗಿ ಬಂದವರನ್ನು ಕಾಂಗ್ರೆಸ್‌ನಲ್ಲಿ ರಾಜ್ಯಾಧ್ಯಕ್ಷರನ್ನಾಗಿ ಮಾಡಲಾಗಿದೆ. ಅವರನ್ನು ಏಕೆ ಪಕ್ಷದಿಂದ ವಜಾ ಮಾಡಿರಲಿಲ್ಲ? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ವಾಗ್ಧಾಳಿ ನಡೆಸಿದ್ದಾರೆ.

Advertisement

ಪಕ್ಷದ ಕಚೇರಿಯಲ್ಲಿ ಸುದ್ದಿ ಗಾರರ ಜತೆ ಮಾತನಾಡಿದ ಅವರು, ಯಾರೇ ಭ್ರಷ್ಟಾಚಾರ ನಡೆಸಿದರೂ ನಮ್ಮ ಪಕ್ಷ ಸಹಿಸುವುದಿಲ್ಲ. ಮಾಡಾಳು ವಿರೂಪಾಕ್ಷಪ್ಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಂಪೂರ್ಣವಾದ ವರದಿ ಕೇಳಿದ್ದೇನೆ. ಆ ವರದಿಯನ್ನು ಪಕ್ಷದ ಸಂಸದೀಯ ಮಂಡಳಿಗೆ ಕಳುಹಿಸಲಾಗುತ್ತದೆ ಎಂದು ಹೇಳಿದರು.

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಅನಂತರ ಲೋಕಾಯುಕ್ತಕ್ಕೆ ಸಂಪೂರ್ಣ ಅಧಿಕಾರ ನೀಡಲಾಗಿದೆ. ಹಿಂದೆ ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಲೋಕಾಯುಕ್ತ ಸಂಸ್ಥೆಯನ್ನು ಮುಚ್ಚಿದ್ದರು. ಲೋಕಾಯುಕ್ತದ ಕೈ ಕಟ್ಟಿ ಹಾಕಿ ಕೆಲಸ ಮಾಡಿಸುತ್ತಿದ್ದರು. ಇಂದು ನಮ್ಮ ವಿರುದ್ಧ ಆರೋಪ ಮಾಡುತ್ತಿರುವ ಪಕ್ಷಕ್ಕೆ ನಾನು ಕೆಲವು ಪ್ರಶ್ನೆ ಕೇಳಲು ಬಯಸುತ್ತೇನೆ. ಕಾಂಗ್ರೆಸ್‌ ರಾಜ್ಯಾಧ್ಯಕ್ಷ ತಿಹಾರ್‌ ಜೈಲಿಗೆ ಹೋಗಿಬಂದವರು. ಅವರನ್ನು ಯಾಕೆ ವಜಾ ಮಾಡಲಿಲ್ಲ ? ಜೈಲಿನಿಂದ ಬಂದ ಮೇಲೆ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿಲ್ಲವೇ? ಎಂದು ಪ್ರಶ್ನಿಸಿದರು.

ಜನರ ವಿಶ್ವಾಸ ಗಳಿಸಿದ್ದೇವೆ
ಯಾವುದೇ ಆಸೆ ಆಕಾಂಕ್ಷೆಗಳು ಇಲ್ಲದೆ ಇಂದು ಅನ್ಯ ಪಕ್ಷದ ಮುಖಂಡರು ಬಿಜೆಪಿ ಸೇರಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕಾರ್ಯ ವೈಖರಿ, ಬಿಜೆಪಿ ಸಿದ್ಧಾಂತ, ಬೊಮ್ಮಾಯಿ ಸರಕಾರದ ಸಾಧನೆಗಳನ್ನು ಮೆಚ್ಚಿ ಪಕ್ಷಕ್ಕೆ ಬಂದಿದ್ದಾರೆ. ಇವರೆಲ್ಲರೂ ಪಕ್ಷದ ಕೆಲಸ ಮಾಡಿ ಎತ್ತರಕ್ಕೆ ಬೆಳೆಯುತ್ತಾರೆ. ರಾಜ್ಯದಲ್ಲೂ ಪಕ್ಷದ ಪರವಾದ ಅಲೆ ಬೀಸುತ್ತಿದೆ. ಅತೀ ಹೆಚ್ಚು ಜನರು ಬಿಜೆಪಿ ಕಡೆ ಬರುತ್ತಿದ್ದಾರೆ. ಹಳ್ಳಿ ಹಳ್ಳಿಗಳಲ್ಲಿ ನರೇಂದ್ರ ಮೋದಿ ಯೋಜನೆಗಳು ಜನರ ಮನಸನ್ನು ಸೆಳೆದಿವೆ. ಬೊಮ್ಮಾಯಿ, ಯಡಿಯೂರಪ್ಪ ಸರಕಾರದ ಸಾಧನೆಗಳು ಕೂಡ ಜನರ ವಿಶ್ವಾಸ ಗಳಿಸಿವೆ. ನಾಲ್ಕು ಯಾತ್ರೆ ಗಳು ಕೂಡ ಅಭೂತಪೂರ್ವ ಯಶಸ್ಸು ಕಾಣುತ್ತಿವೆ ಎಂದರು.

ಕಾಂಗ್ರೆಸ್‌ಗೆ ಉಗ್ರರು ಅಮಾಯಕರೇ?
ದೇಶಾದ್ಯಂತ ಕಾಂಗ್ರೆಸ್‌ ದುಸ್ಥಿತಿಯಲ್ಲಿದ್ದರೆ ರಾಜ್ಯದಲ್ಲಿ ಕೆಲವರು ಮುಖ್ಯಮಂತ್ರಿಯಾಗುವುದಕ್ಕೆ ಶರ್ಟ್‌-ಪ್ಯಾಂಟ್‌ ಹೊಲಿಸಿಕೊಂಡು ಕಾಯುತ್ತಿದ್ದಾರೆ. ಆದರೆ ಅವರ ಆಸೆ ಎಂದಿಗೂ ನನಸಾಗುವುದಿಲ್ಲ. ಬಿಜೆಪಿ 150 ಸ್ಥಾನ ಗೆದ್ದೇ ಗೆಲ್ಲುತ್ತದೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಹಾಗೂ ಶಿವಕುಮಾರ್‌ ಬಗ್ಗೆ ವ್ಯಂಗ್ಯವಾಡಿದರು. ಮಂಗಳೂರಿನಲ್ಲಿ ಕುಕ್ಕರ್‌ ಬಾಂಬ್‌ ಸ್ಫೋಟಿಸಿದಾಗ ಅವನನ್ನು ಅಮಾಯಕ ಎಂದು ಕರೆದಿದ್ದರು. ಅಂಥವರ ವಿರುದ್ಧ ಕ್ರಮ ಕೈಗೊಂಡರೆ ಇದನ್ನು ಕಾಂಗ್ರೆಸ್‌ ವಿರೋಧಿಸುತ್ತದೆ. ಹಾಗಾದರೆ ಕಾಂಗ್ರೆಸ್‌ ಮೂಲಭೂತವಾದಿ ಸಂಘಟನೆಗಳ ಪರವಲ್ಲವೇ ಎಂದು ಕಟೀಲ್‌ ಪ್ರಶ್ನಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next