ಕ್ಷಣ ಕ್ಷಣವೂ ಕುತೂಹಲ, ಬಂದು ಹೋಗುವ ಎಲ್ಲಾ ಪಾತ್ರಗಳ ಮೇಲೊಂದು ಅನುಮಾನ, ಮುಂದೇನಾಗಬಹುದು ಎಂಬ ಲೆಕ್ಕಾಚಾರ… ಈ ಗುಣಗಳು ಒಂದು ಪತ್ತೆದಾರಿ ಸಿನಿಮಾಕ್ಕಿದ್ದರೆ ಆ ಸಿನಿಮಾ ಪ್ರೇಕ್ಷಕರಿಗೆ ಖುಷಿ ಕೊಡುತ್ತಾ, ನೋಡಿಸಿಕೊಂಡು ಹೋಗುತ್ತದೆ. ಈ ವಾರ ತೆರೆಕಂಡಿರುವ “ಶಿವಾಜಿ ಸುರತ್ಕಲ್-2′ ಈ ಹಾದಿಯಲ್ಲಿ ಸಾಗುವ ಸಿನಿಮಾ. ಇದು “ಶಿವಾಜಿ ಸುರತ್ಕಲ್’ ಚಿತ್ರದ ಮುಂದುವರೆದ ಭಾಗ. ಅಲ್ಲೊಂದಿಷ್ಟು ಪ್ರಶ್ನೆಗಳನ್ನು, ಕುತೂಹಲಗಳನ್ನು ಪ್ರೇಕ್ಷಕರಿಗೆ ಬಿಟ್ಟಿದ್ದ ನಿರ್ದೇಶಕರು ಈಗ ಎರಡನೇ ಭಾಗದಲ್ಲಿ ಅದಕ್ಕೆಲ್ಲಾ ಉತ್ತರ ನೀಡಿದ್ದಾರೆ.
“ಶಿವಾಜಿ ಸುರತ್ಕಲ್-2′ ಒಂದು ಪತ್ತೆದಾರಿ ಶೈಲಿಯ ಸಿನಿಮಾ. ಸರಣಿಯ ಕೊಲೆಯ ಹಿಂದಿರುವ ವ್ಯಕ್ತಿ ಯಾರು? ಎಂಬುದನ್ನು ಹುಡುಕುವುದೇ ಪೊಲೀಸ್ ಆಫೀಸರ್‌ಗೆ ದೊಡ್ಡ ಟಾಸ್ಕ್. ಈ ಹುಡುಕಾಟದ ಹಾದಿಯನ್ನು ಸಾಕಷ್ಟು ಥ್ರಿಲ್ಲರ್ ಅಂಶಗಳೊಂದಿಗೆ ಕಟ್ಟಿಕೊಟ್ಟಿದ್ದಾರೆ. ಪ್ರೇಕ್ಷಕರ ತಲೆಗೆ ಕೆಲಸ ಕೊಡಬೇಕೆಂಬ ಉದ್ದೇಶದೊಂದಿಗೆ ಇಲ್ಲಿ ಅನೇಕ ಪಾತ್ರಗಳ ಮೇಲೆ ಅನುಮಾನ ಮೂಡುವಂತೆ ಮಾಡುತ್ತಾರೆ. ಆ ಮಟ್ಟಿಗೆ ಶಿವಾಜಿಯ ಹಾದಿ ಮಜವಾಗಿದೆ. ಅಂದಹಾಗೆ, ಶಿವಾಜಿ ಕೇವಲ ಒಂದು ಮರ್ಡರ್ ಮಿಸ್ಟರಿ ಸಿನಿಮಾವಾಗಿ ಉಳಿದಿಲ್ಲ. ಬದಲಾಗಿ ಫ್ಯಾಮಿಲಿ ಡ್ರಾಮಾವಾಗಿ, ಸಂಬಂಧಗಳನ್ನು ಸಂಭ್ರಮಿಸುವ ಕಥೆಯಾಗಿಯೂ ಬದಲಾಗುತ್ತದೆ. ಇಲ್ಲಿ ತಂದೆ-ಮಗನ ಸಂಬಂಧ ಒಂದು ಕಡೆಯಾದರೆ, ಮಗಳು ಹಾಗೂ ತಂದೆಯ ಬಾಂಧವ್ಯ ಮತ್ತೂಂದು ಕಡೆ.. ಈ ಎರಡು ಟ್ರಾಕ್‌ಗಳು ಸಿನಿಮಾಕ್ಕೊಂದು ಸೆಂಟಿಮೆಂಟ್ ಟಚ್ ಕೊಟ್ಟಿವೆ.
ಇನ್ನು, ಮೊದಲ ಭಾಗದಲ್ಲಿ ಪ್ರಶ್ನೆಯಾಗಿ ಉಳಿದುಕೊಂಡ ಒಂದಷ್ಟು ವಿಚಾರಗಳಿಗೆ ಇಲ್ಲಿ ಫ್ಲಾಶ್ ಬ್ಯಾಕ್ ದೃಶ್ಯಗಳ ಮೂಲಕ ಉತ್ತರ ಕೊಡಲಾಗಿದೆ. ನಾಯಕ ತನ್ನ ಪತ್ನಿಯನ್ನು ನೆನಪಿಸಿಕೊಳ್ಳುವ ರೀತಿ, ಮುಂದೆ ಅದರಿಂದಾಗುವ ಅಡ್ಡ ಪರಿಣಾಮ ಸೇರಿದಂತೆ ಹಲವು ಅಂಶಗಳು ಫ್ಯಾಮಿಲಿ ಡ್ರಾಮಾದಲ್ಲಿ ಸೇರಿಕೊಂಡಿವೆ. ನಿರ್ದೇಶಕ ಆಕಾಶ್ ಶ್ರೀವತ್ಸ ಸಾಕಷ್ಟು ಟ್ವಿಸ್ಟ್-ಟರ್ನ್ಗಳೊಂದಿಗೆ ಸಿನಿಮಾವನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ.
ಚಿತ್ರದ ಸಂಕಲನದ ಜವಾಬ್ದಾರಿಯನ್ನೂ ಅವರೇ ಹೊತ್ತುಕೊಂಡಿದ್ದರಿಂದ ಸಿನಿಮಾವನ್ನು ಅನವಶ್ಯಕ ದೃಶ್ಯಗಳಿಂದ ಮುಕ್ತಗೊಳಿಸಿದ್ದಾರೆ. ಇಡೀ ಸಿನಿಮಾವನ್ನ ಹೆಗಲ ಮೇಲೆ ಹೊತ್ತು ಸಾಗಿರುವುದು ರಮೇಶ್ ಅರವಿಂದ್. ಪೊಲೀಸ್ ಆಫೀಸರ್ ಆಗಿ, ಫ್ಯಾಮಿಲಿ ಮ್ಯಾನ್ ಅಗಿ ರಮೇಶ್ ಇಷ್ಟವಾಗುತ್ತಾರೆ. ಉಳಿದಂತೆ ರಾಧಿಕಾ ನಾರಾಯಣ್, ಮೇಘನಾ ಗಾಂವ್ಕರ್, ಬೇಬಿ ಆರಾಧ್ಯಾ ತಮ್ಮ ಪಾತ್ರಗಳಲ್ಲಿ ಗಮನ ಸೆಳೆಯುತ್ತಾರೆ. ಒಂದು ಸಸ್ಪೆನ್ಸ್-ಥ್ರಿಲ್ಲರ್ ಸಿನಿಮಾವನ್ನು ಕಣ್ತುಂಬಿಕೊಳ್ಳುವವರಿಗೆ “ಶಿವಾಜಿ ಸುರತ್ಕಲ್-2′ ಒಂದು ಒಳ್ಳೆಯ ಆಯ್ಕೆಯಾಗಬಹುದು.
-ರವಿಪ್ರಕಾಶ್ ರೈ