ಧ್ರುವ ಸರ್ಜಾ “ಕೆಡಿ’ ಚಿತ್ರದ ಮೊದಲ ಹಾಡು “ಶಿವ ಶಿವ’ ಮಂಗಳವಾರ (ಡಿ.24 ರಂದು) ಬಿಡುಗಡೆಯಾಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಕಾಣುತ್ತಿರುವ ಈ ಹಾಡನ್ನು ಅಜಯ್ ದೇವಗನ್ ರಿಲೀಸ್ ಮಾಡಿದ್ದಾರೆ. ಈ ಮೂಲಕ ಪ್ರೇಮ್ ಚಿತ್ರಕ್ಕೆ ಬಾಲಿವುಡ್ ಸ್ಟಾರ್ ನಟ ಸಾಥ್ ನೀಡಿದ್ದಾರೆ.
ಈ ಹಾಡು ಇಂದು ಆನಂದ್ ಆಡಿಯೋ ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ. ಜನಪದ ಶೈಲಿ ಇರುವ “ಶಿವ ಶಿವ’ ಎಂಬ ಹಾಡು ರಿಲೀಸ್ ಆಗಿದ್ದು, ವಿಂಟೇಜ್ ಶೈಲಿಯಲ್ಲಿ ಮೂಡಿಬಂದಿದೆ. ʼಗುರುವೇ ನಿನ್ನಾಟ ಬಲ್ಲೂರ್..ಗುರುವೇ ನಿನ್ನಾಟ ಬಲ್ಲೂರ್.ʼ ಎನ್ನುವ ಸಾಹಿತ್ಯವನ್ನು ಮಂಜುನಾಥ್ ಬಿಎಸ್ ಬರೆದಿದ್ದು, ಹೋಗಿ ಪ್ರೇಮ್ ಹಾಗೂ ಕೈಲಾಶ್ ಖೇರ್ ಅವರು ಪವರ್ ಫುಲ್ ಆಗಿ ಹಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಲಿರಿಕಲ್ ವಿಡಿಯೋ ಹಾಡಿನಲ್ಲಿ ಧ್ರುವ ಸರ್ಜಾ ಸಖತ್ ಸ್ಟೆಪ್ಟ್ ಹಾಕಿದ್ದಾರೆ.
ಚಿತ್ರದಲ್ಲಿ 6 ಹಾಡುಗಳಿದ್ದು, ಇಡೀ ಭಾರತೀಯ ಚಿತ್ರರಂಗದಲ್ಲೇ ಕೆಡಿ ದೊಡ್ಡ ಆಲ್ಬಂ ಆಗಲಿದೆ ಎನ್ನುವುದು ತಂಡದ ಮಾತು. ಭಾರತೀಯ ಚಿತ್ರರಂಗದಲ್ಲೇ ಇಷ್ಟು ದೊಡ್ಡ ಮಟ್ಟದ ಆರ್ಕೆಸ್ಟ್ರಾ ಬಳಸಿರುವುದು ಇದೇ ಮೊದಲು. ಈ ಹಿಂದೆ ಜವಾನ್ ಸಿನಿಮಾಕ್ಕೆ 180 ಪೀಸ್ ಬಳಸಲಾಗಿತ್ತು, ನಮ್ಮ ಸಿನಿಮಾಕ್ಕೆ 256 ಪೀಸ್ ಬಳಸಲಾಗಿದೆ ಎನ್ನುತಾರೆ ಪ್ರೇಮ್.
ಚಿತ್ರದಲ್ಲಿ ನಾಯಕನ ಪಾತ್ರ ಕೂಡಾ ವಿಭಿನ್ನವಾಗಿದ್ದು, ಅಣ್ಣ, ತಮ್ಮ, ಮಗ, ಪ್ರೇಮಿಯನ್ನು ನೆನಪಿಸುತ್ತದೆ ಎನ್ನುವುದು ಪ್ರೇಮ್ ಮಾತು. ಚಿತ್ರದ ಡಬ್ಬಿಂಗ್ ಆರಂಭವಾಗಿದ್ದು, ಎಐ ಮೂಲಕ ಎಲ್ಲಾ ಭಾಷೆಯಲ್ಲೂ ಧ್ರುವ ಧ್ವನಿ ಇರುವಂತೆ ಪ್ಲ್ರಾನ್ ಮಾಡುತ್ತಿದೆ ಚಿತ್ರತಂಡ. ಸಿನಿಮಾದಲ್ಲಿ ಧ್ರುವಗೆ ರೀಷ್ಮಾ ನಾಣಯ್ಯ ನಾಯಕಿಯಾಗಿದ್ದು, ರವಿಚಂದ್ರನ್, ರಮೇಶ್ ಅರವಿಂದ್, ಸಂಜಯ್ ದತ್, ಶಿಲ್ಪಾ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿದ್ದಾರೆ. ಈಗಾಗಲೇ ಬಹುತೇಕ ಶೂಟಿಂಗ್ ಪೂರ್ಣಗೊಂಡಿದ್ದು, ಎರಡು ಹಾಡುಗಳಷ್ಟೇ ಬಾಕಿಯಿವೆ.