ಕೊಟ್ಟೂರು: ಶ್ರೀ ಕೊಟ್ಟೂರೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಶ್ರೀ ಚಿಕ್ಕೇನಕೊಪ್ಪ ಚನ್ನವೀರ ಶರಣರ 27ನೆ ಸ್ಮರಣೋತ್ಸವ ಹಾಗೂ ತುಲಾಭಾರ ನಿಮಿತ್ತ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಶರಣರು ತಿಳಿಸಿದ ಮಾರ್ಗದರ್ಶನ ಕೇವಲ ಆ ಕಾಲಕ್ಕೆ ಮಾತ್ರವಲ್ಲದೇ ಎಲ್ಲ ಕಾಲಕ್ಕೂ ಪ್ರಸ್ತುತವಾಗಿರುತ್ತವೆ ಎಂದು ಬಳಿಗಾನೂರು ಶ್ರೀ ಶರಣರ ಕರಸಂಜಾತ ಶ್ರೀ ಶಿವ ಶಾಂತವೀರ ಶರಣರು ನುಡಿದರು. ಚಿಕ್ಕೇನಕೊಪ್ಪದ ಹಿರಿಯ ಶರಣರು ಮಾತನಾಡಿ, ಲಿಂ.ಶ್ರೀ. ಚನ್ನವೀರ ಶರಣರ ನುಡಿಗಳು ಅಸಂಖ್ಯಾತ ಭಕ್ತರ ಅಭಿವೃದ್ಧಿಗೆ ಕಾರಣಗಳಾಗಿವೆ. ತಮ್ಮ ನುಡಿಗಳಿಂದಲೇ ಆಯಾ ಕಾಲದ ಸನ್ನಿವೇಶಗಳನ್ನು ಕಟ್ಟಿಕೊಡುತ್ತಿದ್ದ ಶರಣರು, ಬದುಕಿನುದ್ದಕ್ಕೂ ಮಾದರಿ ಜೀವನ ನಡೆಸಿದ್ದರು.
ಅವರ ಅನೇಕ ನುಡಿಮುತ್ತುಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶರಣರ 27ನೇ ಸ್ಮರಣೋತ್ಸವ ಇದಾಗಿದ್ದರೂ ಅವರು ಇಂದಿಗೂ ನಮ್ಮೊಂದಿಗೆ ಇದ್ದಾರೆ ಎಂಬ ಭಾವ ಇರುತ್ತದೆ. ಅವರು ಭೌತಿಕವಾಗಿ ಇಲ್ಲದಿದ್ದರೂ ಅವರ ನಡೆ, ನುಡಿ, ಅವರ ಸಂಸ್ಕಾರಗಳು ನಮಗೆಲ್ಲಾ ಆದರ್ಶವಾಗಿವೆ.
ಕೊಟ್ಟೂರಿನಲ್ಲಿ ಸ್ಥಾಪಿತವಾಗಿರುವ ಚನ್ನವೀರ ಶರಣರ ಬಳಗ, ಪ್ರತಿ ತಿಂಗಳು ನಡೆಸುವ ಚಿಂತನೆ ಸಭೆಗಳಲ್ಲಿ ನುಡಿಮುತ್ತುಗಳನ್ನು ತಿಳಿಸುತ್ತಿರುವುದು ಹಾಗೂ ಸ್ಮರಣೋತ್ಸವ ಹಾಗೂ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದರು.
ಹೂವಿನಹಡಗಲಿ ಗವಿಮಠದ ಶ್ರೀ ಡಾ| ಹಿರಿಯ ಶಾಂತವೀರ ಸ್ವಾಮಿಗಳು, ಕೊಟ್ಟೂರು ಕಟ್ಟೇಮನಿ ಹಿರೇಮಠದ ಶ್ರೀ ಯೋಗಿರಾಜೇಂದ್ರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಚಿಕ್ಕೇನಕೊಪ್ಪದ ಶ್ರೀ ಚನ್ನವೀರ ಶರಣರು ನಡೆದ ಬಂದ ಹಾದಿ ನಮಗೆ ಆದರ್ಶ ಎಂದರು. ಕೊಟ್ಟೂರು ಕ್ರಿಯಾಮೂರ್ತಿಗಳಾದ ಶ್ರೀ ಶಿವಪ್ರಕಾಶ ಕೊಟ್ಟೂರು ದೇವರು ಇದ್ದರು. ಬಳಗದ ಗೌರವಾಧ್ಯಕ್ಷ ಬಿ.ಎಸ್. ಕೊಟ್ರೇಶ, ಅಧ್ಯಕ್ಷ ದೇವರಮನಿ ಗುರುರಾಜ ಇತರರು ಇದ್ದರು. ಕಾರ್ಯದರ್ಶಿ ದೇವರಮನಿ ಕರಿಯಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸ್ಮರಣೋತ್ಸವ ಪ್ರಯುಕ್ತ ಶ್ರೀ ಚಿಕ್ಕೀನಕೊಪ್ಪ ಚನ್ನವೀರ ಶರಣರ ಬಳಗದಿಂದ ಬಳಿಗಾನೂರಿನ ಶ್ರೀ ಶಿವಶಾಂತವೀರ ಶರಣರಿಗೆ ತುಲಾಭಾರ ನಡೆಯಿತು. ಶಿಕ್ಷಕ ಹೊಂಬಾಳೆ ಮಂಜುನಾಥ ವಾರ್ಷಿಕ ವರದಿ ಓದಿದರು. ಅನುರಾಧಮ್ಮ ಪ್ರಾರ್ಥಿಸಿದರು. ಶಿಕ್ಷಕ ಜಿ.ಸಿದ್ದಣ್ಣ ಸ್ವಾಗತಿಸಿ, ವಂದಿಸಿದರು. ಇದೇ ಸಂದರ್ಭದಲ್ಲಿ 300ಕ್ಕೂ ಹೆಚ್ಚು ಮುತ್ತೈದೆ, ಸುಮಂಗಲಿಯರಿಗೆ ಸ್ವಾಮೀಜಿಗಳಿಂದ ಉಡಿ ತುಂಬಿಸಿ ಆಶೀರ್ವದಿಸಲಾಯಿತು.