ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎನ್ನಲಾದ ಮಹಾರಾಷ್ಟ್ರದ ಮಾಜಿ ಕಾರ್ಪೊರೇಟರ್ ಶ್ರೀಕಾಂತ್ ಪಂಗಾರ್‌ಕರ್‌ನನ್ನು 12 ದಿನಗಳ ಕಾಲ ವಿಶೇಷ ತನಿಖಾ ತಂಡದ (ಎಸ್‌ಐಟಿ) ವಶಕ್ಕೆ ನೀಡಿ 1ನೇ ಎಸಿಎಂಎಂ ನ್ಯಾಯಾಲಯ ಆದೇಶಿಸಿದೆ.
ಗೌರಿಲಂಕೇಶ್ ಹತ್ಯೆ ಮಾಡಿದ ಆರೋಪಿಗಳಿಗೆ ಆಶ್ರಯ ನೀಡಿದ್ದಲ್ಲದೆ, ಹಣಕಾಸು ನೆರವು ನೀಡಿದ ಆರೋಪ ಸಂಬಂಧ ಶಿವಸೇನೆ ಮುಖಂಡನೂ ಆಗಿರುವ ಶ್ರೀಕಾಂತ್ ಪಂಗಾರ್‌ಕರ್‌ನನ್ನು ಬಂಧಿಸಿರುವ ಎಸ್‌ಐಟಿ ಸೋಮವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಗೌರಿ ಲಂಕೇಶ್ ಹತ್ಯೆ ಸಂಚಿನಲ್ಲಿ ಭಾಗಿಯಾಗಿರುವ ಕುರಿತು ಆರೋಪಿಯನ್ನು ಹೆಚ್ಚಿನ ವಿಚಾರಣೆ ನಡೆಸುವ ಅಗತ್ಯವಿದೆ. ಹೀಗಾಗಿ ಆರೋಪಿಯನ್ನು ಎಸ್‌ಐಟಿ ವಶಕ್ಕೆ ನೀಡುವಂತೆ ಪ್ರಾಸಿಕ್ಯೂಶನ್ ಪರ ವಕೀಲರ ವಾದ ಪುರಸ್ಕರಿಸಿದ ನ್ಯಾಯಾಲಯ, ಆರೋಪಿಯನ್ನು 12 ದಿನಗಳ ಕಾಲ ಎಸ್‌ಐಟಿ ವಶಕ್ಕೆ ನೀಡಿ ವಿಚಾರಣೆ ಮುಂದೂಡಿದೆ.
ಪ್ರಕರಣದ ಇತರೆ ಆರೊಪಿಗಳಾದ ಅಮೂಲ್ ಕಾಳೆ ಹಾಗೂ ಅಮಿತ್ ದಗ್ವೇಕರ್‌ಗೆ ಆಪ್ತನಾಗಿರುವ ಶ್ರೀಕಾಂತ್, ಗೌರಿ ಹತ್ಯೆ ಸಂಚಿನಲ್ಲಿ ಭಾಗಿಯಾಗಿದ್ದು, ಆರೋಪಿಗಳಿಗೆ ಹಣಕಾಸು ನೆರವು, ಆಶ್ರಯ, ಅಗತ್ಯ ಶಸ್ತ್ರಾಸ್ತ್ರ ಪೂರೈಕೆ ಮಾಡಿದ ಆರೋಪ ಸಂಬಂಧ ಎಸ್‌ಐಟಿ ಬಂಧಿಸಿದೆ.
ಮುಂಬೈನ ನಲ್ಲಸೋಪರ ರೈಲು ನಿಲ್ದಾಣದಲ್ಲಿ ಅಕ್ರಮ ಶಸ್ತ್ರಾಸ್ತ್ರ ಸಾಗಾಟ ಪ್ರಕರಣದಲ್ಲಿ ಮಹರಾಷ್ಟ್ರದ ಭಯೋತ್ಪಾದಕ ನಿಗ್ರಹ ದಳ (ಎಟಿಎಸ್) ತಂಡದಿಂದ ಬಂಧಿತನಾಗಿದ್ದ ಶ್ರಿಕಾಂತ್ ಪಂಗಾರ್‌ಕರ್‌ನನ್ನು ಗೌರಿ ಹತ್ಯೆ ಕೇಸ್‌ನಲ್ಲಿ ಭಾಗಿಯಾದ ಆರೋಪ ಸಂಬಂಧ ಎಸ್‌ಐಟಿ ತಂಡ ಸೆ.15ರಂದು ವಶಕ್ಕೆ ಪಡೆದು ನಗರಕ್ಕೆ ಕರೆತಂದಿದೆ.