Advertisement

ದಶಕಗಳ ಮೈತ್ರಿಗೆ “ಸೇನೆ’ಇತಿಶ್ರೀ

06:05 AM Jan 24, 2018 | Team Udayavani |

ಮುಂಬೈ: ಕಳೆದ 29 ವರ್ಷಗಳಿಂದ ಬಿಜೆಪಿಯೊಂದಿಗೆ ರಾಜನೀತಿಯ ಯುಗಳ ಗೀತೆ ಹಾಡುತ್ತಿದ್ದ ಶಿವಸೇನೆ, ಇದೀಗ ತನ್ನ ಗಾಯನಕ್ಕೆ ಇತಿಶ್ರೀ ಹಾಡಿದೆ.

Advertisement

ಮುಂಬೈನಲ್ಲಿ, ಮಂಗಳವಾರ ನಡೆದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ, ಪಕ್ಷದ ನಾಯಕ ಸಂಜಯ್‌ ರಾವುತ್‌, ಬಿಜೆಪಿಯೊಂದಿಗಿನ ಮೈತ್ರಿ ಕೊನೆಗೊಳಿಸುವ ಹಾಗೂ 2019ರಲ್ಲಿ ನಡೆಯಲಿರುವ ಲೋಕಸಭೆ ಹಾಗೂ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಶಿವಸೇನೆಯು ಏಕಾಂಗಿಯಾಗಿ ಸ್ಪರ್ಧಿಸುವ ಬಗ್ಗೆ ಠರಾವು ಮಂಡಿಸಿದರು. ಇದಕ್ಕೆ ಕಾರ್ಯಕಾರಿಣಿ ಸರ್ವಾನುಮತದ ಒಪ್ಪಿಗೆ ಸೂಚಿಸಿದೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಸೇನೆ ಮುಖ್ಯಸ್ಥ ಉದ್ಧವ್‌ ಠಾಕ್ರೆ, ಕಾರ್ಯಕಾರಿಣಿ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸಿದರಲ್ಲದೆ, ಮುಂದಿನ ಲೋಕಸಭೆ ಚುನಾವಣೆಯ ವೇಳೆ ರಾಜ್ಯದ ಒಟ್ಟು 48 ಸ್ಥಾನಗಳಲ್ಲಿ 25 ಸ್ಥಾನ, ವಿಧಾನಸಭೆ ಚುನಾವಣೆಯ ಒಟ್ಟು 288 ಸ್ಥಾನಗಳಲ್ಲಿ 150 ಸ್ಥಾನಗಳನ್ನು ಶಿವಸೇನೆ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.

ಹಿಂದುತ್ವ ಮತಗಳು ಒಡೆದುಹೋಗಬಾರದೆಂಬ ಒಂದೇ ಕಾರಣಕ್ಕೆ ನಾವು ಮಹಾರಾಷ್ಟ್ರದ ಹೊರಗೂ ಬಿಜೆಪಿಯೊಂದಿಗೇ ಚುನಾವಣೆಗೆ ಇಳಿಯುತ್ತಿದ್ದೆವು. ಇದೀಗ ಮೈತ್ರಿ ಕೊನೆಗೊಂಡಿರುವ ಹಿನ್ನೆಲೆಯಲ್ಲಿ ಮುಂಬರುವ ಎಲ್ಲಾ ಚುನಾವಣೆಗಳಲ್ಲಿ ಹೊರರಾಜ್ಯಗಳಲ್ಲೂ ಏಕಾಂಗಿಯಾಗೇ ಚುನಾವಣೆಗೆ ಧುಮುಕಲಿದ್ದೇವೆ ಎಂದು ಠಾಕ್ರೆ ವಿವರಿಸಿದರು.

ಮೋದಿ ವಿರುದ್ಧ ಕಿಡಿ:
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತ ವೈಖರಿಯನ್ನು ಕಟು ಶಬ್ದಗಳಲ್ಲಿ ಟೀಕಿಸಿದ ಠಾಕ್ರೆ, ಹಿಂದುತ್ವ ಹಾಗೂ ರಾಷ್ಟ್ರೀಯತೆ ತತ್ವಗಳಾಧಾರದಲ್ಲೇ ಬಿಜೆಪಿ ಜತೆ ಶಿವಸೇನೆ ಕೈ ಜೋಡಿಸಿತ್ತು. ಆದರೆ, ಕಳೆದ ಮೂರು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಈ ಮೈತ್ರಿಯ ಮೂಲ ಆಶಯಗಳನ್ನೇ ಮರೆತಿದೆ. ಗಡಿಯಲ್ಲಿ ಸೈನಿಕರ ರಕ್ತ ಚೆಲ್ಲಾಡುತ್ತಿದ್ದರೂ ಇತ್ತ, ಪ್ರಧಾನಿ ಮೋದಿ, ಇಸ್ರೇಲ್‌ ಪ್ರಧಾನಿ ನೆತನ್ಯಾಹು ಜತೆ ಅಹ್ಮದಾಬಾದ್‌ನಲ್ಲಿ ಗಾಳಿಪಟ ಹಾರಿಸಿದ್ದಾರೆ. ಅದರ ಬದಲು ನೆತನ್ಯಾಹು ಅವರನ್ನು ಕಾಶ್ಮೀರಕ್ಕೆ ಕರೆದೊಯ್ದು ಶ್ರೀನಗರದ ಲಾಲ್‌ ಚೌಕ್‌ನಲ್ಲಿ ತ್ರಿವರ್ಣ ಧ್ವಜ ಹಾರಿಸಿದ್ದರೆ ಇಡೀ ರಾಷ್ಟ್ರವೇ ಸೆಲ್ಯೂಟ್‌ ಹೊಡೆಯುತ್ತಿತ್ತು ಎಂದರು.

Advertisement

ಅಪರಾಧ: ಕೇಂದ್ರ ಸರ್ಕಾರ ತನ್ನ ಯೋಜನೆಗಳ ಜಾಹೀರಾತಿಗೆ ಕೋಟಿಗಟ್ಟಲೆ ಹಣ ಸುರಿಯುತ್ತಿದೆ ಎಂದು ಆರೋಪಿಸಿದ ಅವರು, ಗೋ ಹತ್ಯೆಯನ್ನು ಅಪರಾಧ ಎಂದು ಪರಿಗಣಿಸುವುದಾದರೆ, ಅಧಿಕಾರಕ್ಕಾಗಿ ಸುಳ್ಳು ಆಶ್ವಾಸನೆಗಳನ್ನು ನೀಡುವುದೂ ಅಪರಾಧವೇ ಎಂದು ಟೀಕಿಸಿದರು. ಅಲ್ಲದೆ, ಇತ್ತೀಚೆಗೆ, ನೆರೆ ರಾಷ್ಟ್ರ ಪಾಕಿಸ್ತಾನವನ್ನು ಗುಜರಾತ್‌ ಚುನಾವಣೆಗಳ ವೇಳೆ ಎಳೆದುತಂದಿದ್ದು ಸಮಂಜಸವಲ್ಲ ಎಂದು ಠಾಕ್ರೆ ಹೇಳಿದರು.

ಮರು ಆಯ್ಕೆ
ಶಿವಸೇನೆಯ ಸಂಸ್ಥಾಪಕ ಬಾಳಾ ಠಾಕ್ರೆಯವರ ಜನ್ಮದಿನೋತ್ಸವವಾದ ಮಂಗಳವಾರವೇ ಪಕ್ಷದ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಚುನಾವಣೆ ನಡೆದಿದ್ದು, ಉದ್ಧವ್‌ ಠಾಕ್ರೆ ಅವರೇ 2ನೇ ಬಾರಿಗೆ ಪಕ್ಷದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಬಿಜೆಪಿ ಮೈತ್ರಿ ತೊರೆದಿದ್ದು ಶಿವಸೇನೆಗೆ ಹೆಚ್ಚು ನಷ್ಟ ತರಲಿದೆ. ಮೈತ್ರಿ ಬಗ್ಗೆ ನಮಗೆ ಆಸ್ಥೆಯಿತ್ತು. ಆದರೆ, ಅದು ಸೇನೆಗೆ ಬೇಕಿಲ್ಲದಿರುವಾಗ ಬೇರ್ಪಡುವುದು ಅನಿವಾರ್ಯವಾಗಿದೆ.
– ಆಶಿಶ್‌ ಶೆಲಾರ್‌, ಮುಂಬೈ ಬಿಜೆಪಿ ಮುಖ್ಯಸ್ಥ

ಮೈತ್ರಿ ಮುರಿದಿದ್ದರೂ, ಅಧಿಕಾರದಲ್ಲಿರುವ ಬಿಜೆಪಿ-ಶಿವಸೇನೆಯ ಮೈತ್ರಿ ಸರ್ಕಾರ ಇದೇ ಮೈತ್ರಿಯೊಂದಿಗೆ ಐದು ವರ್ಷ ಪೂರೈಸಲಿದೆ. ಶಿವಸೇನೆಯ ಬೆದರಿಕೆಗಳನ್ನು ಈ ಹಿಂದೆಯೂ ಕೇಳಿದ್ದೇವೆ.
– ದೇವೇಂದ್ರ ಫ‌ಡ್ನವಿಸ್‌, ಮಹಾರಾಷ್ಟ್ರ ಮುಖ್ಯಮಂತ್ರಿ

ಶಿವಸೇನೆಯು ಸರ್ಕಾರಕ್ಕೆ ಕೊಟ್ಟಿರುವ ಬೆಂಬಲ ವಾಪಸ್‌ ಪಡೆಯಲಿ. ಮಹಾರಾಷ್ಟ್ರದಲ್ಲಿ ಹೊಸದಾಗಿ ಚುನಾವಣೆ ನಡೆಯಲಿ. ನಾವು ಚುನಾವಣೆಗೆ ಸಿದ್ಧ. ಎನ್‌ಸಿಪಿಯು ಯುಪಿಎ ಅಂಗಪಕ್ಷವಾಗಿದ್ದು, ಸದ್ಯಕ್ಕೆ ಶಿವಸೇನೆ ಜತೆ ಕೈಜೋಡಿಸುವ ಆಲೋಚನೆಯಿಲ್ಲ.
– ಪ್ರಫ‌ುಲ್‌ ಪಟೇಲ್‌, ಎನ್‌ಸಿಪಿ ನಾಯಕ

ಮೈತ್ರಿ ಮುರಿದುಕೊಂಡು ಸರ್ಕಾರದಲ್ಲಿ ಮುಂದುವರಿಯುತ್ತೇವೆ ಎಂಬ ಶಿವಸೇನೆಯ ಧೋರಣೆ ಹಾಸ್ಯಾಸ್ಪದ ಹಾಗೂ ತರ್ಕ ರಹಿತವಾಗಿದೆ. ಹಾಗಾಗಿ, ಸೇನೆಯ ಈ ನಿರ್ಧಾರಕ್ಕೆ ಜನರ ಮಾನ್ಯತೆ ಸಿಗುವುದಿಲ್ಲ.
– ಸಚಿನ್‌ ಸಾವಂತ್‌, ಮಹಾರಾಷ್ಟ್ರ ಕಾಂಗ್ರೆಸ್‌ ವಕ್ತಾರ

Advertisement

Udayavani is now on Telegram. Click here to join our channel and stay updated with the latest news.

Next