Advertisement
ಈಗ ಅನ್ನಿಸುತ್ತಿದೆ, ದೊಡ್ಡವನಾದ ಮೇಲೆ ಇಂದಿನ ಧಾವಂತದ ಬದುಕನ್ನು ಎದುರಿಸಬೇಕಾಗುತ್ತದೆ ಎಂದು ಅಂದೇ ತಿಳಿದಿದ್ದರೆ ಅವುಗಳನ್ನು ನಾನು ತಿನ್ನುತ್ತಲೇ ಇರಲಿಲ್ಲವೇನೋ!
Related Articles
Advertisement
ನಮಗೆ ಆ ದಿನಗಳಲ್ಲಿ ಬೀದಿಯಲ್ಲಿಯೂ ಸ್ನೇಹಿತರೇ. ನಿಜ ಹೇಳಬೇಕೆಂದರೆ, ಮನೆಯಲ್ಲಿ ಇದ್ದದ್ದಕ್ಕಿಂತ ಹೆಚ್ಚಾಗಿ ಬೀದಿಯಲ್ಲಿ ಇದ್ದಿದ್ದೇ ಹೆಚ್ಚು. ಯಾರ ಮನೆಯಲ್ಲಿ ಏನು ಆಗುತ್ತಿದೆ, ಎಷ್ಟು ಮಂದಿ ನೆಂಟರು ಬಂದಿದ್ದಾರೆ. ಮೇಲಿನಮನೆಯ ಕೊಟ್ಟಿಗೆಯಲ್ಲಿ ಗೌರಿ ಯಾವ ಕರು ಹಾಕಿದೆ, ಕೆಳಗಿನಮನೆಯ ಮಂಜಣ್ಣ ಎಲ್ಲಿಗೆ ಹೋಗಿದ್ದಾರೆ ಎಂಬ ಎಲ್ಲ ಮಾಹಿತಿಗಳು ನಮಗೆ ತಿಳಿದಿರುತ್ತಿದ್ದವು. ಗೆಳೆಯರೊಂದಿಗೆ ಆಟ ಆಡಿದ್ದಕ್ಕಿಂತ ಅಲ್ಲಿ ಸಂಭವಿಸುವ ಜಗಳ, ರಾಜಿಗಳಂಥ ಘಟನೆಗಳೇ ಹೆಚ್ಚು ಮಜಾವಿರುತ್ತಿದ್ದವು. ನಮ್ಮ ವಯಸ್ಸಿನ ತಕ್ಕಂತೆ ಹಾಗೂ ಲಭ್ಯವಿರುವ ಸ್ನೇಹಿತರನ್ನು ಆಧರಿಸಿ ಆಟಗಳನ್ನು ಆಯು ತ್ತಿ ದ್ದೆವು. ಮೊದಮೊದಲು ಬಸ್-ರೈಲು ಆಟ, ನಂತರ ಬುಗರಿ-ಗೋಲಿ, ಕೈಕಾಲಿಗೆ ಶಕ್ತಿ ಬಂದಾಗ ಚಿನ್ನಿ-ದಾಂಡು. ಹುಡುಗಿಯರಿದ್ದರೆ ಕಣ್ಣಾಮುಚ್ಚಾಲೆ, ಕುಂಟಾಬಿಲ್ಲೆ. ಸ್ವಲ್ಪ ಹಿರಿಯರಿದ್ದರೆ ಕಳ್ಳ-ಪೊಲೀಸ್! ಜನ ಜಾಸ್ತಿ ಇದ್ದರೆ ಲಗೋರಿ, ಮರ ಕೋತಿ! ಒಬ್ಬನೇ ಇದ್ದರೆ ಸೈಕಲ್ ಟಯರ್! ಒಮ್ಮೆ ಚಿನ್ನಿ ದಾಂಡು ಆಟವಾಡುತ್ತಿರುವಾಗ, ಸ್ನೇಹಿತನ ತಲೆಗೆ ಚಿನ್ನಿ ಹೊಡೆದು ಸಣ್ಣ ಗಾಯವಾಯಿತು. ಮನೆಯವರಿಗೆ ತಿಳಿದರೆ ಹೊಡೆತ ತಿನ್ನಬೇಕು! ಅದಕ್ಕಾಗಿ ಮನೆಯಿಂದ ಮೆಲ್ಲನೆ ಕಾಫಿ ಪೌಡರ್ ತಂದು ಆ ಗಾಯಕ್ಕೆ ಹಚ್ಚಿದ್ದೆವು. ಗಾಯವೂ ವಾಸಿಯಾಗಿತ್ತು ಅನ್ನಿ !
ಶಾಲೆಗೆ ಹೋಗುವುದೆಂದರೆ ಎಲ್ಲಿಲ್ಲದ ಆಸಕ್ತಿ. ಅಂದರೆ, ಓದಿನಲ್ಲಿ ಉತ್ಸಾಹವಿದೆ ಎಂದರ್ಥವಲ್ಲ. ಹಾಗೆಂದು, ಶಾಲೆಗೆ ಹೋಗಲೇಬೇಕೆಂದು ಎಂದು ಮನೆಯಲ್ಲಿ ಕಟ್ಟಪ್ಪಣೆ ಮಾಡುವವರೂ ಇರಲಿಲ್ಲ. ಮನೆಯಲ್ಲಿಯೇ ಉಳಿದರೆ ಕೆಲಸ ಮಾಡಬೇಕಲ್ಲ ! ಅದಕ್ಕೆ ಶಾಲೆಯ ದಾರಿ ! ನಾಲ್ಕೈದು ಮೈಲಿ ನಡೆದೇ ಶಾಲೆಗೆ ಹೋಗಬೇಕು. ನೇರವಾದ ರಸ್ತೆಯಲ್ಲಿ ನಮ್ಮ ಪ್ರಯಾಣವೇ ಇಲ್ಲ. ಬೆಳಗ್ಗೆ 10 ಗಂಟೆಗೆ ಶಾಲೆ ಶುರು. ನಮ್ಮದು 8 ಗಂಟೆಗೆ ಪ್ರಯಾಣ ಆರಂಭ. ಇನ್ನೇನು ಶಾಲೆಯ ಬೆಲ್ಲು ಹೊಡೆಯುತ್ತೆ ಎನ್ನು ವಾಗ ಶಾಲೆಯೊಳಗೆ ಧಾವಿಸುತ್ತಿದ್ದೆವು.
ನಮ್ಮದು ಸರ್ಕಾರಿ ಶಾಲೆ. ಎಲ್ಲ ಪಾಠಗಳಿಗೆ ಪ್ರತ್ಯೇಕ ಮೇಷ್ಟ್ರುಗಳು ಇರುತ್ತಿರಲಿಲ್ಲ. ನೂರು ಮಕ್ಕಳಿಗೆ ಇಬ್ಬರು ಅಥವಾ ಮೂವರು ಗುರುಗಳು ಇದ್ದರೆ ಅದೇ ಹೆಚ್ಚು. ಇದ್ದವರೇ ಎಲ್ಲ ವಿಷಯಗಳನ್ನು ಹೇಳಿಕೊಡಬೇಕಿತ್ತು. ಪಾಪ ! ಮಕ್ಕಳಿಗೆ ಹೇಳಿಕೊಡಬೇಕು ಅನ್ನುವ ಘನ ಉದ್ದೇಶದಿಂದ ತಮಗೆ ಗೊತ್ತಿರುವುದನ್ನು ಹೇಳುತ್ತಿದ್ದರು. ಹೆಚ್ಚು ಕಲಿತು ಏನು ಮಾಡುವುದಕ್ಕಿದೆ ಎಂಬುದು ಮೊದಲೇ ನಮ್ಮ ತಲೆಯಲ್ಲಿ ತ್ತು ! ಹಳ್ಳಿಯಾದ ಕಾರಣ “ಬಾಡಿಗೆ ಮನೆ’ ಎಂಬ ಕಲ್ಪನೆಗಳಿರಲಿಲ್ಲ.
ಮೇಸ್ಟ್ರೆಗಳು ಅಲ್ಲಿಯೇ ಯಾರದ್ದೋ ಮನೆಯ ಒಂದು ಭಾಗದಲ್ಲಿ ಉಳಿದುಕೊಳ್ಳಬೇಕಿತ್ತು. ಮೇಷ್ಟ್ರುಗಳ ಮನೆಯ ನಿರ್ವಹಣೆ ನಮ್ಮದೇ. ಅವರ ಮನೆಗೆ ಬೇಲಿ ಹಾಕುವುದು, ಸೋರುವ ಮನೆಯ ಹಂಚು ಸರಿಮಾಡುವುದು, ಅವರಿಗೆ ನೀರು ತಂದುಕೊಡುವುದು… ಇತ್ಯಾದಿ. ಗುರುಗಳು ನಮ್ಮ ಬಗ್ಗೆ ಅನುಕಂಪ ತಳೆದರೆ ಕ್ಲಾಸ್‌ನಲ್ಲಿ ಪೆಟ್ಟು ತಿನ್ನುವುದು ಕಡಿಮೆಯಾಗುತ್ತದೆ ಎನ್ನುವುದು ನಮ್ಮ ದೂರಾಲೋಚನೆ. ಆದರೆ, ಆ ಯೋಜನೆ ಅಷ್ಟು ಪ್ರಯೋಜನಕಾರಿಯಾಗಿರಲಿಲ್ಲ. ಬಹುಶಃ ಮನೆಯಲ್ಲೂ ಯಾವಾಗಲು ಪೆಟ್ಟು ಬೀಳುತ್ತಿದ್ದ ಕಾರಣದಿಂದ ಶಾಲೆಯಲ್ಲಿ ಪೆಟ್ಟು ತಿನ್ನು ವುದು ಕೂಡ ದೊಡ್ಡ ಸಂಗತಿಯಾಗಿರಲಿಲ್ಲ.
ನಾವು ಕ್ಲಾಸ್ ನಲ್ಲಿ ಮೊದಲ ಸ್ಥಾನದಲ್ಲಿರಲಿಲ್ಲ. ಆದರೆ, ಕ್ಲಾಸ್‌ಲೀಡರ್ ಕೊಡುವ “ಮಾತನಾಡಿದವರ ಚೀಟಿ’ಯಲ್ಲಿ ಯಾವಾಗಲೂ ಮೊದಲು ನಮ್ಮದೇ ಹೆಸರು. ಅವನಿಗಾದರೋ ನಮ್ಮ ಮೇಲೆ ಯಾವ ಹಗೆಯೋ ಗೊತ್ತಿಲ್ಲ. ಸನಿಹ ಕುಳಿತವನಲ್ಲಿ “ಪೆನ್ ಕೊಡು’ ಅಂದರೂ ಅವನು ಹೆಸರು ಬರೆದಿಡುತ್ತಿದ್ದ. ಯಾವಾಗಲೂ ನಮ್ಮ ಹೆಸರುಗಳನ್ನೇ ನೋಡಿ ಬೇಸತ್ತ ಗುರುಗಳು, “ನಿಮಗೆ ಯಾವ ಶಿಕ್ಷೆ ಕೊಡಲಿ?’ ಎಂದು ನಮ್ಮಲ್ಲಿಯೇ ಕೇಳುತ್ತಿದ್ದರು !
ಮನೆಯಲ್ಲಿ ಬಡತನ. ಹಾಗಂತ ಊಟಕ್ಕೆ ಕೊರತೆಯೇನಿರಲಿಲ್ಲ. ನಮ್ಮ ಬೇಡಿಕೆಯನ್ನು ಪೂರೈಸುವಷ್ಟು ಶ್ರೀಮಂತಿಕೆಯಿರಲಿಲ್ಲ. ನಮ್ಮದೇನೂ ದೊಡ್ಡ ಬಂಗಲೆಯ ಬೇಡಿಕೆಯಲ್ಲ. ಒಂದು ರಬ್ಬರ್ ಚೆಂಡು, ಗೋಲಿಗಳು, ಹರಿದ ಚಡ್ಡಿಗಾಗಿ ಹೊಸ ಚಡ್ಡಿ. ಅಷ್ಟೇ. ಆದರೆ ಬೇಡಿಕೆ ಸಲ್ಲಿಸುವುದೇ ಒಂದು ಸವಾಲಿನ ಕೆಲಸ. ಅಮ್ಮನಲ್ಲಿ ಹೇಳಿ, ಅವಳು ಹೇಳಿದ ಕೆಲಸವನ್ನು ಪೂರೈಸಬೇಕು. ಅಮ್ಮ, ಅಪ್ಪನ ಒಳ್ಳೆಯ ಮೂಡ್ ನೋಡಿ ನಮ್ಮ ಬೇಡಿಕೆಯ ಬಗ್ಗೆ ಶಿಫಾರಸ್ಸು ಮಾಡಬೇಕು. ಬೇಡಿಕೆಗಳನ್ನು ಇಟ್ಟ ಮರುಗಳಿಗೆಯಲ್ಲಿ ಅಮ್ಮನಿಗೂ ನಮಗೂ ಇಬ್ಬರಿಗೂ ಅಪ್ಪನ ಬೈಗುಳ ! “ನಿನ್ನ ಕಾರಣದಿಂದ ಇವರು ಮಿತಿಮೀರಿ ಹೋಗುತ್ತಿದ್ದಾರೆ. ಕೊಟ್ಟ ಸಲುಗೆ ಜಾಸ್ತಿಯಾಯಿತು’ ಎಂಬ ಆರೋಪ.
ಹೀಗೆ ನೆನಪಿನ ಬುತ್ತಿ ಸಾಗುತ್ತ ಹೋಗುತ್ತದೆ. ಹೇಳುವುದಕ್ಕೆ ಹೋದರೆ ಕಾದಂಬರಿಯಾಗುತ್ತದೆ. ಈಗ ಕಾಣುವ ಮೊಬೈಲ್, ಲೆಕ್ಕವಿಲ್ಲದಷ್ಟು ಟಿವಿ ಚಾನೆಲ್ ಗಳು, ಇಂಟರ್‌ನೆಟ್, ತರಾವೇರಿ ಕಾರು-ಬೈಕ್‌ಗಳು, ಮನೋರಂಜನ ಮಾಧ್ಯಮಗಳು ಯಾವುದೂ ಇರಲಿಲ್ಲ. ಆದರೆ ಎಂದೂ ನಮ್ಮ ಆತ್ಮಸಂತೋಷಕ್ಕೆ ಬರಗಾಲವಿರಲಿಲ್ಲ. ಇಲ್ಲ ಅನ್ನುವುದು ಕೊರತೆಯಾಗಿರಲಿಲ್ಲ. ಆ ಬಗ್ಗೆ ಯೋಚನೆಯೇ ಇರಲಿಲ್ಲ. ಒಂದರ್ಥದಲ್ಲಿ ಇಲ್ಲ ಅನ್ನುವುದೇ ನಮ್ಮನ್ನು ಒಟ್ಟುಗೂಡಿಸಿತ್ತು. ಸಂಬಂಧಗಳನ್ನು ಬಿಗಿಯಾಗಿಸಿತ್ತು. ಈಗ ಎಲ್ಲವೂ ಇದೆ, ಆದರೆ ಏನೂ ಇಲ್ಲದೆ ಇರುವ ಹಾಗೆ ಮನಸ್ಸು ಶುಷ್ಕವಾಗುತ್ತದೆ. ಜ್ಞಾನವಿದೆ ಸಹನೆಯಿಲ್ಲ. ಧನವಿದೆ ದಾನವಿಲ್ಲ. ಸಂಸಾರವಿದೆ ಸಮಯವಿಲ್ಲ ಎಂಬ ಕವಿಯೊಬ್ಬರ ಮಾತು ನಿಜವೆನಿಸುತ್ತದೆ. ಮತ್ತೂಮ್ಮೆ ಬಾಲ್ಯದ ದಿನಗಳನ್ನು ಜೀವಿಸೋಣ ಎಂದು ತವಕವಾಗುತ್ತಿದೆ.
ರವಿ ಮಡೋಡಿ