Advertisement

ಶಿಶಿಲ: ದೇವರ ಮೀನುಗಳಿಗೆ ನೀರುನಾಯಿ ಕಾಟ; ಭಕ್ತರಿಗೆ ಆತಂಕ; ಅರಣ್ಯ ಇಲಾಖೆಗೆ ಉಭಯ ಸಂಕಟ !

11:42 PM May 27, 2022 | Team Udayavani |

ಬೆಳ್ತಂಗಡಿ: ಶಿಶಿಲದ ಕಪಿಲಾ ನದಿ ತಟದಲ್ಲಿರುವ ಶಿಶಿಲೇಶ್ವರ ದೇವಸ್ಥಾನದ ದೇವರ ಮೀನು (ಮಹಶೀರ್‌)ಗಳಿಗೆ ಕೆಲವು ದಿನಗಳಿಂದ ನೀರುನಾಯಿಗಳಿಂದ ಆತಂಕ ಎದುರಾಗಿದೆ.

Advertisement

ಕಡಲ ಕರಡಿ ಅಥವಾ ಅಟರ್‌ ಎಂದೂ ಕರೆಯಲ್ಪಡುವ ನೀರುನಾಯಿಗಳು ತಾಲೂಕಿನ ವಿವಿಧೆಡೆ ಎರಡು ವರ್ಷಗಳಿಂದ ಕಾಣಿಸಿಕೊಳ್ಳುತ್ತಿವೆ.

ನದಿ, ಹಳ್ಳದ ಬಂಡೆಯ ಪೊಟರೆಗಳು ಅವುಗಳ ಆವಾಸಸ್ಥಾನ. ಮೀನು, ಕಪ್ಪೆ ಇತ್ಯಾದಿ ಜಲಚರಗಳೇ ಆಹಾರ. ಶಿಶಿಲೇಶ್ವರ ದೇಗುಲದ ಪರಿಸರದಲ್ಲಿ ದೊಡ್ಡ ಗಾತ್ರದ ಮೀನುಗಳು ಯಥೇಷ್ಟವಾಗಿದ್ದು “ದೇವರ ಮೀನು’ಗಳೆಂದೇ ಹೆಸರಾಗಿವೆ. ಸುಲಭವಾಗಿ ಆಹಾರ ದೊರಕುವ ಹಿನ್ನೆಲೆಯಲ್ಲಿ ನೀರುನಾಯಿಗಳು ಇಲ್ಲಿ ನೆಲೆ ಕಂಡುಕೊಂಡಿವೆ.

ಶಿಶಿಲ ಕ್ಷೇತ್ರ ಪ್ರವಾಸಿ ತಾಣಗಳಲ್ಲೊಂದಾಗಿದ್ದು, ದೇವರ ಮೀನುಗಳ ಸಂರಕ್ಷಣೆಗಾಗಿ ದೇವ ಸ್ಥಾನದ 2 ಕಿ.ಮೀ. ಅಂತರದಲ್ಲಿ ಮೀನು ಹಿಡಿಯುವುದನ್ನು ನಿಷೇಧಿಸಲಾಗಿದೆ. ಇತ್ತ ನೀರು ನಾಯಿ ಅಳಿವಿನಂಚಿನಲ್ಲಿರುವ ಪ್ರಾಣಿ ಯಾಗಿರುವುದರಿಂದ ಜನರು ಹಿಡಿಯುವಂತೆ ಇಲ್ಲ.

26 ವರ್ಷಗಳ ಹಿಂದೆ ದುಷ್ಕರ್ಮಿಗಳು ಕಪಿಲೆಗೆ ವಿಷ ಉಣಿಸಿ ಸಹಸ್ರ ಸಹಸ್ರ ಸಂಖ್ಯೆಯ ದೇವರಮೀನುಗಳ ಸಾವಿಗೆ ಕಾರಣರಾಗಿದ್ದರು. ಅಂದಿನಿಂದ ಮತ್ಸé ಹಿತರಕ್ಷಣ ವೇದಿಕೆಯು ಮೀನುಗಳ ಸಂರಕ್ಷಣೆಗೆ ಪಣತೊಟ್ಟಿದೆ. ಇದೀಗ ನೀರುನಾಯಿ ಹಾವಳಿ ಎದುರಾಗಿದ್ದು ಏನು ಮಾಡುವುದೆಂದೇ ತೋಚದಾಗಿದೆ. ಅರಣ್ಯ ಇಲಾಖೆ ಅವುಗಳನ್ನು ಹಿಡಿದು ಸ್ಥಳಾಂತರಿಸುವುದೊಂದೇ ಪರಿಹಾರ.
– ಜಯರಾಮ ನೆಲ್ಲಿತ್ತಾಯ, ಸಾಮಾಜಿಕ ಕಾರ್ಯಕರ್ತ

Advertisement

ನೀರುನಾಯಿಗಳ ಆವಾಸಸ್ಥಾನವೇ ನದಿಗಳಲ್ಲಿನ ಪೊಟರೆ/ಪೊದೆಗಳು. ಜಲಚರಗಳೇ ಆಹಾರ; ಹಾಗಿರುವಾಗ ಅವುಗಳ ಆಹಾರ ಪದ್ಧತಿಯನ್ನಾಗಲೀ ಆವಾಸ ಸ್ಥಾನವನ್ನಾಗಲೀ ಬದಲಾಯಿಸಲು ಸಾಧ್ಯವಿಲ್ಲ. ಹಾಗೇನಾದರೂ ಮಾಡಿದರೆ ಅವು ಸಾವನ್ನಪ್ಪುವ ಸಾಧ್ಯತೆ ಇದೆ. ದೇವರ ಮೀನುಗಳ ರಕ್ಷಣೆ, ನೀರುನಾಯಿಗಳ ಉಳಿವು ಎರಡೂ ಅನಿವಾರ್ಯವಾಗಿರುವುದರಿಂದ ಅನ್ಯ ಕ್ರಮ ಏನು ಕೈಗೊಳ್ಳಬಹುದೆಂದು ಪರಿಶೀಲಿಸಲಾಗುವುದು.
– ಮಧುಸೂದನ್‌, ವಲಯ ಅರಣ್ಯಾಧಿಕಾರಿ, ಉಪ್ಪಿನಂಗಡಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next