ಬೆಳ್ತಂಗಡಿ/ಮಂಗಳೂರು: ಮಿಯಾರು ಮೀಸಲು ಅರಣ್ಯ ಸಹಿತ ಶಿಬಾಜೆಯಲ್ಲಿ ವಾರದಿಂದ ಸುಡುತ್ತಿದ್ದ ಕಾಳ್ಗಿಚ್ಚು ಶಾಂತರೂಪ ಪಡೆದಿದೆ. ಆದರೆ ಮತ್ತೆ ಅರಣ್ಯವನ್ನು ಆಹುತಿ ಪಡೆಯುವ ಮುನ್ನ ಗೋವಾದ ನೌಕಾಪಡೆ ತಂಡವು ಅರಣ್ಯ ಸಮೀಕ್ಷೆ ನಡೆಸಿ ಜಿಲ್ಲಾ ಕೇಂದ್ರದಲ್ಲಿ ಬೆಂಕಿ ನಂದಿಸಲು ಕನಿಷ್ಠ 2 ಹೆಲಿಕಾಪ್ಟರ್‌ಗಳನ್ನು ನಿಯೋಜಿಸುವಂತೆ ಸಾರ್ವಜನಿಕ ವಲಯದಿಂದ ಆಗ್ರಹ ಕೇಳಿಬಂದಿದೆ.
ಕುದುರೆಮುಖ ವನ್ಯಜೀವಿ ವಿಭಾಗ ಸಹಿತ ಶಿಶಿಲ, ಶಿಬಾಜೆ, ಮಿಯಾರು, ಸವಣಾಲು, ಶಿರ್ಲಾಲು ವ್ಯಾಪ್ತಿಯ ಮೇಲ್ಭಾಗದ ಅರಣ್ಯ ಬೆಂಕಿಯ ಜ್ವಾಲೆಗೆ ಅಕ್ಷ ರಶಃ ಸುಟ್ಟು ಕರಕಲಾಗಿದೆ. ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕ ದಳ, ಸ್ಥಳೀಯ ತಂಡಗಳ ನಿರಂತರ ಕಾರ್ಯಾ ಚರಣೆಯಿಂದ ಬೆಂಕಿ ಶಮನದ ಹಂತದಲ್ಲಿದೆ.
ಹೆಲಿಕಾಪ್ಟರ್ ಬಳಕೆ: ಅಭಿಯಾನ ಮುಂದುವರಿಕೆ
ಮಂಗಳೂರು: ಹೆಲಿಕಾಪ್ಟರ್ ಬಳಸಿ ಕಾಳ್ಗಿಚ್ಚು ನಂದಿಸುವಂತೆ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಮುಂದುವರಿದಿದೆ.
ಈ ಕುರಿತು ಮಾ. 10ರಂದು “ಉದಯವಾಣಿ’ ವರದಿ ಮಾಡಿದ್ದು, ಬಹಳಷ್ಟು ಮಂದಿ ವರದಿಯನ್ನು ಟ್ವೀಟ್ ಮಾಡಿದ್ದರು. ಪ್ರಧಾನಿ ಮತ್ತು ಮುಖ್ಯಮಂತ್ರಿ ಕಚೇರಿಗೂ ಟ್ಯಾಗ್ ಮಾಡಿದ್ದರು. ಸಿಎಂ ಕಚೇರಿ ಯಿಂದಲೇ ಈ ಕುರಿತು ಕ್ರಮ ಜರಗಿಸಬೇಕು ಎಂದು ಒತ್ತಾಯಿಸಿದ್ದರು.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಸ್ಪಂದಿಸಿ, ಹೆಲಿಕಾಪ್ಟರ್ ಮೂಲಕ ಅಗ್ನಿಶಮನ ಕಾರ್ಯ ನಡೆಸುವಂತೆ ಸಿಎಂಗೆ ಪತ್ರ ಬರೆದಿದ್ದಾರೆ. ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಕೂಡ ಈ ಕುರಿತು “ಉದಯವಾಣಿ’ ಜತೆ ಮಾತನಾಡಿ, ವಿಚಾರದ ಗಂಭೀರತೆಯ ಅರಿವಿದೆ, ಈ ಬಗ್ಗೆ ತತ್‌ಕ್ಷಣ ಅರಣ್ಯಾಧಿಕಾರಿಗಳೊಂದಿಗೆ ಹಾಗೂ ಅಗ್ನಿಶಾಮಕ ದಳದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವೆ ಎಂದು ತಿಳಿಸಿದ್ದಾರೆ.