Advertisement

ಶಿಶಿಲ, ಶಿಬಾಜೆ: 4 ಸಾವಿರ ಹೆ. ಅರಣ್ಯ ಬೆಂಕಿಗೆ ಆಹುತಿ

02:40 AM Mar 10, 2023 | Team Udayavani |

ಬೆಳ್ತಂಗಡಿ: ಭಾರೀ ತಾಪಮಾನದ ನಡುವೆ ಶಿಶಿಲ, ಶಿಬಾಜೆ ಪರಿಸರದ ಸುಮಾರು 4,800 ಹೆಕ್ಟೇರ್‌ ಪ್ರದೇಶದ ಅರಣ್ಯ ಬೆಂಕಿಯ ಕೆನ್ನಾಲಗೆ ಸುಟ್ಟು ಭಸ್ಮವಾಗಿದೆ. ಒಂದು ವಾರದಿಂದ ನಿರಂತರವಾಗಿ ಉಪ್ಪಿನಂಗಡಿ ಅರಣ್ಯ ಇಲಾಖೆ ಸಿಬಂದಿ ಸಹಿತ ಸ್ಥಳೀಯ 50 ಮಂದಿಯ ತಂಡ ಬೆಂಕಿ ಶಮನದಲ್ಲಿ ನಿರತರಾಗಿದ್ದಾರೆ.

Advertisement

ಶಿಶಿಲ ಬಾಳೂರು ಕಡೆ ಬೆಂಕಿ
ಉಪ್ಪಿನಂಗಡಿ ಅರಣ್ಯ ಇಲಾಖೆಗೆ ಒಳಪಟ್ಟಂತೆ ಶಿಶಿಲದ ಮಿಯಾರು ಮೀಸಲು ಅರಣ್ಯ ಪ್ರದೇಶ, ಶಿಬಾಜೆಯ ಶಿರಾಡಿ ರಕ್ಷಿತಾರಣ್ಯದಿಂದ ಆರಂಭಗೊಂಡು ಚಿಕ್ಕಮಗಳೂರಿನ ಬಾಳೂರು ಪ್ರದೇಶದವರೆಗೆ ಹಬ್ಬಿರುವ ಬೆಂಕಿ ರಾತ್ರಿ ಹೊತ್ತು ಬೆಟ್ಟವನ್ನೇ ನುಂಗಿದಂತೆ ಗೋಚರಿಸುತ್ತಿದೆ. ಅಪಾರ ಅರಣ್ಯ ಪ್ರದೇಶ ಬೆಂಕಿಗಾಹುತಿಯಾಗಿರುವ ಬಗ್ಗೆ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿರುವ ಅವಿನಾಶ್‌ ಭಿಡೆ ಮಾಹಿತಿ ನೀಡಿದ್ದಾರೆ.

ಶಿಶಿಲ ವ್ಯಾಪ್ತಿಯ ಅಮೇದಿಕಲ್ಲು, ಸಿಂಗಾಣಿ ಗುಡ್ಡೆ, ಉದಯ ಪರ್ವತಕ್ಕೆ ಸಂಪೂರ್ಣ ಬೆಂಕಿ ಆವರಿಸಿದೆ. ಹತ್ಯಡ್ಕ ಗ್ರಾಮದ ಪೆರಡೇಲು ಬಳಿ ಗುರುವಾರವೂ ಅರಣ್ಯದಲ್ಲಿ ದಟ್ಟ ಹೊಗೆ ಆವರಿಸಿತ್ತು. ಹೊಸದಾಗಿ ಎಲ್ಲೂ ಬೆಂಕಿ ಬೀಳದಿದ್ದರೂ ಈಗಾಗಲೇ ಬಿದ್ದ ಬೆಂಕಿ ಶಮನವಾಗುತ್ತಿಲ್ಲ. ಅರಣ್ಯದಲ್ಲಿ ಬೃಹದಾಕಾರದ ಮರಗಳು ಬಿದ್ದು ಒಣಗಿ ಹೋಗಿದ್ದು, ಅವುಗಳಿಗೆ ಹತ್ತಿದ ಬೆಂಕಿ ಮತ್ತಷ್ಟು ವ್ಯಾಪಿಸಲು ಕಾರಣವಾಗುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ವಾರಗಳ ಹಿಂದೆ ಕುದುರೆಮುಖ ಅರಣ್ಯ ಪ್ರದೇಶವಾದ ಚಾರ್ಮಾಡಿಯ ಆಲೆಖಾನ್‌ ಹೊರಟ್ಟಿ ಪ್ರದೇಶ, ಚಿಕ್ಕಮಗಳೂರು ವಿಭಾಗದ ಘಾಟಿ ಪರಿಸರದ ಅಲ್ಲಲ್ಲಿ ಲಘು ಪ್ರಮಾಣದಲ್ಲಿ ಬೆಂಕಿ ಉರಿಯುತ್ತಲೇ ಇತ್ತು. ಈಗ ಬಹುತೇಕ ಸುಟ್ಟು ಶಮನದ ಹಂತದಲ್ಲಿದೆ. ಬೆಳ್ತಂಗಡಿ ತಾಲೂಕಿನ ದಿಡುಪೆಯ ಮಲ್ಲ ಪ್ರದೇಶದಲ್ಲಿ ಬಹುದೊಡ್ಡ ಪ್ರಮಾಣದಲ್ಲಿ ಬೆಂಕಿ ಆವರಿಸಿರುವ ಕುರಿತು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ನೆರಿಯ ಗ್ರಾಮದ ಚಾರ್ಮಾಡಿ-ಕನಪಾಡಿ ಮೀಸಲು ಅರಣ್ಯದಲ್ಲಿ ಪಟ್ಲ, ಕಾಟಜೆ ಮೊದಲಾದ ಕಡೆ ಬೆಂಕಿ ಕಂಡುಬಂದಿತ್ತು. ನೆರಿಯ ಪರಿಸರದ ಬಾಂಜಾರು ಮಲೆ ಹಾಗೂ ಇನ್ನಿತರ ಕೆಲವು ಖಾಸಗಿ ಸ್ಥಳಗಳಲ್ಲೂ ಬೆಂಕಿ ಪ್ರಕರಣಗಳು ಉಂಟಾಗಿವೆ. ಉಜಿರೆಯ ನಿನ್ನಿಗಲ್ಲು ಪಾಲೆಂಜ ಎಂಬಲ್ಲಿ ಕಿಡಿಗೇಡಿಗಳು ರಸ್ತೆ ಬದಿ ಒಣಹುಲ್ಲಿಗೆ ಬೆಂಕಿ ಹಚ್ಚಿದ ಪರಿಣಾಮ ಪರಿಸರದಲ್ಲಿ ಬೆಂಕಿ ಆವರಿಸಿದ ಘಟನೆ ಬುಧವಾರ ಮಧ್ಯಾಹ್ನ ನಡೆದಿತ್ತು.

ಆನೆ ಓಡಿಸಲು ಬೆಂಕಿ ಹಚ್ಚಿದರೇ?
ಶಿಶಿಲ, ಶಿಬಾಜೆ ಭಾಗದಲ್ಲಿ ವ್ಯಾಪಕವಾಗಿ ಸಲಗದ ಉಪಟಳ ನಿರಂತರವಾಗಿ ಕೃಷಿಕರನ್ನು ಹೈರಾಣಾಗಿಸಿದೆ. ಅರಣ್ಯ ಇಲಾಖೆಗೆ ದೂರು ನೀಡಿ ನೀಡಿ ಬಸವಳಿದಿದ್ದಾರೆ. ಬೆಳೆದ ಕೃಷಿ ಕೈಗೆ ಸಿಗದಿದ್ದಾಗ ಆವೇಶದಿಂದ ಆನೆ ಓಡಿಸಲು ಆರಣ್ಯದಲ್ಲಿ ಬೆಂಕಿ ಹಚ್ಚಿರಬಹುದೇ? ಈ ಬೆಂಕಿ ಈಗ ಸಾವಿವಾರು ಎಕರೆ ಅರಣ್ಯಪ್ರದೇಶವನ್ನೇ ಆಹುತಿ ಪಡೆಯಿತೇ ಎಂಬ ಬಗ್ಗೆಯೂ ಮಾತುಗಳು ಕೇಳಿ ಬರುತ್ತಿವೆ.

Advertisement

ಮಂಗಳವಾರ ಶಿಶಿಲ ಕಾರೆಗುಡ್ಡೆ, ಬುಧವಾರ ಶಿಬಾಜೆ ಗ್ರಾಮದ ಬಂಡಿಹೊಳೆಯಲ್ಲಿ ಅಪಾರ ಪ್ರಮಾಣದಲ್ಲಿ ಕಾಡು ಬೆಂಕಿಗಾಹುತಿಯಾಗಿದೆ. ಪಟ್ಟ ಜಾಗದ ಕಾಡುಗಳಿಗೆ ಹಾನಿಯಾಗಿದೆ. ಪೆರ್ಲ ಸಮೀಪ ಮೊಬೈಲ್‌ ಟವರ್‌ಗೆ ಬೆಂಕಿ ಆವರಿಸುತ್ತಿದುದನ್ನು ಸ್ಥಳೀಯರ ಸಹಕಾರದಿಂದ ನಂದಿಸಲಾಗಿದ್ದು, ದೊಡ್ಡ ಅನಾಹುತವೊಂದು ತಪ್ಪಿದೆ ಎಂದು ಸ್ಥಳೀಯರಾದ ವಿಶ್ವನಾಥ  ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next