ಶಿರ್ವ: ಕಾಪು ತಾಲೂಕಿನ ಕುತ್ಯಾರು ಸಮೀಪದ ಮೂಲ್ಡೊಟ್ಟು ಪರಿಶಿಷ್ಟ ವರ್ಗದ ನಾಗಬನದಲ್ಲಿ ವರ್ಷಕ್ಕೊಮ್ಮೆ ತುಳು ಬೇಷ ತಿಂಗಳ ಮೊದಲ ಗುರುವಾರ ನಡೆಯುವ ನಾಗರಾಧನೆ ಪೂಜೆಯು ಮೇ. 18ರಂದು ಸಂಪನ್ನಗೊಂಡಿತು.
ವೈದಿಕ ಪರಂಪರೆಗೆ ಅವಕಾಶವಿರದೆ ವಿವಿಧ ಜಿಲ್ಲೆಗಳ ಪರಿಶಿಷ್ಟ ವರ್ಗದ ಮೊಗೇರ ಸಮುದಾಯ ದವರಿಂದ ವರ್ಷಕ್ಕೊಮ್ಮೆ ಮಾತ್ರ ಈ ನಾಗಬನದಲ್ಲಿ ಪೂಜೆ ನಡೆಯುವುದು ಅನಾದಿ ಕಾಲದ ಸಂಪ್ರದಾಯವಾಗಿದೆ. ನೈಸರ್ಗಿಕವಾಗಿ ತನ್ನ ಮೂಲ ಸ್ವರೂಪವನ್ನು ಉಳಿಸಿಕೊಂಡ ಈ ವಿಶಿಷ್ಟ ನಾಗಬನದಲ್ಲಿ ನಾಗರಪಂಚಮಿಯಂತಹ ಪರ್ವದಿನದಲ್ಲಾಗಲೀ,ಭಕ್ತರು ಬಯಸಿದ ಇತರ ದಿನದಲ್ಲಾಗಲೀ ಪೂಜೆಗೆ ಅವಕಾಶವಿಲ್ಲ.
ಪ್ರತೀ ವರ್ಷ ಇಲ್ಲಿನ ಮಣ್ಣಿನ ಮಡಕೆಯಲ್ಲಿ ನಾಗನ ಬಿಂಬದಲ್ಲಿ ನಡೆಯುವ ನಾಗಾರಾಧನೆ ಪೂಜೆಗೆ ಕಾಸರಗೋಡಿನಿಂದ ಕಾರವಾರದವರೆಗಿನ ವಿವಿಧ ಜಿಲ್ಲೆಗಳಿಂದ ಮೊಗೇರ ಸಮುದಾಯದ ಸುಮಾರು 500ಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡು, ಸಂಪ್ರದಾಯದಂತೆ ಮೂಲ್ಡೊಟ್ಟು ಗುತ್ತು ಮೂಲ ಮನೆಗೆ ತೆರಳಿ ಬಾವಿಯ ನೀರು ಕುಡಿದು ಪೂಜೆ ಸಲ್ಲಿಸಿದರು. ಈ ಬಾರಿ ಭಕ್ತರಿಗೆ ಊಟೋಪಚಾರದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.
ವಿಶಿಷ್ಟ ನಾಗಬನ
Related Articles
ಪರಿಶಿಷ್ಟ ವರ್ಗದ ಮೊಗೇರ ಸಮುದಾಯದ 16 ಬಳಿ ಸಾವಿರ ಮಾಗಣೆಯ ಪ್ರಧಾನ ನಾಗಬನವಾಗಿದ್ದು ಈ ವಾರ್ಷಿಕ ಆರಾಧನೆ ಪುರಾತನ ಕಾಲದಿಂದಲೂ ಸಂಪ್ರದಾಯಬದ್ಧವಾಗಿ ನಡೆದುಕೊಂಡು ಬರುತ್ತಿದೆ. ಶಿರ್ವ ಸೊರ್ಪು ಶ್ರೀಬ್ರಹ್ಮ ಮುಗ್ಗೇರ್ಕಳ ದೈವಸ್ಥಾನದ ಗುರಿಕಾರರಿಗೆ ಮಾತ್ರ ಸನ್ನಿಧಿಯಲ್ಲಿ ತಂಪೆರೆಯುವ ಪೂಜೆ ಸಲ್ಲಿಸುವ ಅಧಿಕಾರವಿದ್ದು , ಈ ನಾಗಬನದಲ್ಲಿ ಮಾತ್ರ ತುಳು ಬೇಷ ತಿಂಗಳ ಮೊದಲ ಗುರುವಾರ ನಾಗಾರಾಧನೆ ನಡೆಯುವುದು ಕರಾವಳಿಯಲ್ಲಿ ವಿಶೇಷವಾಗಿದೆ.
ಮೂಲ್ಡೊಟ್ಟು ಮನೆತನದ ಪ್ರದೀಪ್ ಶೆಟ್ಟಿ, ಕುತ್ಯಾರು,ಶಿರ್ವ ಮತ್ತಿತರ ಮುಗ್ಗೇರ್ಕಳ ದೈವಸ್ಥಾನಗಳ ಮೊಗೇರ ಸಮಾಜದ ಗುರಿಕಾರರು, ಒತ್ತು ಗುರಿಕಾರರು, ಭಕ್ತರು ಉಪಸ್ಥಿತರಿದ್ದರು.
ಸುವ್ಯವಸ್ಥಿತ ರಸ್ತೆ ಇಲ್ಲ ಪ್ರಕೃತಿದತ್ತವಾದ ಈ ವಿಶಿಷ್ಟ ನಾಗಬನಕ್ಕೆ ಸರಿಯಾದ ರಸ್ತೆ ಇರದೇ ಇದ್ದು, ತಂದೂರು ಬಳಿ ಸೇತುವೆ ನಿರ್ಮಿಸಿ ರಸ್ತೆಯ ವ್ಯವಸ್ಥೆ ಕಲ್ಪಿಸಬೇಕಾಗಿದೆ. ಸಂಬಂಧಪಟ್ಟ ಸರಕಾರದ ಇಲಾಖೆ ಪರಿಶಿಷ್ಟ ವರ್ಗದ ಮೊಗೇರ ಸಮುದಾಯದ ಈ ನಾಗಬನದ ಬನದ ಸುತ್ತ ತಡೆಗೋಡೆ ನಿರ್ಮಿಸಿ ಮೂಲ ಸ್ವರೂಪವನ್ನು ಉಳಿಸಿಕೊಳ್ಳಬೇಕಾಗಿದೆ. – ಪ್ರದೀಪ್ ಶೆಟ್ಟಿ, ಮೂಲ್ಡೊಟ್ಟು ಗುತ್ತು ಮನೆತನ.
- ಸತೀಶ್ಚಂದ್ರ ಶೆಟ್ಟಿ ಶಿರ್ವ