Advertisement

ಶಿರ್ವ: ಬೇಸಗೆಯಲ್ಲಿ ನೀರುಣಿಸಿ ರಸ್ತೆ ಬದಿ ಗಿಡಗಳ ಸಂರಕ್ಷಣೆ

10:21 PM Apr 01, 2019 | sudhir |

ಶಿರ್ವ: ಅರಣ್ಯ ಇಲಾಖೆ ಪರಿಸರ ದಿನಾಚರಣೆಯ ಅಂಗವಾಗಿ ಶಿರ್ವ ಪರಿಸರದ ರಸ್ತೆ ಬದಿಯ ಇಕ್ಕೆಲಗಳಲ್ಲಿ ನೆಡಲಾದ ಗಿಡಗಳಿಗೆ ಬಿರು ಬೇಸಗೆಯಲ್ಲಿ ನೀರುಣಿಸಿ ಗಿಡಗಳ ಸಂರಕ್ಷಣೆ ನಡೆಸಿ ಉತ್ತಮ ಕಾರ್ಯ ನಿರ್ವಹಿಸುತ್ತಿದೆ.

Advertisement

ಬಿಸಿಲಿನ ಬೇಗೆಯಿಂದ ಗಿಡಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಶಿರ್ವ ಅರಣ್ಯ ರಕ್ಷಕ ಜಯರಾಮ ಶೆಟ್ಟಿ ಅವರ ನೇತೃತ್ವದಲ್ಲಿ ಸಿಂಟೆಕ್ಸ್‌ ಡ್ರಮ್‌ನಲ್ಲಿ ನೀರು ತುಂಬಿಸಿ ಟೆಂಪೊ ದಲ್ಲಿ ತಂದು ಪೈಪ್‌ನ ಮೂಲಕ ವಾರಕ್ಕೊಮ್ಮೆ ನೀರುಣಿಸುತ್ತಿದ್ದು ನಾಗರಿಕರಿಂದ ಇಲಾಖೆಯ ಉತ್ತಮ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

ಪ್ಲಾಸ್ಟಿಕ್‌ ಮುಕ್ತ ಸಮಾಜ ಮಾಡುವ ನಿಟ್ಟಿನಲ್ಲಿ ಪರಿಸರದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಹಾಗೂ ಮಳೆ ಮತ್ತು ನೀರಿನ ಉದ್ದೇಶದಿಂದ ಮಳೆಗಾಲದಲ್ಲಿ ಅರಣ್ಯ ಇಲಾಖೆ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿತ್ತು. ರಸ್ತೆ ಬದಿ, ಶಾಲಾ ಕಾಲೇಜುಗಳ ಕ್ಯಾಂಪಸ್‌ಗಳಲ್ಲಿ, ಸಾರ್ವಜನಿಕ ಸರಕಾರಿ ಕಚೇರಿಗಳ ಆವರಣದಲ್ಲಿ ಗಿಡ ಮರಗಳನ್ನು ಬೆಳೆಸುವ ಮೂಲಕ ಜನರಲ್ಲಿ ಪರಿಸರ ಜಾಗೃತಿ ಮೂಡಿಸುವ ಕೆಲಸ ಇಲಾಖೆ ಮಾಡಿತ್ತು.

ಅರಣ್ಯ ಇಲಾಖೆ ಹಲಸು, ಮಾಗನಿ,ಬೇಂಗ, ಧೂಪ, ನೇರಳೆ, ರೆಂಜ ಮತ್ತು ನಾಗಲಿಂಗ ಪುಷ್ಪ ತಳಿಗಳ ಸುಮಾರು 10,000 ಗಿಡಗಳನ್ನು ರಸ್ತೆ ಬದಿ ನೆಟ್ಟು ಇಲಾಖೆ ಪರಿಸರ ಸಂರಕ್ಷಣೆಯ ಬಗ್ಗೆ ಪಣತೊಟ್ಟಿದ್ದು ಸಾರ್ವಜನಿಕರು, ಜನಪ್ರತಿನಿಧಿಗಳು ಇಲಾಖೆಯೊಂದಿಗೆ ಸಹಕರಿಸಬೇಕಾಗಿದೆ ಎಂದು ಅರಣ್ಯಾಧಿಕಾರಿ ನಾಗೇಶ್‌ ಬಿಲ್ಲವ ತಿಳಿಸಿದ್ದಾರೆ.

ಕೆಲವೆಡೆ ಸಾರ್ವಜನಿಕರು ತಮ್ಮ ಮನೆಯ ಗೇಟಿನ ಮುಂಭಾಗದಲ್ಲಿರುವ ಗಿಡಗಳನ್ನು ಕಡಿಯುವುದರ ಮೂಲಕ ಮತ್ತು ಗಿಡಗಳ ಬುಡದಲ್ಲಿ ಕಸ ರಾಶಿ ಹಾಕಿ ಬೆಂಕಿಯಿಡುವುದರ ಮೂಲಕ ಗಿಡಗಳನ್ನು ನಾಶ ಮಾಡುತ್ತಿದ್ದಾರೆ ಎಂದು ಅರಣ್ಯ ರಕ್ಷಕ ಜಯರಾಮ ಶೆಟ್ಟಿ ಬೇಸರ ವ್ಯಕ್ತಪಡಿಸಿದ್ದು,
ಸಾರ್ವಜನಿಕರುಗಿಡಗಳನ್ನು ರಕ್ಷಿಸುವಲ್ಲಿ ಸಹಕರಿಸಬೇಕು ಎಂದಿದ್ದಾರೆ.

Advertisement

ಶ್ಲಾಘನೀಯ ಕಾರ್ಯ ಹೆದ್ದಾರಿ ವಿಸ್ತರಣೆ ಸಂದರ್ಭದಲ್ಲಿ ರಸ್ತೆ ಬದಿಯ ಮರಗಳನ್ನು ಕಡಿದಿದ್ದು ಮರಗಳ ಮಾರಣ ಹೋಮವಾಗಿದೆ. ರಸ್ತೆ ಬದಿ ಗಿಡ ನೆಟ್ಟು ಬೇಸಗೆಯಲ್ಲಿ ನೀರುಣಿಸಿ ಪೋಷಿಸುವ ಇಲಾಖೆಯ ಕಾರ್ಯ ಶ್ಲಾಘನೀಯ.
– ಅರುಣ್‌ ಸ್ವಾಮಿ ಶಿರ್ವ, ಸ್ಥಳೀಯರು

Advertisement

Udayavani is now on Telegram. Click here to join our channel and stay updated with the latest news.