ಶಿರ್ವ: ಅನಿವಾಸಿ ಭಾರತೀಯ ಶಿರ್ವ ವೆಲ್‌ಫೇರ್ ಎಸೋಸಿಯೇಶನ್ ಆಫ್ ಕುವೈಟ್ (ಸ್ವಾಕ್) ಸೇವಾ ಸಂಘಟನೆಯ ವತಿಯಿಂದ ದಾನಿಗಳ ಸಹಕಾರದೊಂದಿಗೆ ಸುಮಾರು 4.5 ಲ. ರೂ. ವೆಚ್ಚದಲ್ಲಿ ಶಿರ್ವ ಸಂತ ಮೇರಿ ಪ.ಪೂ.ಕಾಲೇಜು ಮತ್ತು ಡಾನ್ ಬೊಸ್ಕೊ ಕನ್ನಡ ಮಾಧ್ಯಮ ಹಿ.ಪ್ರಾ. ಶಾಲೆಯ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ ಸಮಾರಂಭವು ಆ.3 ರಂದು ಶಿರ್ವ ಸಾವುದ್ ಸಭಾ ಭವನದಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಸಂತ ಮೇರಿ ಮತ್ತು ಡಾನ್ ಬೊಸ್ಕೊ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ರೆ|ಫಾ| ಡಾ|ಲೆಸ್ಲಿ ಡಿಸೋಜಾ ಸಮವಸ್ತ್ರವನ್ನು ಸಾಂಕೇತಿಕವಾಗಿ ವಿತರಿಸಿ ಮಾತನಾಡಿ ದಾನಿಗಳು ನೀಡಿದ ಸವಲತ್ತುಗಳನ್ನು ಪಡೆದು ಕೊಂಡು ಮಕ್ಕಳು ಕಲಿತು ಬುದ್ಧಿವಂತರಾಗಿ ಸಮಾಜದ ಉತ್ತಮ ನಾಗರಿಕರಾಗಿ ಬಾಳಬೇಕೆಂಬುದು ಸಂಸ್ಥೆಯ ಆಶಯವಾಗಿದ್ದು, ಮಕ್ಕಳು ಅದಕ್ಕೆ ತಣ್ಣೀರೆರಚಬಾರದು. ಸಿಕ್ಕಿದ ಸೌಲಭ್ಯಗಳನ್ನು ಬಳಸಿಕೊಂಡು ವಿದ್ಯೆ ಕಲಿತು ಶಿಸ್ತಿನಿಂದ ಬಾಳಿ ಮುಂದಿನ ಜೀವನ ರೂಪಿಸಿಕೊಳ್ಳಿ ಎಂದು ಹೇಳಿದರು.
ಸ್ವಾಕ್ ಸಂಘಟನೆಯ ಶಿರ್ವ ಪ್ರತಿನಿಧಿ ಶಿರ್ವ ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷ ಮೆಲ್ವಿನ್ ಅರಾನ್ಹಾ ಮಾತನಾಡಿ ಕಳೆದ 25 ವರ್ಷಗಳಿಂದ ವಿದ್ಯಾಸಂಸ್ಥೆಗೆ ಸಹಾಯಹಸ್ತ ನೀಡುತ್ತಿರುವ ಸಂಘಟನೆ ಶಾಲೆಯ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಡಾನ್ ಬೊಸ್ಕೊ ಹಿ.ಪ್ರಾ.ಶಾಲೆಗೂ ವಿಸ್ತರಿಸಿದ್ದು, ವಿದ್ಯಾರ್ಥಿಗಳು ಅದರ ಸದುಪಯೋಗವನ್ನು ಪಡೆದುಕೊಳ್ಳಿ ಎಂದು ಹೇಳಿದರು.
ಸಂತ ಮೇರಿ ಪ.ಪೂ. ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನೋರ್ಬರ್ಟ್ ಇ.ಮಚಾದೋ,ಕಾರ್ಯದರ್ಶಿ ಮೋಹನ್ ನೊರೊನ್ಹಾ,ಕಾಲೇಜಿನ ಪ್ರಾಂಶುಪಾಲ ಜೈಶಂಕರ್,ಸಮವಸ್ತ್ರದ ಪ್ರಾಯೋಜಕಿ ಲಿಲ್ಲಿ ಲೋಬೋ, ಸ್ವಾಕ್ ಸಂಘಟನೆಯ ಕಾರ್ಯದರ್ಶಿ ಲೋನಾ ಡಿಸೋಜಾ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರು ವೇದಿಕೆಯಲ್ಲಿದ್ದರು. ಕಾಲೇಜಿನ ಶಿಕ್ಷಕ ಶಿಕ್ಷಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಹೈಸ್ಕೂಲ್ ವಿಭಾಗದ ಹಿರಿಯ ಶಿಕ್ಷಕಿ ಸಬಿನಾ ಪ್ರಿಯಾ ನೊರೊನ್ಹಾ ಸ್ವಾಗತಿಸಿದರು. ಶಿಕ್ಷಕ ವಿಲಿಯಂ ವೇಗಸ್ ಕಾರ್ಯಕ್ರಮ ನಿರೂಪಿಸಿ, ಡಾನ್ ಬೊಸ್ಕೊ ಹಿ.ಪ್ರಾ. ಶಾಲೆಯ ಮುಖ್ಯ ಶಿಕ್ಷಕಿ ಪೌಲಿನ್ ಲೋಬೋ ವಂದಿಸಿದರು.