Advertisement

Shirva: ಸಕಲ ಸರಕಾರಿ ಗೌರವಗಳೊಂದಿಗೆ ಪೊಲೀಸ್‌ ಅಧಿಕಾರಿ ನಿತ್ಯಾನಂದ ಶೆಟ್ಟಿ ಅಂತ್ಯಕ್ರಿಯೆ

07:12 PM Sep 18, 2024 | Team Udayavani |

ಶಿರ್ವ : ಪೊಲೀಸ್‌ ಇಲಾಖೆಯಲ್ಲಿ ಸೇವೆಯಲ್ಲಿದ್ದು, ಮಲಗಿದ್ದಲ್ಲಿಯೇ ಹೃದಯಾಘಾತದಿಂದ ಮೃತಪಟ್ಟ ಉಡುಪಿ ಜಿಲ್ಲಾ ಪೊಲೀಸ್‌ ಅಧೀಕ್ಷಕರ ಕಚೇರಿಯ ವಯರ್‌ಲೆಸ್‌ ಕಂಟ್ರೋಲ್‌ ರೂಂನಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್‌ ಉಪನಿರೀಕ್ಷಕ, ಶಿರ್ವ ನ್ಯಾರ್ಮ ಶ್ರೀ ಧರ್ಮಜಾರಂದಾಯ ದೈವಸ್ಥಾನದ ರಸ್ತೆ ಬದಿಯ ನಿವಾಸಿ ನಿತ್ಯಾನಂದ ಶೆಟ್ಟಿ (51)ಅವರ ಅಂತ್ಯ ಕ್ರಿಯೆಯು ಸಕಲ ಸರಕಾರಿ ಗೌರವಗಳೊಂದಿಗೆ ಸೆ. 18 ರಂದು ಮೃತರ ಮನೆಯ ವಠಾರದಲ್ಲಿ ನಡೆಯಿತು.

Advertisement

ಮಂಗಳೂರು, ಮಲ್ಪೆ ಕರಾವಳಿ ಕಾವಲು ಪಡೆ ಮತ್ತು ಜಿಲ್ಲಾ ಪೊಲೀಸ್‌ ಅಧೀಕ್ಷಕರ ಕಚೇರಿಯ ವಯರ್‌ಲೆಸ್‌ ಕಂಟ್ರೋಲ್‌ ರೂಂ ಸಹಿತ ಪೊಲೀಸ್‌ ಇಲಾಖೆಯಲ್ಲಿ 28 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಅವರು 4 ವರ್ಷಗಳ ಹಿಂದೆ ಪಿಎಸ್‌ಐ ಆಗಿ ಭಡ್ತಿ ಪಡೆದಿದ್ದರು.

ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್‌ ಪಡೆಯ ಎಆರ್‌ಎಸ್‌ಐ ಶಶಿಧರ ನಾಯ್ಕ ನೇತೃತ್ವದಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ 3 ಸುತ್ತು ಕುಶಾಲ ತೋಪುಗಳನ್ನು ಸಿಡಿಸಿ ಮೃತರಿಗೆ ಅಂತಿಮ ನಮನ ಸಲ್ಲಿಸಲಾಯಿತು. ಮೃತರ ಪುತ್ರ ಅಭಿನಂದನ್‌ ಮತ್ತು ಸಹೋದರ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.

ಕಾಪು ಶಾಸಕ ಸುರೇಶ್‌ ಶೆಟ್ಟಿ ಗುರ್ಮೆ,ಉಡುಪಿ ಜಿಲ್ಲಾ ಪೊಲೀಸ್‌ ಅಧೀಕ್ಷಕ ಕೆ. ಅರುಣ್‌ ಕುಮಾರ್‌, ಜಿಲ್ಲಾ ಹೆಚ್ಚುವರಿ ಪೊಲೀಸ್‌ ಅಧೀಕ್ಷಕರಾದ ಜಿ.ಎಸ್‌. ಸಿದ್ಧಲಿಂಗಯ್ಯಮತ್ತು ಪರಮೇಶ್ವರ ಹೆಗಡೆ ,ಕಾರ್ಕಳ ಡಿವೈಎಸ್‌ಪಿ ಅರವಿಂದ ಕಲಗುಜ್ಜಿ ಅಂತಿಮ ನಮನ ಸಲ್ಲಿಸಿ ಮೃತರ ತಾಯಿ,ಪತ್ನಿ,ಮಕ್ಕಳು,ಸಹೋದರ ಮತ್ತು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

Advertisement

ಮಾಜಿ ಶಾಸಕ ಲಾಲಾಜಿ ಆರ್‌. ಮೆಂಡನ್‌, ಜಿಲ್ಲಾ ಪೊಲೀಸ್‌ ಅಧೀಕ್ಷಕರ ಕಚೇರಿಯ ಕಂಟ್ರೋಲ್‌ ರೂಂನ ಪೊಲೀಸ್‌ ಇನ್ಸ್‌ಪೆಕ್ಟರ್‌ ಹೇಮಚಂದ್ರ, ಶಿರ್ವ ಠಾಣೆಯ ಪಿಎಸ್‌ಐ ಸಕ್ತಿವೇಲು. ಇ , ಉಡುಪಿ ಮತ್ತು ಮಂಗಳೂರು ಪೊಲೀಸ್‌ ಅಧೀಕ್ಷಕರ ಕಚೇರಿಯ ವಯರ್‌ಲೆಸ್‌ ಕಂಟ್ರೋಲ್‌ ರೂಂ ನ ಅಧಿಕಾರಿಗಳು, ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್‌ ಪಡೆಯ ಸಿಬಂದಿ, ಶಿರ್ವ ಠಾಣೆಯ ಸಿಬಂದಿ ಮತ್ತಿತರ ಪೊಲೀಸ್‌ ಅಧಿಕಾರಿಗಳು ,ಸರಕಾರಿ ಅಧಿಕಾರಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದು, ಅಂತಿಮ ನಮನ ಸಲ್ಲಿಸಿದರು.

ಮರಣೋತ್ತರ ಪರೀಕ್ಷೆ ಮಾಡದ ಜಿಲ್ಲಾಸ್ಪತ್ರೆ:
ಪೊಲೀಸ್‌ ಅಧಿಕಾರಿಗಳು ಶಿರ್ವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಆಗಮಿಸಿ ತನಿಖೆ ನೆರವೇರಿಸಿದ ಬಳಿಕ ಮರಣೋತ್ತರ ಪರೀಕ್ಷೆಗಾಗಿ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು.ಆದರೆ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರ ಕೊರತೆಯಿಂದ ಮಣಿಪಾಲದ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಜಿಲ್ಲಾ ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಸಿದ್ಧಲಿಂಗಯ್ಯ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ್ದರೂ ಸರಕಾರಿ ಅಧಿಕಾರಿಯೋರ್ವರ ಮರಣೋತ್ತರ ಪರೀಕ್ಷೆ ಮಾಡಲಾಗದ ಜಿಲ್ಲಾಸ್ಪತ್ರೆ ಸಾಮಾನ್ಯ ನಾಗರಿಕರಿಗೆ ಹೇಗೆ ಸ್ಪಂದಿಸಬಹುದು ಎಂದು ಉಡುಪಿ ಸರಕಾರಿ ಜಿಲ್ಲಾಸ್ಪತ್ರೆಯ ಕಾರ್ಯವೈಖರಿಯನ್ನು ನಾಗರಿಕರು ಪ್ರಶ್ನಿಸುವಂತಾಗಿದೆ.

ಇದನ್ನೂ ಓದಿ: B. Y. Vijayendra ಬಗ್ಗೆ ಹಾದಿಯಲ್ಲಿ ಮಾತನಾಡುವುದು ಸಲ್ಲ: ರೇಣುಕಾಚಾರ್ಯ

Advertisement

Udayavani is now on Telegram. Click here to join our channel and stay updated with the latest news.

Next