ಶಿರ್ವ: ಗ್ರಾಮ ಪಂಚಾಯತ್‌ಗಳಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸುವಂತೆ ರಾಜ್ಯ ಸರಕಾರ ನೀಡಿದ ಸೂಚನೆಯಂತೆ ಮಂಗಳವಾರ ಶಿರ್ವ ಗ್ರಾ.ಪಂಚಾಯತ್ ಸಭಾ ಭವನದಲ್ಲಿ ನಡೆಯಬೇಕಿದ್ದ ಗ್ರಾ.ಪಂ.ನ ಪ್ರಗತಿ ಪರಿಶೀಲನಾ ಸಭೆಯನ್ನು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ರದ್ದು ಗೊಳಿಸಲಾಗಿದೆ.
ತಾ.ಪಂ. ಕಾರ್ಯನಿರ್ವಹಣಾಧಿಕಾರಿಯವರು ಕೆಡಿಪಿ ಸಭೆಗೆ ದಿನಾಂಕ ಮತ್ತು ಸಮಯ ನಿಗದಿಪಡಿಸಿದ್ದು , ಸರಕಾರದ 20 ಅಂಶ ಕಾರ್ಯಕ್ರಮಗಳ ತ್ತೈಮಾಸಿಕ ಸಭೆಯಲ್ಲಿ ತಾಲೂಕು,ಹೋಬಳಿ ಹಾಗೂ ಗ್ರಾಮ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿ ಮಾಹಿತಿ ನೀಡಬೇಕಾಗಿತ್ತು. ಆದರೆ ವಿವಿಧ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ತೋರಿ ಸಭೆಯಲ್ಲಿ ಭಾಗವಹಿಸಿರಲಿಲ್ಲ.
ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಖೇದ:
ಅಧಿಕಾರಿಗಳ ನಿರ್ಲಕ್ಷéಕ್ಕೆ ಖೇದ ವ್ಯಕ್ತಪಡಿಸಿದ ಶಿರ್ವ ಗ್ರಾ.ಪಂ. ಅಧ್ಯಕ್ಷ ಕೆ.ಆರ್. ಪಾಟ್ಕರ್ ಮಾತನಾಡಿ ವಿವಿಧ ಇಲಾಖೆಯ ಅಧಿಕಾರಿಗಳಿಗೆ 1 ತಿಂಗಳ ಹಿಂದೆ ಮಾಹಿತಿ ನೀಡಲಾಗಿದ್ದರೂ,26 ಇಲಾಖೆಗಳ ಅಧಿಕಾರಿಗಳು ಭಾಗವಹಿಸಬೇಕಿದ್ದ ಸಭೆಯಲ್ಲಿ ಕೇವಲ 6 ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದಾರೆ. ಕೇವಲ ಕಾಟಾಚಾರಕ್ಕೆ ಪ್ರಗತಿ ಪರಿಶೀಲನಾ ಸಭೆ ನಡೆಸದೆ ಸಭೆಯನ್ನು ಮುಂದೂಡಿರುವುದಾಗಿ ತಿಳಿಸಿ, ಮೇಲಾಧಿಕಾರಿಗಳು ಮತ್ತು ಸರಕಾರದ ಗಮನಕ್ಕೆ ತರುವುದಾಗಿ ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆಯ ರಂಗ, ಅರಣ್ಯ ಇಲಾಖೆಯ ರಶ್ಮಿ,ಗ್ರಾಮ ಕರಣಿಕ ವಿಜಯ್, ಗ್ರಂಥಾಲಯ ಮೇಲ್ವಿಚಾರಕಿ ಅಮ್ಮಿ ,ಅಂಗನವಾಡಿ ಮೇಲ್ವಿಚಾರಕಿ ಶೈಲಾ ಮತ್ತು ಪಡಿತರ ಇಲಾಖೆಯಿಂದ ಪ್ರಸನ್ನ ಭಾಗವಹಿಸಿದ್ದರು.
ಸ್ಥಾಯಿ ಸಮಿತಿಯ ಅಧ್ಯಕ್ಷೆ ವನಿತಾ ಗ್ರಾ.ಪಂ. ಉಪಾಧ್ಯಕ್ಷೆ ಗ್ರೇಸಿ ಕಾಡೋìಜಾ,ಪಂಚಾಯತ್ ಕಾರ್ಯದರ್ಶಿ ಮಂಗಳಾ ಜೆ.ವಿ ವೇದಿಕೆಯಲ್ಲಿದ್ದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅನಂತ ಪದ್ಮನಾಭ ನಾಯಕ್ ಕೆಡಿಪಿ ಸಭೆಯ ಮುಂದಿನ ದಿನಾಂಕವನ್ನು ತಾ.ಪಂ. ಅಧಿಕಾರಿಗಳೊಂದಿಗೆ ಚರ್ಚಿಸಿ ದಿನ ನಿಗದಿ ಪಡಿಸುವುದಾಗಿ ತಿಳಿಸಿ,ವಂದಿಸಿದರು.