Advertisement

ಶಿರೂರ:ಹಂದಿಗಳ ಕಾಟದಿಂದ ಬೆಳೆ ನಾಶ- ರೈತ ಕಂಗಾಲು

02:42 PM Mar 13, 2024 | Team Udayavani |

ಉದಯವಾಣಿ ಸಮಾಚಾರ
ಶಿರೂರ: ಪಟ್ಟಣದಿಂದ ನೀಲಾನಗರಕ್ಕೆ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಕೃಷಿಭೂಮಿಯಲ್ಲಿನ ಬೆಳೆಗಳಿಗೆ ಹಂದಿ (ಕಾಡಹಂದಿಗಳ) ಕಾಟದಿಂದ ಬೆಳೆಹಾನಿಯಾಗಿದ್ದು ಇದರಿಂದ ರೈತರು ಕಂಗಾಲಾಗಿದ್ದಾರೆ.

Advertisement

ಒಂದು ವರ್ಷದಿಂದ ಈ ಹಂದಿಗಳ ಕಾಟದಿಂದ ರೈತರು ಬೇಸತ್ತು ಹೋಗಿದ್ದು, ಭೂಮಿಯಲ್ಲಿನ ತೋಗರಿ, ಜೋಳ, ಕಡಲೆ, ಶೇಂಗಾ, ಕಬ್ಬು ಸೇರಿದಂತೆ ನಾನಾ ಬೆಳೆಗಳು ನಾಶವಾಗಿವೆ. ಈ ಕುರಿತು ರೈತರು ಅರಣ್ಯ ಅಧಿಕಾರಿಗಳ ಗಮನಕ್ಕೆ ತಂದು ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ. ಪರಿಹಾರವು ಮರೀಚಿಕೆಯಾಗಿದೆ. ಒಂದೊದು ಭಾರಿ ಭೂಮಿಗೆ ಬಿತ್ತಿದ ಬೀಜಗಳನ್ನು ಸಹ ತಿಂದು ಹಾಕಿರುವ ಉದಾಹರಣೆಗಳಿವೆ.

ರಾತ್ರಿ ಕಾವಲು ಕಾಯುತ್ತಿರುವ ರೈತರು: ತಮ್ಮ ಬೆಳೆಗಳನ್ನು ಉಳಿಸಿಕೊಳ್ಳಲು ನಾಯಿಗಳೊಂದಿಗೆ ರೈತರು ರಾತ್ರಿಇಡಿ ನಿದ್ದೆಗೆಟ್ಟು ಕಾವಲುಕಾಯುವಂತಾಗಿದೆ. ನಿತ್ಯ ರಾತ್ರಿ ಇದೊಂದು ಕೆಲಸವಾಗಿದೆ. ಸಾವಿರಾರು ಸಾಲ ಮಾಡಿ ಬಿತ್ತನೆ ಮಾಡಿದ ಕಾಡಹಂದಿಗಳ ಪಾಲಾಗುತ್ತಿದೆ. ಗುಡ್ಡದಿಂದ ರಾತ್ರಿ ಏಕಾಏಕಿ 50ಕ್ಕೂ ಹೆಚ್ಚು ಇರುವ ಹಂದಿಗಳ ಗುಂಪು ಕೃಷಿಭೂಮಿಗಳಿಗೆ ದಾಳಿ ಮಾಡುತ್ತಿದ್ದು, ಸದ್ಯ ರಾಶಿಗೆ ಬಂದಿರುವ ಶೇಂಗಾ ಬೆಳೆ ಹಂದಿಗಳ ಪಾಲಾಗುತ್ತಿದೆ. ಒಮ್ಮೊಮ್ಮೆ ಜನರ ಮೇಲೆ ಕಾಡಹಂದಿಗಳು ದಾಳಿ ಮಾಡಿವೆ ಎನ್ನುತ್ತಾರೆ ರೈತರು.

ಅಧಿಕಾರಿಗಳು ರಕ್ಷಣೆ ಮಾಡಿ: ಅರಣ್ಯ ಇಲಾಖೆ
ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಜನಪ್ರತಿನಿಧಿಗಳು ರೈತರ ಕಷ್ಟವನ್ನು ಅರಿತು ಶಾಶ್ವತವಾದ ಸಮಸ್ಯೆಗೆ ಮುಂದಾಗಿ ರೈತರ ಬೆಳೆ ರಕ್ಷಣೆ ಮಾಡಬೇಕೆಂದು ನೊಂದ ರೈತರು ಒತ್ತಾಯಿಸಿದ್ದಾರೆ.

ಕಾಡಹಂದಿಗಳ ಕಾಟದಿಂದ ರೈತರಿಗೆ ಕಷ್ಟವಾಗಿದ್ದು, ನಮ್ಮ ಕೃಷಿಭೂಮಿಗೆ ನಾವೇ ತೆರಳಲು ಹೆದರಿಕೆಯಾಗುತ್ತದೆ. ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ನಾಶವಾದ ಬೆಳೆಗಳಿಗೆ ಪರಿಹಾರ ಕೊಡಬೇಕು. ಹಂದಿಗಳನ್ನು ಬೇರೆಡೆ ಕಳುಹಿಸಬೇಕು.
*ಮೊಹಮ್ಮದ ಹಳದೂರ, ಶಿರೂರ ರೈತ

Advertisement

ಈ ಹಂದಿ ಕಾಟದ ಸಮಸ್ಯೆಯನ್ನು ಹಾಗೂ ರೈತರಿಗಾದ ಬೆಳೆ ಹಾನಿಯ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಹಂದಿ ಕಾಟ ತಪ್ಪಿಸಲು ಕೆಲವೇ ದಿನಗಳಲ್ಲಿ ಶಿರೂರ ಗುಡ್ಡದಿಂದ ನೀಲಾನಗರದವರೆಗೂ ತಂತಿ ಬೇಲಿ ಹಾಕಲು ಕ್ರಮ ಕೈಗೊಂಡಿದ್ದು, ಹಾನಿಯಾದ ಬೆಳೆಗೆ ಪರಿಶೀಲನೆ ಮಾಡಿ ಪರಿಹಾರ ನೀಡುವುದಾಗಿ ತಿಳಿಪಡಿಸಿದ್ದಾರೆ.
*ಅಮೀನಸಾಬ ಗುಜರಾತಿ, ಗಸ್ತು ಅರಣ್ಯ ಪಾಲಕ ಶಿರೂರ

*ಶಂಕರ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next