ಬೈಂದೂರು: ಮಳೆಗಾಲ ಶುರುವಾಗಲು ಬೆರಳೆಣಿಕೆ ದಿನವಷ್ಟೇ ಇದೆ. ಮುಂಗಾರಿನ ಸೂಚನೆ ಈಗಾಗಲೇ ಸಿಕ್ಕಿದೆ. ಆದರೆ ಶಿರೂರಿನಿಂದ -ಕುಂದಾಪುರ ಚತುಷ್ಪಥ ಹೆದ್ದಾರಿಯಲ್ಲಿ ಈ ವರ್ಷವೂ ಸಮಸ್ಯೆಗಳು ಮರುಕಳಿಸಬಹುದೇ ಎಂಬ ಆತಂಕ ಸವಾರರಿಗೆ ಕಾಡಿದೆ. ಪೂರ್ಣಗೊಳ್ಳದ
ಚರಂಡಿ ಕಾಮಗಾರಿ
ತಲ್ಲೂರು, ಹೆಮ್ಮಾಡಿ, ನಾಗೂರು, ಉಪ್ಪುಂದ,ಶಿರೂರು ಸೇರಿದಂತೆ ಬಹುತೇಕ ಕಡೆಗಳಲ್ಲಿ ರಸ್ತೆ ಪೂರ್ಣಗೊಂಡಿದೆ. ಆದರೆ ಇಕ್ಕೆಲಗಳಲ್ಲಿ ನೀರು ಹೋಗಲು ಸಮರ್ಪಕ ಕ್ರಮಕೈಗೊಂಡಿಲ್ಲ. ಇದರಿಂದ ನೀರು ಹರಿಯಲಾರದೆ ಹೊಲಗದ್ದೆ, ಮನೆಗಳ ಆವರಣಗಳಿಗೆ ನುಗ್ಗುವ ಸಾಧ್ಯತೆಗಳಿವೆ. ಪ್ರತಿ ವರ್ಷ ಈ ಸಮಸ್ಯೆ ಕಾಡುತ್ತಿದ್ದು ಮಳೆಗಾಲ ಬಂತೆಂದರೆ ಹೆದ್ದಾರಿ ಸಮೀಪದ ನಿವಾಸಿಗಳು ಆತಂಕದಿಂದಲೇ ದಿನ ಕಳೆಯುವಂತಾಗಿದೆ.
ತಿರುವುಗಳದ್ದೂ ಸಮಸ್ಯೆ
ಮಳೆಗಾಲದಲ್ಲಿ ಬೈಂದೂರು ಜಂಕ್ಷನ್, ಯಡ್ತರೆ ಜಂಕ್ಷನ್,ಉಪ್ಪುಂದ, ಅರೆಹೊಳೆ ಕ್ರಾಸ್ ಮುಂತಾದ ಕಡೆ ತಿರುವುಗಳು ಸಮಸ್ಯೆಯಾಗಿ ಕಾಡುತ್ತವೆ. ಬೈಂದೂರಿನಂತಹ ಪ್ರದೇಶಗಳಲ್ಲಿ ಎರಡು ಮೂರು ರಸ್ತೆಗಳನ್ನು ದಾಟಿ ಹೋಗಬೇಕಾದ ಕಾರಣ ವಾಹನಗಳು ಬರುವುದೇ ಗೊತ್ತಾಗದಂತಿದೆ. ಜತೆಗೆ ಸುತ್ತಮುತ್ತ ಕೃಷಿ ಭೂಮಿಗಳಿಗೆ ಶೇಡಿಮಣ್ಣು ಹರಿದು ಹೋಗದಂತೆ ಗಮನಹರಿಸಬೇಕಾಗಿದೆ.
ಸೂಚನೆ ನೀಡಲಾಗಿದೆ
ಹೆದ್ದಾರಿ ಸಮಸ್ಯೆ ಕುರಿತು ಈಗಾಗಲೇ ಸಂಸದರ ಜೊತೆ ಚರ್ಚೆ ನಡೆಸಿ ಸದ್ಯದಲ್ಲೇ ಸಭೆ ಕರೆಯಲಾಗುತ್ತದೆ.ಅನೇಕ ಕಡೆಗಳಲ್ಲಿ ಅವ್ಯವಸ್ಥೆಗಳಿವೆ.ಪ್ರಯಾಣಿಕರಿಗೆ ತೊಂದರೆಯಾಗಿರುವುದು ಗಮನಕ್ಕೆ ಬಂದಿದೆ.ಚರಂಡಿ ವ್ಯವಸ್ಥೆ ಇಲ್ಲದಿರುವುದು ಮಳೆಗಾಲದಲ್ಲಿ ಸಮಸ್ಯೆಗೆ ಕಾರಣವಾಗಿದೆ. ಕಾಮಗಾರಿ ನಡೆಸುವ ಕಂಪೆನಿ ಅಧಿಕಾರಿಗಳಿಗೆ ಮುನ್ನೆಚ್ಚರಿಕೆ ವಹಿಸಲು ತಿಳಿಸಿದ್ದೇವೆ.
-ಬಿ.ಎಂ.ಸುಕುಮಾರ ಶೆಟ್ಟಿ, ಶಾಸಕರು ಬೈಂದೂರು ವಿಧಾನಸಭಾ ಕ್ಷೇತ್ರ
– ಅರುಣ್ ಕುಮಾರ್ ಶಿರೂರು