Advertisement

ಶೀರೂರು ಮಠಕ್ಕೆ ಉತ್ತರಾಧಿಕಾರಿ ವಿಚಾರ: ಹೈಕೋರ್ಟ್‌ ತೀರ್ಪಿಗೆ ಹರ್ಷ, ಮಠಾಧೀಶರ ಸ್ವಾಗತ

01:48 AM Sep 30, 2021 | Team Udayavani |

ಉಡುಪಿ: ಶೀರೂರು ಮಠಕ್ಕೆ ಸೋದೆ ಮಠಾಧೀಶರು ಮಾಡಿದ ಉತ್ತರಾಧಿಕಾರಿ ನೇಮಕವನ್ನು ಪ್ರಶ್ನಿಸಿದ ಅರ್ಜಿಯನ್ನು ವಜಾಗೊಳಿಸಿದ ಉಚ್ಚ ನ್ಯಾಯಾಲಯದ ತೀರ್ಪನ್ನು ವಿವಿಧ ಮಠಾಧೀಶರು ಸ್ವಾಗತಿಸಿದ್ದಾರೆ. ಭಕ್ತರು ರಥಬೀದಿಯಲ್ಲಿ ಬುಧವಾರ ಸಿಹಿ ಹಂಚಿ ಸಂಭ್ರಮ ವ್ಯಕ್ತಪಡಿಸಿದರು.

Advertisement

ಇದೊಂದು ಉತ್ತಮ ನಿರ್ಣಯವಾಗಿದೆ ಎಂದು ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಹರ್ಷ ವ್ಯಕ್ತಪಡಿಸಿದ್ದಾರೆ.

ಬಾಲ ಸನ್ಯಾಸವಲ್ಲ
ಹಿಂದೆ ಎಂಟು ವರ್ಷಕ್ಕೆ ಪ್ರಾಯಪ್ರಬುದ್ಧನಾಗುವ ಕ್ರಮವಿತ್ತು. ಅಣಿ ಮಾಂಡವ್ಯರೆಂಬ ಋಷಿಗಳು ಇದನ್ನು 13ಕ್ಕೆ ಏರಿಸಿದರು ಎಂಬುದು ಮಹಾಭಾರತ ಗ್ರಂಥದಲ್ಲಿ ಬರುತ್ತವೆ. 13 ವರ್ಷವಾದರೆ ಆತನಿಗೆ ತಿಳಿವಳಿಕೆ ಮೂಡುತ್ತದೆ ಎಂಬುದು ಧಾರ್ಮಿಕ ದೃಷ್ಟಿಯಾಗಿದೆ. 13 ವರ್ಷ ಮೀರಿದರೆ ಬಾಲ ಸನ್ಯಾಸ ಎಂದಾಗುವುದಿಲ್ಲ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹೇಳಿದ್ದಾರೆ.

ಇದನ್ನೂ ಓದಿ:ಕೋವಿಡ್‌ ಬದಲು ರೇಬೀಸ್‌ ಲಸಿಕೆ; ಡಾಕ್ಟರ್‌, ನರ್ಸ್‌ ಅಮಾನತು

ನ್ಯಾಯಕ್ಕೆ ಸಂದ ಜಯ
ದ್ವಂದ್ವ ಮಠಾಧೀಶರ ನೆಲೆಯಲ್ಲಿ ನಾವು ಶೀರೂರು ಮಠದ ಆಡಳಿತವನ್ನು ಸರಿಸುಮಾರು ಎರಡು ಮುಕ್ಕಾಲು ವರ್ಷಗಳ ಕಾಲ ನಿರ್ವಹಿಸಿ ಕಳೆದ ಮೇ ತಿಂಗಳಿನಲ್ಲಿ ಒಬ್ಬ ಯೋಗ್ಯವಟುವಿಗೆ ಶ್ರೀ ವೇದವರ್ಧನತೀರ್ಥರು ಎಂಬ ನಾಮಾಂಕಿತದಿಂದ ಸನ್ಯಾಸ ದೀಕ್ಷೆ ನೀಡಿ ಪೀಠಾಧಿಪತಿಯನ್ನಾಗಿ ನೇಮಿಸಿದ್ದೆವು. ಈ ಕಾರ್ಯವನ್ನು ಪ್ರಶ್ನಿಸಿ ಉಚ್ಚ ನ್ಯಾಯಾಲಯದಲ್ಲಿ ದಾಖಲಿಸಲ್ಪಟ್ಟ ರಿಟ್‌ ಅರ್ಜಿಯನ್ನು ನ್ಯಾಯಾಲಯವು ಸುದೀರ್ಘ‌ವಾಗಿ ವಿಮರ್ಶಿಸಿ ತಿರಸ್ಕರಿಸಿರುವುದು ನ್ಯಾಯಕ್ಕೆ ಸಂದ ಜಯವಾಗಿರುತ್ತದೆ. 800 ವರ್ಷಗಳಿಂದ ನಡೆದು ಬಂದ ಶ್ರೀ ಮಧ್ವಾಚಾರ್ಯರು ಹಾಕಿಕೊಟ್ಟ ಸಂಪ್ರದಾ ಯಕ್ಕೆ ನ್ಯಾಯಪೀಠವು ಮುದ್ರೆ ಯೊತ್ತಿ ಎತ್ತಿಹಿಡಿದಿರುವುದು ನಮಗೆ ಅತೀವ ಸಂತೋಷವಾಗಿದೆ. ನಾವು ಈ ಹಿಂದೆಯೇ ಹೇಳಿದಂತೆ ಎಲ್ಲ ಸಂದರ್ಭಗಳಲ್ಲಿಯೂ ನಮ್ಮ ಕಾರ್ಯಚಟುವಟಿಕೆಗಳ ಪಾರದರ್ಶಕತೆಗೆ ನಾವು ಆರಾಧಿಸುತ್ತಿರುವ ಶ್ರೀಕೃಷ್ಣ ಮುಖ್ಯಪ್ರಾಣ, ನಮ್ಮ ಮಠದ ಪಟ್ಟದ ದೇವರಾದ ಶ್ರೀಭೂವರಾಹ, ಹಯಗ್ರೀವ ದೇವರು ಮತ್ತು ವಾದಿರಾಜರು, ಭೂತರಾಜರುಗಳೇ ಸಾಕ್ಷಿಯಾಗಿದ್ದಾರೆ ಎಂದು ಪುನರುಚ್ಚರಿಸುತ್ತೇವೆ ಎಂದು ಸೋದೆ ಮಠದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next