Advertisement

ಶೀರೂರು ಮಠ: ತೀರ್ಪು ಕಾದಿರಿಸಿದ ಹೈಕೋರ್ಟ್‌

10:38 PM Sep 23, 2021 | Team Udayavani |

ಬೆಂಗಳೂರು: ಉಡುಪಿಯ ಶೀರೂರು ಮಠದ ಪೀಠಾಧಿಪತಿಯಾಗಿ ಅಪ್ರಾಪ್ತ ವಯಸ್ಕನನ್ನು ನೇಮಿಸಿರುವ ಕ್ರಮವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕುರಿತ ತೀರ್ಪನ್ನು ಹೈಕೋರ್ಟ್‌ ಕಾದಿರಿಸಿದೆ.

Advertisement

ಶಿರೂರು ಮಠ ಭಕ್ತ ಸಮಿತಿ ಕಾರ್ಯದರ್ಶಿ ಪಿ. ಲಾತವ್ಯ ಆಚಾರ್ಯ ಸಹಿತ ನಾಲ್ವರು ಸಲ್ಲಿಸಿರುವ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾ| ಸತೀಶ್‌ ಚಂದ್ರ ಶರ್ಮ ನೇತೃತ್ವದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಕೀಲ ಡಿ.ಆರ್‌. ರವಿ ಶಂಕರ್‌ ವಾದ ಮಂಡಿಸಿ,  ಅಪ್ರಾಪ್ತ ವಯಸ್ಕರನ್ನು ಸನ್ಯಾಸಿಯಾಗಿ ನೇಮಿಸುವಂತಿಲ್ಲ. ಅವರ ಪೀಠಾಧಿಕಾರಿ ಹೊಣೆ ಹೊರಿಸಬಾರದು ಮತ್ತು ವೈರಾಗ್ಯವನ್ನು ಹೇರಬಾರದು. ಮಠಕ್ಕೆ ನಡೆದುಕೊಳ್ಳುವವರನ್ನು ಮಾತ್ರ ಪೀಠಾಧಿಪತಿಯಾಗಿ ನೇಮಿಸಬಹುದು. ಆದರೆ, ಹಾಲಿ ಪೀಠಾಧಿಪತಿ ಶಿರೂರು ಮಠಕ್ಕೆ ನಡೆಕೊಂಡವರಲ್ಲ. ಅವರು ಸೋದೆ ವಾದಿರಾಜ ಮಠದ ಅನುಯಾಯಿಯೊಬ್ಬರ ಪುತ್ರರಾಗಿದ್ದಾರೆ ಎಂದರು.

ಸೋದೆ  ಮಠದ ಪರ ವಕೀಲರು ವಾದ ಮಂಡಿಸಿ, ಉಡುಪಿಯ ಅಷ್ಟ ಮಠಗಳನ್ನು ದ್ವಂದ್ವ ಮಠಗಳಾಗಿ ನಾಲ್ಕು ಜತೆ ಮಾಡಲಾಗಿದೆ. ಶೀರೂರು ಹಾಗೂ ಸೋದೆ ಮಠಗಳು ದ್ವಂದ್ವ ಮಠಗಳಾಗಿವೆ. ದ್ವಂದ್ವ ಮಠಗಳಲ್ಲಿ ಯಾವುದೇ ಒಂದು ಮಠದ ಪೀಠಾಧಿಪತಿ ಮೃತಪಟ್ಟಾಗ ಅಥವಾ ಇತರ ಕಾರಣಗಳಿಂದ ಅವರು ಪೀಠಾಧಿಪತಿಯಾಗಿ ಮುಂದುವರಿಯಲು ಸಾಧ್ಯವಾಗದಿದ್ದಾಗ, ಅದಕ್ಕೆ ಪೀಠಾಧಿಪತಿಯನ್ನು ನೇಮಕ ಮಾಡುವ ಎಲ್ಲ ಅಧಿಕಾರ ಮತ್ತೂಂದು ಮಠದ ಪೀಠಾಧಿಪತಿಗೆ ಇರುತ್ತದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಪ್ರಕರಣದಲ್ಲಿ ನ್ಯಾಯಾಲಯಕ್ಕೆ ನೆರವು ಅಮೈಕಸ್‌ ಕ್ಯೂರಿ ನೇಮಕಗೊಂಡಿರುವ ಹಿರಿಯ ವಕೀಲ ಎಸ್‌.ಎಸ್‌. ನಾಗಾನಂದ್‌, ಉಡುಪಿಯ ಎಂಟು ಮಾಧ್ವ ಮಠಗಳಿಗೆ ಪೀಠಾಧಿಪತಿ ನೇಮಕ ಮಾಡುವ ಕುರಿತು ಸಂಪ್ರದಾಯ ಹಾಗೂ ನಿಯಮ ಮಾಡಲಾಗಿದೆ. ಒಂದು ಮಠಕ್ಕೆ ಪೀಠಾಧಿಪತಿ ಇಲ್ಲದಿದ್ದಾಗ ಅದಕ್ಕೆ ಮತ್ತೂಂದು ಮಠ ಉತ್ತರಾಧಿಕಾರಿ ನೇಮಕ ಮಾಡುತ್ತದೆ. ಆ ಪ್ರಕಾರ ಶಿರೂರು ಮಠಕ್ಕೆ ದ್ವಂದ್ವ ಮಠವಾಗಿ ಸೋದೆ ವಾದಿರಾಜರ ಮಠವಿದೆ. ಶಿರೂರು ಮಠದ ಪೀಠಾಧಿಪತಿ ದೈವಾಧೀನರಾಗಿದ್ದು, ಆಗ ಉತ್ತರಾಧಿಕಾರಿ ಇರಲಿಲ್ಲ. ಆಗ ಸೋದೆ  ಮಠ ನಿಯಮಾನುಸಾರ  ಶೀರೂರು ಮಠಕ್ಕೆ ಪೀಠಾಧಿಪತಿಗಳನ್ನು ನೇಮಿಸಿದೆ ಎಂದು ತಿಳಿಸಿದರು.

Advertisement

ಅಲ್ಲದೆ, ಅಪ್ರಾಪ್ತ ವಯಸ್ಕರನ್ನು ಪೀಠಾಧಿಪತಿಯಾಗಿ ನೇಮಿಸಿದ್ದಾರೆಂಬ ಅರ್ಜಿದಾರರ ಆಕ್ಷೇಪವನ್ನು ಪರಿಗಣಿಸುವ ಅಗತ್ಯವಿಲ್ಲ. ಇಂಡಿಯನ್‌ ಮೆಜಾರಿಟಿ  ಆ್ಯಕ್ಟ್ ಪ್ರಕಾರ 18 ವರ್ಷದವರನ್ನು ಪ್ರಾಪ್ತ ವಯಸ್ಕರು ಎನ್ನಲಾಗುತ್ತದೆ. ಆದರೆ, ಧಾರ್ಮಿಕ ವಿಷಯಗಳಿಗೆ ಬಂದಾಗ 14 ವರ್ಷ ವಯಸ್ಸನ್ನು ಪರಿಗಣಿಸಲಾಗುತ್ತದೆ. ಶಾಸ್ತ್ರಗಳು ಹಾಗೂ ಶ್ಲೋಕಗಳ ಪ್ರಕಾರ 14 ವರ್ಷ ದಾಟಿದವರು ವೈರಾಗ್ಯ ನಿರ್ಧಾರ ಕೈಗೊಳ್ಳಬಹುದು. ಬೌದ್ಧ ಧರ್ಮದವರಲ್ಲಿ ಚಿಕ್ಕ ಮಕ್ಕಳಿಗೇ ಸನ್ಯಾಸ ನೀಡಲಾಗುತ್ತದೆ. ಶೀರೂರು ಮಠಕ್ಕೆ ಮಠಾಧಿಪತಿ ಆಗಿರುವವರಿಗೆ 17 ವರ್ಷ. ತಂದೆ ಪಿಎಚ್‌.ಡಿ. ಪದಿವೀಧರರಾಗಿದ್ದು,   ತಾಯಿಯೂ ವಿದ್ಯಾವಂತೆ. ಮಗನಿಗೂ ವಿರಕ್ತಿಯಲ್ಲಿ ಆಸಕ್ತಿಯಿದೆ. ಆ ಪ್ರಕಾರವೇ ಸನ್ಯಾಸ ದೀಕ್ಷೆ ನೀಡಲಾಗಿದೆ. ಈ ಪ್ರಕ್ರಿಯೆಯಲ್ಲಿ ಲೋಪವೇನೂ ಆಗಿಲ್ಲ ಎಂದು ವಿವರಿಸಿದರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next