ಶಿರಸಿ : ಅಡಿಕೆಗೆ ದರ ಏರುಮುಖವಾದ ಬೆನ್ನಲ್ಲೇ ಅಡಿಕೆ ಮರದಿಂದಲೇ ಹಸಿ ಅಡಿಕೆ ಕೊನೆ ಕಳ್ಳತನ ಮಾಡುತ್ತಿದ್ದ ಪ್ರಕರಣಗಳ ಬೆನ್ನಲ್ಲೇ ಶಿರಸಿ ಬ್ಯಾಗದ್ದೆಯಲ್ಲಿ ಅಡಿಕೆ ಕದ್ದ ಚೋರರು ಬನವಾಸಿ ಪೊಲೀಸರ ಇಕ್ಕಳಕ್ಕೆ ಸಿಕ್ಕಿ ಬಿದ್ದಿದ್ದಾರೆ.
ಬ್ಯಾಗದ್ದೆಯ ನಿವಾಸಿ ಆದಿತ್ಯಾ ಗೋಪಾಲಕೃಷ್ಣ ನಾಯ್ಕ, ಶಿರಸಿಯ ಕಾರ್ತಿಕ ಸತೀಶ ರೇವಣಕರ್ ಬಂಧಿತ ಆರೋಪಿಗಳು. ಬಂಧಿತರಿಂದ 10 ಸಾವಿರ ರೂ ಮೌಲ್ಯದ ಒಂದುವರೆ ಕ್ವಿಂಟಾಲ್ ಹಸಿ ಅಡಿಕೆ ಹಾಗೂ ಕಳ್ಳತನಕ್ಕೆ ಬಳಸಿದ ವಾಹನ ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಕಳೆದ ಕೆಲವು ದಿನಗಳ ಹಿಂದೆ ಬನವಾಸಿ ಪೊಲೀಸ್ ಠಾಣೆ ವ್ಯಾಪ್ತಿಯ ಬಗ್ಗಿಸರ ಹಾಗೂ ಬ್ಯಾಗದ್ದೆ ವ್ಯಾಪ್ತಿಯಲ್ಲಿ ಅಡಿಕೆ ಕದ್ದೊಯ್ದ ಬಗ್ಗೆ ದೂರು ದಾಖಲಾಗಿತ್ತು. ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಬನವಾಸಿ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಪ್ರಕರಣದಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ ಸುಮನ್ ಡಿ ಪನ್ನೇಕರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಬದ್ರಿನಾಥ ಎಸ್, ಶಿರಸಿ ಡಿಎಸ್ಪಿ ರವಿ ಡಿ ನಾಯ್ಕ, ಸಿಪಿಐ ರಾಮಚಂದ್ರ ನಾಯಕ, ರವರ ಮಾರ್ಗದರ್ಶನದಲ್ಲಿ, ಬನವಾಸಿ ಠಾಣೆಯ ಕಾನೂನು ಸುವ್ಯಸ್ಥಿತ ಪಿಎಸ್‌ಐ ಹಣಮಂತ ಬಿರಾದಾರ ನೇತೃತ್ವದಲ್ಲಿ ಠಾಣೆಯ ಸಿಬ್ಬಂದಿಯವರಾದ ಶಿವರಾಜ ಎಸ್, ಮಂಜುನಾಥ ಬಿ., ಚರಣ ಎನ್ ನಾಯ್ಕ , ಮಂಜುನಾಥ ಡಿ.ಎನ್, ಹಾಗೂ ಶಿರಸಿ ಶಹರ ಪೊಲೀಸ್ ಠಾಣೆಯ ಪ್ರಶಾಂತ ಪಾವಸ್ಕರ ಆರೋಪಿಗಳ ಬಂಧಿಸುವ ಕಾರ್ಯಾಚರಣೆಯಲ್ಲಿ ಭಾಗಿಯಾದ್ದರು.
ಈ ಮಧ್ಯೆ ಗ್ರಾಮೀಣ ಭಾಗದಲ್ಲಿ ಅಡಿಕೆ ರಕ್ಷಣೆಗೆ ತೋಟಗಾವಲು ಪಡೆ ಗ್ರಾಮಸ್ಥರ ರಾತ್ರಿ ಕಾವಲು ಕೂಡ ಶುರುವಾಗಿದೆ.